ADVERTISEMENT

ದಂತಕತೆಯಾಗಿದ್ದ ಷಟ್ ಭಾಷಾ ಹಿನ್ನೆಲೆ ಗಾಯಕಿ ಶಂಶದ್ ಬೇಗಂ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 9:14 IST
Last Updated 24 ಏಪ್ರಿಲ್ 2013, 9:14 IST

ಮುಂಬೈ (ಪಿಟಿಐ): 'ಕಹೀಂ ಪೇ ನಿಗಾಹೇಂ ಕಹೀಂ ಪೇ ನಿಶಾನಾ', 'ಮೇರೆ ಪಿಯಾ ಗಯೇ ರಂಗೂನ್', 'ಕಭೀ ಆರ್ ಕಭೀ ಪಾರ್' ಮತ್ತು 'ಕಜೀರಾ ಮೊಹಬ್ಬತ್ ವಾಲಾ' ಮುಂತಾದ ಹಾಡುಗಳ ಮೂಲಕ ಸಂಗೀತ ಪ್ರೇಮಿಗಳನ್ನು ಮಂತ್ರಮುಗ್ಧ ಗೊಳಿಸಿ ದಂತಕಥೆಯಾಗಿದ್ದ ಹಿನ್ನೆಲೆ ಗಾಯಕಿ ಶಂಶದ್ ಬೇಗಂ (94) ಅವರು ಮುಂಬೈಯ ತಮ್ಮ ನಿವಾಸದಲ್ಲಿ ವಯೋ ಸಹಜ ಸಮಸ್ಯೆಗಳ ಪರಿಣಾಮವಾಗಿ ಮಂಗಳವಾರ ರಾತ್ರಿ ನಿಧನರಾದರು.

'ಕಳೆದ ಕೆಲವು ತಿಂಗಳುಗಳಿಂದ ಅವರ ದೇಹಸ್ಥಿತಿ ಚೆನ್ನಾಗಿರಲಿಲ್ಲ. ಆಗಾಗ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಕಳೆದ ರಾತ್ರಿ ಈಶಾನ್ಯ ಮುಂಬೈಯಲ್ಲಿನ ನಮ್ಮ ಮನೆಯಲ್ಲಿ ನಿಧನರಾದರು' ಎಂದು ಬೇಗಂ ಅವರ ಪುತ್ರಿ ಉಷಾ ರಾತ್ರ ಅವರು ಪಿಟಿಐಗೆ ತಿಳಿಸಿದರು.

ಬೇಗಂ ಅವರು 1955ರಲ್ಲಿ ಪತಿ ಗಣಪತ್ ಲಾಲ್ ಬಟ್ಟೊ ಅವರು ನಿಧನರಾದಂದಿನಿಂದ ತಮ್ಮ ಪುತ್ರಿ ಹಾಗೂ ಅಳಿಯ ಯೋಗ ರಾತ್ರ ಅವರ ಜೊತೆಗೆ ಮುಂಬೈಯಲ್ಲಿ ವಾಸವಾಗಿದ್ದರು.

ತಮ್ಮ ಕಾಲಮಾನದ ಅತ್ಯಂತ ಖ್ಯಾತ ಗಾಯಕಿಯಾಗಿದ್ದರೂ ಚಿತ್ರೋದ್ಯಮದ ಗ್ಲಾಮರ್ ಜಗತ್ತಿನಿಂದ ಅವರು ತಾವಾಗಿಯೇ ದೂರ ಉಳಿದಿದ್ದರು. ಅವರಿಗೆ ಸದಾ ಪ್ರಚಾರದಲ್ಲಿ ಇರುವುದು ಇಷ್ಟವಿರಲಿಲ್ಲ. ಕಲಾವಿದರು ಎಂದೂ ಸಾಯುವುದಿಲ್ಲ ಎಂದು ನನ್ನ ತಾಯಿ ಯಾವಾಗಲೂ ಹೇಳುತ್ತಿದ್ದರು. ತನ್ನ ಹಾಡುಗಳ ಮೂಲಕವೇ ನೆನಪಿನಲ್ಲಿ ಉಳಿಯಲು ಅವರು ಬಯಸಿದ್ದರು' ಎಂದು ಉಷಾ ನುಡಿದರು.

1919ರ ಏಪ್ರಿಲ್ 14ರಂದು ಪಂಜಾಬಿನ ಅಮೃತಸರದಲ್ಲಿ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಬೇಗಂ, 1947ರ ಡಿಸೆಂಬರ್ 16ರಂದು ಲಾಹೋರಿನಲ್ಲಿ ಪೇಷಾವರ್ ರೇಡಿಯೋ ಮೂಲಕ ತಮ್ಮ ಚೊಚ್ಚಲ ಹಾಡು ಹಾಡಿ ಶ್ರೋತೃಗಳನ್ನು ಮಂತ್ರಮುಗ್ಧಗೊಳಿಸಿದ್ದರು.

ಬಹುಮುಖ ಪ್ರತಿಭೆಯ ಈ ಗಾಯಕಿ ಹಿಂದಿ, ಬಂಗಾಳಿ, ಮರಾಠಿ, ಗುಜರಾತಿ, ತಮಿಳು ಮತ್ತು ಪಂಜಾಬ್ ಭಾಷೆಗಳಲ್ಲಿ ಹಾಡುಗಳ ಮೂಲಕ ಲಕ್ಷಾಂತರ ಮಂದಿ ಶ್ರೋತೃಗಳ ಮನೆ ಗೆದ್ದಿದ್ದರು. ಗುಲಾಂ ಹೈದರ್, ನೌಶಾದ್, ಒ.ಪಿ. ನಯ್ಯರ್ ಸೇರಿದಂತೆ ತಮ್ಮ ಸಮಕಾಲೀನರಾದ ಬಹುತೇಕ ಎಲ್ಲ ಶ್ರೇಷ್ಠ ಸಂಗೀತಕಾರರ ಹಾಡುಗಳನ್ನು ಅವರು ಹಾಡಿದ್ದರು.

'ಕಹೀಂ ಪೇ ನಿಗಾಹೇಂ ಕಹೀಂ ಪೇ ನಿಶಾನಾ', 'ಭೂಜ್ ಮೇರಾ ಕ್ಯಾ ನಾಮ್ ರೇ' ಮತ್ತು 'ಲೇಕೆ ಪೆಹ್ಲಾ ಪೆಹ್ಲಾ ಪ್ಯಾರ್ (ಸಿಐಡಿ-1956), 'ಸಾಯಿಯಾಂ ದಿಲ್ ಮೇ ಆನಾ ರೇ' (ಬಹಾರ್ 1951), 'ಛೋಡ್ ಬಬುಲ್ ಕಾ ಘರ್' (ಬಬುಲ್-1950) ಮತ್ತು 'ಕಜ್ರಾ ಮೊಹಬ್ಬತ್ ವಾಲಾ' (ಕಸ್ಮತ್- 1968) ಹಾಡುಗಳು ಆ ಕಾಲದಲ್ಲಿ ಅತ್ಯಂತ ಹೆಚ್ಚು ಜನಪ್ರಿಯವಾಗಿದ್ದ ಹಾಡುಗಳಲ್ಲಿ ಕೆಲವು.

ಬೇಗಂ ಅವರಿಗೆ ಗಾಯನ ಪುಟ್ಟ ವಯಸ್ಸಿನಿಂದಲೇ ಬಂದಿದ್ದ ಹವ್ಯಾಸ. ಆದರೆ ಆಕೆಯ ಸಂಪ್ರದಾಯಸ್ಥ ಕುಟುಂಬ ಆಕೆಗೆ ಈ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಿರಲಿಲ್ಲ. ಕಡೆಗೆ ಆಕೆಯ ಚಿಕ್ಕಪ್ಪ ತನ್ನ ಅಣ್ಣನ ಮನವೊಲಿಸಿ ಆಕೆಗೆ ಹಾಡಲು ಅನುಮತಿ ನೀಡುವಂತೆ ಮಾಡಿದ್ದರು. ನಂತರ ಕ್ಸೆನೋಫೋನ್ ಕಂಪೆನಿ ಜೊತೆಗೆ ಹಾಡಲು ಆಕೆಗೆ ಕಾಂಟ್ರಾಕ್ಟ್ ಲಭಿಸಿತು. ಬುರ್ಖಾ ಧರಿಸಿಕೊಂಡೇ ರೆಕಾರ್ಡಿಂಗ್ ಗಳಿಗೆ ಹಾಜರಾಗಬೇಕು ಮತ್ತು ತನ್ನ ಛಾಯಾಚಿತ್ರ ತೆಗೆಯಲು ಅವಕಾಶ ನೀಡಬಾರದು ಎಂಬ ಷರತ್ತಿನ ಮೇಲೆ ಹಾಡಲು  ತಂದೆ ಆಕೆಗೆ ಅನುಮತಿ ನೀಡಿದ್ದರು.

1934ರಲ್ಲಿ ಗಣಪತ್ ಲಾಲ್ ಬಟ್ಟೋ ಅವರ ಜೊತೆಗೆ ಮದುವೆಯಾದ ಮೇಲೂ ಬೇಗಂ ತನ್ನ ತಂದೆಯ ಆಶಯಗಳನ್ನು ಗೌರವಿಸಿ ಅದರಂತೆಯೇ ನಡೆದುಕೊಳ್ಳುವುದನ್ನು ಮುಂದುವರೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.