ADVERTISEMENT

ತೆಲಂಗಾಣ ರಾಜ್ಯ ರಚನೆ ಕೇಂದ್ರದಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:55 IST
Last Updated 8 ಅಕ್ಟೋಬರ್ 2011, 19:55 IST

ನವದೆಹಲಿ: ಕರಾವಳಿ ಆಂಧ್ರ ಮತ್ತು ರಾಯಲಸೀಮ ಪ್ರದೇಶದ ಜನರ ತೀವ್ರ ವಿರೋಧದ ನಡುವೆಯೂ ಪ್ರತ್ಯೇಕ ತೆಲಂಗಾಣ ರಾಜ್ಯ ಬೇಡಿಕೆಗೆ ಸಮ್ಮತಿಸುವ ಅನಿವಾರ್ಯತೆಯ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ    ಎನ್ನಲಾಗಿದೆ.

ಕೇಂದ್ರದ ಅಭಿಪ್ರಾಯಕ್ಕೆ ಆಂಧ್ರಪ್ರದೇಶದ ಬಹುತೇಕ ಕೇಂದ್ರ ಸಚಿವರು ಬೆಂಬಲಿಸಿದ್ದಾರೆ. `ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಸೂಚಿಸುವ ಯಾವುದೇ ಪರಿಹಾರ ಕ್ರಮವನ್ನು ಒಪ್ಪಿಕೊಳ್ಳಲು ಸಿದ್ಧವಿರುವುದಾಗಿ~ ಈ ಸಚಿವರು ಶನಿವಾರ ಕಾಂಗ್ರೆಸ್ ಪ್ರಮುಖರ ಸಭೆಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ತೆಲಂಗಾಣ ಹೊಸ ರಾಜ್ಯಕ್ಕೆ ಒಪ್ಪಿಗೆ ನೀಡುವುದಲ್ಲದೆ ಕೇಂದ್ರದ ಮುಂದೆ ಇತರ ಯಾವುದೇ ಆಯ್ಕೆ ಇಲ್ಲ ಎಂದು  ತೆಲಂಗಾಣ ಪ್ರಾಂತ್ಯದ ಪೆಟ್ರೋಲಿಯಂ ಸಚಿವ ಎಸ್. ಜೈಪಾಲ್‌ರೆಡ್ಡಿ ಸಮಿತಿಗೆ ತಿಳಿಸಿದ್ದಾರೆ.

ಸಭೆಯಲ್ಲಿ ಕೇಂದ್ರ ಸಚಿವರುಗಳಾದ ಪ್ರಣವ್ ಮುಖರ್ಜಿ, ಪಿ. ಚಿದಂಬರಂ, ಗುಲಾಂ ನಬೀ ಆಜಾದ್ ಹಾಗೂ ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಭಾಗವಹಿಸಿದ್ದರು. ಸಮಿತಿಯ ಸದಸ್ಯರಾಗಿರುವ ಸೋನಿಯಾಗಾಂಧಿ ಮತ್ತು ಪ್ರಧಾನಿ  ಸಿಂಗ್ ಸಭೆಯಲ್ಲಿ ಭಾಗವಹಿಸಿರಲಿಲ್ಲ.

ಕಾಂಗ್ರೆಸ್ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವನ್ನು ವಿರೋಧಿಸುವುದಿಲ್ಲ ಎಂದು ಆಂಧ್ರದ ಇತರ ಪ್ರದೇಶಗಳ ಕೇಂದ್ರ ಸಚಿವರೂ ಸಮಿತಿಗೆ ತಿಳಿಸಿದ್ದಾರೆ ಎಂದು ಬಲ್ಲ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.
ಸೋನಿಯಾಗಾಂಧಿ ಈ ವಿಷಯದ ಬಗ್ಗೆ  ಮನಮೋಹನ್ ಸಿಂಗ್ ಮತ್ತು  ಪ್ರಣವ್‌ಮುಖರ್ಜಿ ಜತೆ ಸೋಮವಾರ ಚರ್ಚಿಸುವ ಸಾಧ್ಯತೆ ಇದೆ.

ತೆಲಂಗಾಣ ಭಾಗದ ಜನರ ಪರ ನಿರ್ಧಾರ ಕೈಗೊಂಡರೆ ಕರಾವಳಿ ಮತ್ತು ರಾಯಲಸೀಮ ಪ್ರದೇಶದ ಜನರಿಂದ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂಬ ವಿಷಯವನ್ನು ಸಮಿತಿ ಜೈಪಾಲ್ ರೆಡ್ಡಿ ಗಮನಕ್ಕೆ ತಂದಿತು.

ಆಗ ರೆಡ್ಡಿ ಅವರು, ತೆಲಂಗಾಣ ರಾಜ್ಯ ರಚನೆಯ ಘೋಷಣೆ ಆಗದೆ ಮತ್ತು ಆಗುವವರೆಗೆ ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡುವುದು ಸಾಧ್ಯ ಇಲ್ಲ. ಇನ್ನಷ್ಟು ತಡ ಮಾಡದೇ ಕೇಂದ್ರ ತೆಲಂಗಾಣ ರಾಜ್ಯದ ಘೋಷಣೆ ಮಾಡಬೇಕು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ತೆಲಂಗಾಣ ಪ್ರತ್ಯೇಕ ರಾಜ್ಯವಾದರೆ ಎಷ್ಟು ಮಂದಿ ಶಾಸಕರು ಮತ್ತು ಸಂಸದರು ರಾಜೀನಾಮೆ ನೀಡಬಹುದು ಎಂಬುದನ್ನೂ ಸಮಿತಿ ತಿಳಿಯಬಯಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.