ADVERTISEMENT

ದಿಗ್ವಿಜಯ್ ಹೇಳಿಕೆ: ಹೊಸ ವಿವಾದ

ಸಂಸದೆ ಮೀನಾಕ್ಷಿ ನಟರಾಜನ್ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2013, 19:59 IST
Last Updated 26 ಜುಲೈ 2013, 19:59 IST
ದಿಗ್ವಿಜಯ್ ಹೇಳಿಕೆ: ಹೊಸ ವಿವಾದ
ದಿಗ್ವಿಜಯ್ ಹೇಳಿಕೆ: ಹೊಸ ವಿವಾದ   

ನವದೆಹಲಿ: ಮಹಿಳೆಯರ ಬಗ್ಗೆ ರಾಜಕೀಯ ನಾಯಕರು ಅವಹೇಳನಕಾರಿಯಾಗಿ ಮಾತನಾಡುವುದು ಹೊಸದೇನಲ್ಲ. ಇದೀಗ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಇಂಥದ್ದೊಂದು ವಿವಾದದಲ್ಲಿ ಸಿಲುಕಿದ್ದಾರೆ.

ಪಕ್ಷದ ಸಂಸದೆ ಮೀನಾಕ್ಷಿ ನಟರಾಜನ್ ಅವರ ಪ್ರಾಮಾಣಿಕತೆಯನ್ನು ಹೊಗಳುವ ಭರದಲ್ಲಿ ಅವರು ಆಡಿದ ಮಾತು ಅಪಾರ್ಥಕ್ಕೆ ಎಡೆಮಾಡಿಕೊಟ್ಟಿದೆ.

ಮಧ್ಯಪ್ರದೇಶದ ಮಂಡ್‌ಸೌರ್ ಪಟ್ಟಣದಲ್ಲಿ ಗುರುವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ದಿಗ್ವಿಜಯ್, `ನಮ್ಮ ಪಕ್ಷದ ಸಂಸದೆ ಮೀನಾಕ್ಷಿ ಅವರು ಗಾಂಧಿವಾದಿ. ಸರಳ ಹಾಗೂ ಪ್ರಾಮಾಣಿಕ ನಾಯಕಿ. ಅವರು ನೂರಕ್ಕೆ ನೂರು ಪರಿಶುದ್ಧರು (ಸೌ ತಾಂಚ್ ಖರಾ ಮಾಲ್)' ಎಂದಿದ್ದರು.

`ನಾನು ರಾಜಕೀಯದಲ್ಲಿ ನುರಿತ ಆಭರಣಕಾರ ಇದ್ದಂತೆ. ಹಾಗಾಗಿಯೇ ಈ ಮಾತನ್ನು ಹೇಳುತ್ತಿದ್ದೇನೆ. ಮೀನಾಕ್ಷಿ ಅಪ್ಪಟ ಚಿನ್ನ' ಎಂದೂ ಹೊಗಳಿದ್ದರು.

ಕಾಂಗ್ರೆಸ್ ಯುವಪಡೆಯಲ್ಲಿ ಒಬ್ಬರಾಗಿರುವ ಮೀನಾಕ್ಷಿ,  ರಾಹುಲ್ ಗಾಂಧಿ ಅವರಿಗೆ ಆಪ್ತರು.

ದಿಗ್ವಿಜಯ್ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ` ಇದು ಅಸಭ್ಯ ಹಾಗೂ ಅವಮಾನಕರ ಹೇಳಿಕೆ' ಎಂದು ಟೀಕಿಸಿದೆ. `ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯ ಬುದ್ಧಿ ಸ್ಥಿಮಿತದಲ್ಲಿ ಇಲ್ಲ. ಅವರನ್ನು ಕೂಡಲೇ ಮಾನಸಿಕ ಆಸ್ಪತ್ರೆಗೆ ದಾಖಲಿಸಬೇಕು' ಎಂದು ಬಿಜೆಪಿ ಹೇಳಿದೆ.

`ಇದು ಕಾಂಗ್ರೆಸ್‌ನ ಆಂತರಿಕ ವಿಚಾರ. ಆದರೂ ನಾನು ಈ ಬಗ್ಗೆ ಮಾತನಾಡುತ್ತೇನೆ. ದಿಗ್ವಿಜಯ್‌ಗೆ ತಲೆ ಕೆಟ್ಟಿದೆ. ತುರ್ತಾಗಿ ಚಿಕಿತ್ಸೆ ಕೊಡಿಸಬೇಕು' ಎಂದು ಬಿಜೆಪಿ ಮುಖಂಡ ವಿನಯ್ ಕಟಿಯಾರ್ ಹೇಳಿದ್ದಾರೆ.

`ಅವರನ್ನು ಆಸ್ಪತ್ರೆಗೆ ಸೇರಿಸಲು ಕಾಂಗ್ರೆಸ್‌ಗೆ ಆಗದಿದ್ದರೆ ನಾವು ಆ ಕೆಲಸ ಮಾಡುತ್ತೇವೆ' ಎಂದೂ ಅವರು ಹೇಳಿದ್ದಾರೆ. ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ಕೂಡ ಕಟಿಯಾರ್ ಟೀಕೆಗೆ ದನಿಗೂಡಿಸಿದ್ದಾರೆ. `ದಿಗ್ವಿಜಯ್ ಸಿಂಗ್ ಅವರನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ' ಎಂದಿದ್ದಾರೆ.

ಮೀನಾಕ್ಷಿ ಪ್ರತಿಕ್ರಿಯೆ: `ಈ ಹೇಳಿಕೆಯನ್ನು ಸರಿಯಾಗಿ ಗ್ರಹಿಸಬೇಕು.  ದಿಗ್ವಿಜಯ್ ನನ್ನ ಕೆಲಸವನ್ನು ಶ್ಲಾಘಿಸಿದ್ದಾರೆ. ಇದಕ್ಕೆ ನಾನು ಅಸಮಾಧಾನಗೊಂಡಿಲ್ಲ' ಎಂದು ಮೀನಾಕ್ಷಿ ಪ್ರತಿಕ್ರಿಯಿಸಿದ್ದಾರೆ.

ಸಮರ್ಥನೆ
`ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಮೀನಾಕ್ಷಿ ಅವರು ಅಪ್ಪಟ ಚಿನ್ನ ಎಂಬ ಅರ್ಥದಲ್ಲಿ ನಾನು  ಮಾತನಾಡಿದ್ದೆ' ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

`ನನ್ನ ಹೇಳಿಕೆಗೆ ಅಪಾರ್ಥ ಕಲ್ಪಿಸಿ ಪ್ರಸಾರ ಮಾಡಿದ ಟಿ.ವಿ ವಾಹಿನಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ' ಎಂದೂ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.