ADVERTISEMENT

ತಮಿಳುನಾಡು ಬಂದ್‌ ಶಾಂತಿಯುತ

ತೂತ್ತುಕುಡಿ ಗಲಭೆ: ಸಿ.ಎಂ ರಾಜೀನಾಮೆಗೆ ಒತ್ತಾಯ

ಪಿಟಿಐ
Published 25 ಮೇ 2018, 19:30 IST
Last Updated 25 ಮೇ 2018, 19:30 IST
ತಮಿಳುನಾಡು ಬಂದ್‌ ಪ್ರಯುಕ್ತ ಚೆನ್ನೈಯಲ್ಲಿ ನಡೆದ ಮೆರವಣಿಗೆಯಲ್ಲಿ ಡಿಎಂಕೆ ಸಂಸದೆ ಕನಿಮೋಳಿ, ವಿಸಿಕೆ ಮುಖಂಡ ತಿರುಮವಾಲವನ್‌ ಭಾಗವಹಿಸಿದ್ದರು  ಪಿಟಿಐ ಚಿತ್ರ
ತಮಿಳುನಾಡು ಬಂದ್‌ ಪ್ರಯುಕ್ತ ಚೆನ್ನೈಯಲ್ಲಿ ನಡೆದ ಮೆರವಣಿಗೆಯಲ್ಲಿ ಡಿಎಂಕೆ ಸಂಸದೆ ಕನಿಮೋಳಿ, ವಿಸಿಕೆ ಮುಖಂಡ ತಿರುಮವಾಲವನ್‌ ಭಾಗವಹಿಸಿದ್ದರು ಪಿಟಿಐ ಚಿತ್ರ   

ಚೆನ್ನೈ: ತೂತ್ತುಕುಡಿಯಲ್ಲಿ ಪೊಲೀಸ್‌ ಗೋಲಿಬಾರ್‌ಗೆ 13 ಮಂದಿ ಬಲಿಯಾಗಿರುವುದನ್ನು ಖಂಡಿಸಿ ಶುಕ್ರವಾರ ನಡೆದ ತಮಿಳುನಾಡು ಬಂದ್‌ ಶಾಂತಿಯುತವಾಗಿತ್ತು. ಮುಖ್ಯಮಂತ್ರಿ ಪಳನಿಸ್ವಾಮಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಡಿಎಂಕೆ ನೇತೃತ್ವದಲ್ಲಿ ವಿರೋಧ ಪಕ್ಷಗಳು ಬಂದ್‌ಗೆ ಕರೆ ನೀಡಿದ್ದವು.

ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳಾದ ಕಾಂಗ್ರೆಸ್‌, ಐಯುಎಂಎಲ್‌, ಎಂಎಂಕೆ ಹಾಗೂ ಎಂಡಿಎಂಕೆ, ವಿಸಿಕೆ, ಸಿಪಿಐ, ಸಿಪಿಎಂ ಕಾರ್ಯಕರ್ತರು ತಮಿಳುನಾಡು ಮತ್ತು ನೆರೆಯ ಪುದುಚೇರಿಯ ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರಿ ಸ್ವಾಮ್ಯದ ನಿಗಮಗಳ ಬಸ್‌ ಸೇವೆಗಳು, ಆಟೊ, ಟ್ಯಾಕ್ತಿ ಮತ್ತು ರೈಲು ಸೇವೆಗಳು ಲಭ್ಯವಿದ್ದವು. ಬ್ಯಾಂಕು, ಹೋಟೆಲು, ಮಳಿಗೆಗಳು ಮತ್ತು ಮಾರುಕಟ್ಟೆಗಳು ತೆರೆದಿದ್ದವು. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಕಚೇರಿಗಳಲ್ಲಿ ಹಾಜರಾತಿ ಎಂದಿನಂತೆಯೇ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಕನ್ಯಾಕುಮಾರಿ, ತಿರುನೆಲ್ವೇಲಿ, ತೂತ್ತುಕುಡಿ, ಕೊಯಮತ್ತೂರು, ತಿರುಪೂರ್‌ ಮತ್ತು ತಿರುವರೂರ್‌ ಜಿಲ್ಲೆಗಳಲ್ಲಿ ಬಂದ್‌ ಕರೆಗೆ ಹೆಚ್ಚಿನ ಸ್ಪಂದನೆ ವ್ಯಕ್ತವಾಗಿತ್ತು. ಈ ಜಿಲ್ಲೆಗಳಲ್ಲಿ ಅಂಗಡಿ ಮತ್ತು ಇತರ ವಾಣಿಜ್ಯ ಸಂಸ್ಥೆಗಳು ಮುಚ್ಚಿದ್ದವು. ಆದರೆ ಸಾರ್ವಜನಿಕ ಸಾರಿಗೆ ಎಂದಿನಂತೆಯೇ ಇತ್ತು.

ಪುದುಚೇರಿಯಲ್ಲಿ ಬಂದ್‌: ಕಾಂಗ್ರೆಸ್‌ ನೇತೃತ್ವದ ಸರ್ಕಾರ ಇರುವ ಪುದುಚೇರಿಯಲ್ಲಿ ಬಂದ್‌ನಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಬಸ್‌ಗಳು, ಆಟೊ, ಖಾಸಗಿ ವಾಹನ ಸಂಚಾರ ಇರಲಿಲ್ಲ.

ಸಹಜ ಸ್ಥಿತಿಗೆ ತೂತ್ತುಕುಡಿ: ತೂತ್ತುಕುಡಿಯಲ್ಲಿ ಶುಕ್ರವಾರ ಯಾವುದೇ ಹಿಂಸಾಕೃತ್ಯ ವರದಿಯಾಗಿಲ್ಲ. ಆಯ್ದ ಕೆಲವು ಕಡೆಗಳಿಗೆ ಬಸ್‌ ಸಂಚಾರ ಆರಂಭಿಸಲಾಗಿದೆ. ಆದರೆ ಈ ಬಸ್‌ಗಳಿಗೆ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.

ತರಕಾರಿ ಮತ್ತಿತರ ಮಾರುಕಟ್ಟೆಗಳು ತೆರೆದಿವೆ. ಹಾಗಿದ್ದರೂ ಈ ಪ್ರದೇಶದ ಮೇಲೆ ಹೇರಲಾಗಿರುವ ನಿಷೇಧಾಜ್ಞೆ ಮುಂದುವರಿದಿದೆ.

28ಕ್ಕೆ ‘ಸುಪ್ರೀಂ’ನಲ್ಲಿ ಅರ್ಜಿ ವಿಚಾರಣೆ?: ತೂತ್ತುಕುಡಿ ಪೊಲೀಸ್‌ ಗೋಲಿಬಾರ್‌ ಬಗ್ಗೆ ನ್ಯಾಯಾಲಯದ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಯಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಯನ್ನು ಸೋಮವಾರ (ಮೇ 28) ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ವಕೀಲ ಜಿ.ಎಸ್‌. ಮಣಿ ಎಂಬವರು ತೂತ್ತುಕುಡಿ ಹಿಂಸಾಚಾರಕ್ಕೆ ಸಂಬಂಧಿಸಿ ತುರ್ತು ವಿಚಾರಣೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಶುಕ್ರವಾರವೇ ವಿಚಾರಣೆಗೆ ಎತ್ತಿಕೊಳ್ಳುವಂತೆ ಅವರು ಒತ್ತಾಯಿಸಿದರು.

**‌

28ಕ್ಕೆ ‘ಸುಪ್ರೀಂ’ನಲ್ಲಿ ಅರ್ಜಿ ವಿಚಾರಣೆ?

(ನವದೆಹಲಿ ವರದಿ): ತೂತ್ತುಕುಡಿ ಪೊಲೀಸ್‌ ಗೋಲಿಬಾರ್‌ ಬಗ್ಗೆ ನ್ಯಾಯಾಲಯದ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಯಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಯನ್ನು ಸೋಮವಾರ (ಮೇ 28) ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ವಕೀಲ ಜಿ.ಎಸ್‌. ಮಣಿ ಎಂಬವರು ತೂತ್ತುಕುಡಿ ಹಿಂಸಾಚಾರಕ್ಕೆ ಸಂಬಂಧಿಸಿ ತುರ್ತು ವಿಚಾರಣೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಶುಕ್ರವಾರವೇ ವಿಚಾರಣೆಗೆ ಎತ್ತಿಕೊಳ್ಳುವಂತೆ ಅವರು ಒತ್ತಾಯಿಸಿದರು.

ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿ‌ಲ್ಕರ್‌ ಮತ್ತು ಇಂದೂ ಮಲ್ಹೋತ್ರಾ ಅವರ ಪೀಠವು ಅರ್ಜಿಯನ್ನು ಸೋಮವಾರದ ತುರ್ತು ವಿಚಾರಣೆಯ ಪಟ್ಟಿಗೆ ಸೇರಿಸಲು ಕೋರುವಂತೆ ಮಣಿ ಅವರಿಗೆ ಸೂಚಿಸಿತು. ಆದರೆ, ‘ಇದು ಅತ್ಯಂತ ಗಂಭೀರ ವಿಚಾರ’ ಎಂದು ಮಣಿ ತಮ್ಮ ವಾದ ಮುಂದುವರಿಸಿದರು. ‘ಎಲ್ಲ ವಿಚಾರಣೆಗಳೂ ಸೋಮವಾರವೇ ನಡೆಯಲಿದೆ’ ಎಂದು ಪೀಠ ಹೇಳಿದರೂ ಮಣಿ ಮುಂದುವರಿಸಿದ್ದು ಪೀಠದ ಆಕ್ರೋಶಕ್ಕೆ ಕಾರಣವಾಯಿತು.

‘ನ್ಯಾಯಾಲಯದಲ್ಲಿ ಈ ರೀತಿ ವರ್ತಿಸಬಾರದು’ ಎಂದು ಪೀಠ ಹೇಳಿತು.

ತೂತ್ತುಕುಡಿ ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಇತರ ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದೂ ಮಣಿ ಅವರು ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.

**

ಸಹಜ ಸ್ಥಿತಿಗೆ ತೂತ್ತುಕುಡಿ

ತೂತ್ತುಕುಡಿಯಲ್ಲಿ ಶುಕ್ರವಾರ ಯಾವುದೇ ಹಿಂಸಾಕೃತ್ಯ ವರದಿಯಾಗಿಲ್ಲ. ಆಯ್ದ ಕೆಲವು ಕಡೆಗಳಿಗೆ ಬಸ್‌ ಸಂಚಾರ ಆರಂಭಿಸಲಾಗಿದೆ. ಆದರೆ ಈ ಬಸ್‌ಗಳಿಗೆ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.

ತರಕಾರಿ ಮತ್ತಿತರ ಮಾರುಕಟ್ಟೆಗಳು ತೆರೆದಿವೆ. ಹಾಗಿದ್ದರೂ ಈ ಪ್ರದೇಶದ ಮೇಲೆ ಹೇರಲಾಗಿರುವ ನಿಷೇಧಾಜ್ಞೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.