ADVERTISEMENT

ತಿರುಪತಿ ಆಭರಣ ಪ್ರದರ್ಶನಕ್ಕೆ ಸಿದ್ಧ:ಟಿಟಿಡಿ

ನಿವೃತ್ತ ಅರ್ಚಕ ಡಾ. ಎ.ವಿ. ರಮಣ ದೀಕ್ಷಿತುಲು ಆರೋಪ ತಳ್ಳಿ ಹಾಕಿದ ಆಡಳಿತ ಮಂಡಳಿ

​ಪ್ರಜಾವಾಣಿ ವಾರ್ತೆ
Published 22 ಮೇ 2018, 19:33 IST
Last Updated 22 ಮೇ 2018, 19:33 IST
ತಿರುಮಲ ತಿರುಪತಿ ದೇವಸ್ಥಾನ
ತಿರುಮಲ ತಿರುಪತಿ ದೇವಸ್ಥಾನ   

ಹೈದರಾಬಾದ್‌: ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಸೇರಿದ ಚಿನ್ನಾಭರಣ ಮತ್ತು ಹಣಕಾಸು ವಹಿವಾಟು ವಿವಾದ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ.

ತಿರುಪತಿ ವೆಂಕಟೇಶ್ವರ ದೇವಸ್ಥಾನದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಚಿನ್ನ ಮತ್ತು ವಜ್ರಾಭರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಸಿದ್ಧ ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿ ಮಂಗಳವಾರ ಘೋಷಿಸಿದೆ.

ಟಿಟಿಡಿ ವ್ಯವಹಾರಗಳ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ನಿವೃತ್ತ ಪ್ರಧಾನ ಅರ್ಚಕ ಡಾ. ಎ.ವಿ. ರಮಣ ದೀಕ್ಷಿತುಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ಬೆನ್ನಲ್ಲೇ ಟಿಟಿಡಿ ಸವಾಲನ್ನು ಸ್ವೀಕರಿಸಿದೆ.

ADVERTISEMENT

ತಿರುಮಲದ ಪ್ರಧಾನ ಅರ್ಚಕ ಹುದ್ದೆಯಿಂದ ನಿವೃತ್ತರಾದ ಮರುದಿನವೇ ದೆಹಲಿಗೆ ತೆರಳಿದ್ದ ದೀಕ್ಷಿತುಲು, ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಕಂಡು ದೂರು ನೀಡಿದ್ದರು.

ಅಮರಾವತಿಯಲ್ಲಿ ಮಂಗಳವಾರ ಟಿಟಿಡಿ ಪದಾಧಿಕಾರಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾಹಿತಿ ಪಡೆದರು.

‘ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಸೇರಿದ 1952 ಆಭರಣಗಳ ಪಟ್ಟಿಯನ್ನು ಈಗಾಗಲೇ ಸಾರ್ವಜನಿಕರ ಅವಗಾಹನೆಗೆ ಬಿಡುಗಡೆ ಮಾಡಿದ್ದು, ಅಗತ್ಯ ಬಿದ್ದರೆ ಆಭರಣಗಳನ್ನೂ ಪ್ರದರ್ಶಿಸಲು ಸಿದ್ಧ’ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್‌ ಕುಮಾರ್‌ ಸಿಂಘಾಲ್‌ ಮತ್ತು ಅಧ್ಯಕ್ಷ ಪುಟ್ಟಾ ಸುಧಾಕರ್‌ ಯಾದವ್‌ ಅವರು ಮುಖ್ಯಮಂತ್ರಿಗೆ ತಿಳಿಸಿದರು.

ದೀಕ್ಷಿತುಲು ಕೇಳುತ್ತಿರುವ ಅತ್ಯಮೂಲ್ಯ ’ಗುಲಾಬಿ ವಜ್ರ’ ದೇವಸ್ಥಾನದ ಆಭರಣಗಳ ಪಟ್ಟಿಯಲ್ಲಿ ಇಲ್ಲ. ಹಾಗಾಗಿ ಅದನ್ನು ಪ್ರದರ್ಶಿಸುವುದು ಸಾಧ್ಯವಿಲ್ಲ. ದೇವಸ್ಥಾನಗಳ ಖಜಾನೆಯಲ್ಲಿರುವುದು ಕೆಂಪು ವಜ್ರದ ಹರಳುಗಳು ಮಾತ್ರ ಎಂದು ಅವರು ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.

'ವಿಜಯನಗರದ ಅರಸ ಶ್ರೀಕೃಷ್ಣದೇವರಾಯ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ್ದ ಆಭರಣಗಳ ಬಗ್ಗೆಯೂ ಪ್ರತ್ಯೇಕವಾದ ಪಟ್ಟಿಯನ್ನು ಮೊದಲಿನಿಂದಲೂ ಕಾಪಾಡಿಕೊಂಡಿಲ್ಲ' ಎಂದು ಅನಿಲ್‌ ಕುಮಾರ್‌ ತಿಳಿಸಿದ್ದಾರೆ.

ದೀಕ್ಷಿತುಲು ಮಾಡಿರುವ ಹೊಸ ಆರೋಪಗಳ ಬಗ್ಗೆ ಟಿಟಿಡಿ ತನಿಖೆ ನಡೆಸಲಿದೆ. ಈಗಾಗಲೇ ನ್ಯಾಯಮೂರ್ತಿ ವಾದ್ವಾ ಸಮಿತಿ 1952 ಆಭರಣಗಳ ಕುರಿತು ಪ್ರಮಾಣ ಪತ್ರ ನೀಡಿರುವಾಗ ಈಗ ಮತ್ತೆ ಅದೇ ಪ್ರಶ್ನೆಯನ್ನು ಏಕೆ ಎತ್ತಲಾಗಿದೆ ತಿಳಿಯುತ್ತಿಲ್ಲ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

‘ದೀಕ್ಷಿತುಲು ಆರೋಪ ಮಾಡಿದಂತೆ ಟಿಟಿಡಿಯಲ್ಲಿ ಯಾವುದೇ ಹಣಕಾಸಿನ ಅವ್ಯವಹಾರ ನಡೆದಿಲ್ಲ.ದೇವಸ್ಥಾನ ಆವರಣದ ದುರಸ್ತಿಯ ನೆಪದಲ್ಲಿ ನಿಧಿ ಶೋಧ ನಡೆದಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಆಗಮ ಶಾಸ್ತ್ರದಂತೆ ಎಲ್ಲ ಪೂಜಾ ವಿಧಿವಿಧಾನ ನಡೆಯುತ್ತಿವೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.