ADVERTISEMENT

ತೆಲಂಗಾಣ ಬಂದ್: ಜನ ಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 11:05 IST
Last Updated 22 ಫೆಬ್ರುವರಿ 2011, 11:05 IST

 ಹೈದರಾಬಾದ್ (ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯದ ಬೇಡಿಕೆಯನ್ನು ಶೀಘ್ರವಾಗಿ ಇಡೇರಿಸಬೇಕೆಂದು ತೆಲಂಗಾಣ ಜಂಟಿ ಕ್ರಿಯಾ ಸಮಿತಿ (ಜೆಎಸಿ), ಟಿಆರ್‌ಎಸ್, ಬಿಜೆಪಿ, ಸಿಪಿಐ ಹಾಗೂ ಇತರ ಸಂಘಟನೆಗಳು ಕರೆದಿದ್ದ 48 ಗಂಟೆಗಳ ಬಂದ್‌ನಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಬಂದ್‌ನ ಸಂದರ್ಭದಲ್ಲಿ ಶಾಲೆ, ಕಾಲೇಜು, ಅಂಗಡಿ ಹಾಗೂ ವಾಣಿಜ್ಯ ಮಳಿಗೆಗಳ ಬಾಗಿಲು ಮುಚ್ಚಿದ್ದವು. ಸಾರ್ವಜನಿಕ ಸಾರಿಗೆ ಬಸ್‌ಗಳು ರಸ್ತೆಗೆ ಇಳಿಯಲೇ ಇಲ್ಲ.

ಇಲ್ಲಿನ ದಕ್ಷಿಣ ಕೇಂದ್ರ ರೈಲ್ವೆ ಮುಖ್ಯ ಕಚೇರಿಯಾಗಿರುವ ಸಿಕಂದರಾಬಾದ್ ರೈಲು ನಿಲ್ದಾಣಕ್ಕೆ ಹಾಗೂ ಮಹಾತ್ಮ ಗಾಂಧಿ ಬಸ್ ನಿಲ್ದಾಣಕ್ಕೆ ದೂರದ ಊರುಗಳಿಂದ ಬಂದಿಳಿದ ಪ್ರಯಾಣಿಕರು ತಮ್ಮ ಮನೆಗಳನ್ನು ತೆರಳಲು ತೀವ್ರ ಸಂಕಷ್ಟ ಎದುರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆಟೋಗಳೂ ಸಹ ಲಭ್ಯವಿಲ್ಲದ್ದು ಪ್ರಯಾಣಿಕರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿತ್ತು.

ಮತ್ತೊಂದೆಡೆ ಪ್ರತ್ಯೇಕ ರಾಜ್ಯದ ಬೇಡಿಕೆಯೊಂದಿಗೆ ತೆಲಂಗಾಣ ಪ್ರಾಂತ್ಯದಲ್ಲಿರುವ ಸರ್ಕಾರಿ ಕಚೇರಿಗಳ ಅಧಿಕಾರಿಗಳು ಸಹ ಅನಿರ್ದಿಷ್ಟ ಅವಧಿ ಮುಷ್ಕರ ಆರಂಭಿಸಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ರಾಜ್ಯ ಸಚಿವಾಲಯ ಕಟ್ಟಡದ ಎದುರು ಪೊಲೀಸ್  ಸಾಕಷ್ಟು ಪಡೆ ನಿಯೋಜಿಸಲಾಗಿದೆ.

ಸೋಮವಾರ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಕಲಾಪಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿದ್ದ ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ತಡೆಯಲು ಪ್ರಯತ್ನಿಸಿದ ಸುರಕ್ಷತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆದಿತ್ತು. ಈ ನಡುವೆ ಪ್ರತ್ಯೇಕ ತೆಲಂಗಾಣಕ್ಕಾಗಿ ವಕೀಲರು ಹಾಗೂ ಇನ್ನಿತರರು ನಡೆಸಿದ ಪ್ರತಿಭಟನೆ ವೇಳೆ ಬಸ್ ಹಾಗೂ ರೈಲ್ವೆ ನಿಲ್ದಾಣಕ್ಕೆ ಹಾನಿಯಾದ ಬಗ್ಗೆ ವರದಿಯಾಗಿದೆ. ಮಂಗಳವಾರವೂ ವಿದ್ಯಾರ್ಥಿಗಳ ಚಳವಳಿ ಮುಂದುವರಿದಿತ್ತು.

ಆಂಧ್ರ ವಿಧಾನ ಸಭೆ ಕಲಾಪಕ್ಕೆ ವ್ಯತ್ಯೆಯ
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಾಡಲು ಒತ್ತಾಯಿಸಿ ನಿರ್ಣಯ ಅಂಗೀಕರಿಸುವಂತೆ ತೆಲಂಗಾಣದ ಶಾಸಕರು ಪಟ್ಟು ಹಿಡಿದಿದ್ದರಿಂದ ಮೂರನೇ ದಿನವಾದ ಮಂಗಳವಾರವೂ  ಆಂಧ್ರ ಪ್ರದೇಶದ ವಿಧಾನಸಭೆಯಲ್ಲಿ ಕಲಾಪಕ್ಕೆ ವ್ಯತ್ಯೆಯ ಉಂಟಾಯಿತು. ಮಧ್ಯಾಹ್ನದ ವರೆಗೆ ಕಲಾಪವನ್ನು ಎರಡು ಬಾರಿ ಮುಂದೂಡಲಾಗಿತ್ತು.

ಲೋಕಸಭೆಯಲ್ಲಿ ಪ್ರಸ್ತಾಪವಾದ ತೆಲಂಗಾಣ ಬೇಡಿಕೆ
ನವದೆಹಲಿ ವರದಿ
: ಆಂಧ್ರ ಪ್ರದೇಶದ ಕೆಲವು ಕಾಂಗ್ರೇಸ್ ಸಂಸದರು ಮಂಗಳವಾರ ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯದ ಬೇಡಿಕೆಯನ್ನು ಪ್ರಸ್ತಾಪಿಸಿದ ಪ್ರಸಂಗವು ನಡೆಯಿತು.

ADVERTISEMENT

ಅವರ ಬೆಂಬಲಕ್ಕೆ ಬಂದ ಪ್ರತಿ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಕುರಿತಂತೆ ಮಸೂದೆ ಪ್ರಸಕ್ತ ಅಧಿವೇಶನದಲ್ಲಿ ಮಂಡಿಸಿದ್ದಲ್ಲಿ ಬಿಜೆಪಿ ಅದು ಅಂಗಿಕಾರಗೊಳ್ಳುವಂತೆ ನೋಡಿಕೊಳ್ಳುವುದಾಗಿ ಹೇಳಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.