ADVERTISEMENT

ದಲಿತರ ವಿರುದ್ಧ ದಲಿತರ ಸ್ಪರ್ಧೆ ನಿಜ ಮುಖವಾಡ ಬಹಿರಂಗ: ಮೀರಾ ಕುಮಾರ್‌

ಪಿಟಿಐ
Published 13 ಜುಲೈ 2017, 11:02 IST
Last Updated 13 ಜುಲೈ 2017, 11:02 IST
ದಲಿತರ ವಿರುದ್ಧ ದಲಿತರ ಸ್ಪರ್ಧೆ ನಿಜ ಮುಖವಾಡ ಬಹಿರಂಗ: ಮೀರಾ ಕುಮಾರ್‌
ದಲಿತರ ವಿರುದ್ಧ ದಲಿತರ ಸ್ಪರ್ಧೆ ನಿಜ ಮುಖವಾಡ ಬಹಿರಂಗ: ಮೀರಾ ಕುಮಾರ್‌   

ರಾಯ್‌ಪುರ: ‘ಉನ್ನತ ಸ್ಥಾನದ ಚುನಾವಣೆಗೆ ‘ದಲಿತರ ವಿರುದ್ಧ ದಲಿತರು’ ಎಂದು ಹೇಳುವ ಮೂಲಕ ಸಮಾಜ ಜಾತಿಯ ಬಗೆಗಿನ ನಿಜವಾದ ಮುಖವನ್ನು ತೋರುತ್ತದೆ’ ಎಂದು ರಾಷ್ಟ್ರಪತಿ ಚುನಾವಣೆಯ ವಿರೋಧ ಪಕ್ಷದ ಅಭ್ಯರ್ಥಿ ಮೀರಾ ಕುಮಾರ್‌ ಹೇಳಿದರು.

ಜುಲೈ 17ರಂದು ನಡೆಯುವ ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಕೋರಿ ಅವರು ಗುರುವಾರ ಕಾಂಗ್ರೆಸ್‌ ಶಾಸಕರನ್ನು ಭೇಟಿ ಮಾಡಿದ್ದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿಗೆ ಸಿದ್ಧಾಂತದ ಆಧಾರದ ಮೇಲೆ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆ ನಡೆಯುತ್ತಿದೆ ಎಂದು ಹೇಳಿದರು.

ADVERTISEMENT

ದಲಿತರ ವಿರುದ್ಧ ದಲಿತರು(ಎನ್‌ಡಿಯ ಅಭ್ಯರ್ಥಿ ರಾಮನಾಥ ಕೋವಿಂದ ಅವರೂ ಕೂಡಾ ದಲಿತರು) ಎಂದು ಸ್ಪರ್ಧೆಯ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನನಗೆ ಈ ಬಗ್ಗೆ ಸಂತೋಷ ಮತ್ತು ನೋವಾಗುತ್ತದೆ’ ಎಂದಿದ್ದಾರೆ.

ಸಮಾಜದ ನೈಜ ಮುಖವಾಡವನ್ನು ತೋರುತ್ತಿರುವುದಕ್ಕೆ ನನಗೆ ಸಂತೋಷ ಆಗುತ್ತಿದೆ. ಆದರೆ, ಇಂತಹ ವಿಷಯಗಳು ಸಮಾಜದಲ್ಲಿ ಇನ್ನೂ ಚರ್ಚೆ ಆಗುತ್ತಿವೆ ಎಂಬುದು ನೋವಿನ ಸಂಗತಿ. ನಾವು ಜಾತಿ ಪದ್ಧತಿ ಹಿಡಿತದಲ್ಲಿದ್ದುಕೊಂಡು ಎಂದಿಗೂ ಪ್ರಗತಿ ಸಾಧಿಸುವುದು ಸಾಧ್ಯವಿಲ್ಲ ಎಂದು ಮೀರಾ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

‘ಚುನಾವಣೆ ಕುರಿತಾಗಿ ದಲಿತರ ವಿರುದ್ಧ ದಲಿತರ ಸ್ಪರ್ಧೆ ಎಂದು ವಿವರಿಸಿದಾಗ ನನಗೆ ನೋವಾಗುತ್ತದೆ’ ಎಂದಿದ್ದಾರೆ.

‘ರಾಷ್ಟ್ರಪತಿ ಆಯ್ಕೆಗೆ ‌ಚುನಾವಣೆಗಳು ಹಿಂದೆ ಅನೇಕ ಬಾರಿ ನಡೆದಿವೆ. ಮೇಲ್ಜಾತಿಗಳ ವ್ಯಕ್ತಿಗಳು ಸ್ಪರ್ಧಿಸಿದಾಗ ಅವರ ಸಾಧನೆ ಮತ್ತು ಸಾಮರ್ಥ್ಯಗಳು, ಗುಣಗಳ ಬಗ್ಗೆ ಚರ್ಚೆಯಾಗುತ್ತಿದ್ದವು, ಎಂದಿಗೂ ಜಾತಿ ಚರ್ಚಿಸಲ್ಪಟ್ಟಿರಲಿಲ್ಲ. ಆದರೆ, ನಾನು ಮತ್ತು ಕೋವಿಂದ್ ಅವರು ಸ್ಪರ್ಧಿಸುತ್ತಿದ್ದೇವೆ. ದಲಿತರ ಕುರಿತಾಗಿ ಏನನ್ನೂ ಚರ್ಚಿಸುವುದಿಲ್ಲ’ ಎಂದು ಮೀರಾ ಕುಮಾರ್ ಹೇಳಿದರು.

21ನೇ ಶತಮಾನದ ಎರಡನೇ ದಶಕದಲ್ಲಿ ನಾವು ಜೀವಿಸುತ್ತಿದ್ದೇವೆ, ಭಾರತವನ್ನು ಪ್ರಗತಿಪರ ಮತ್ತು ಆಧುನಿಕ ರಾಷ್ಟ್ರವನ್ನಾಗಿ ಮಾಡಲು ಮತ್ತು ಹೊಸ ಎತ್ತರಕ್ಕೆ ತೆಗೆದುಕೊಂಡುಹೋಗಲು ನಾವು ಬಯಸಿದ್ದೇವೆ. ರಾಷ್ಟ್ರದ ಬೆಳವಣಿಗೆಗೆ ಜಾತಿ ಪದ್ಧತಿಯನ್ನು ರದ್ದುಪಡಿಸಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.