ADVERTISEMENT

`ದೀದಿ' ಮನವೊಲಿಸಲು ಕಸರತ್ತು ಆರಂಭ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:55 IST
Last Updated 9 ಏಪ್ರಿಲ್ 2013, 19:55 IST

ಕೋಲ್ಕತ್ತ (ಪಿಟಿಐ/ಐಎಎನ್‌ಎಸ್): ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಇದೀಗ ಪಶ್ಚಿಮ ಬಂಗಾಳದಲ್ಲಿ ತಮ್ಮ `ರಾಜಕೀಯ ದಾಳ' ಉರುಳಿಸಲು ತಾಲೀಮು ನಡೆಸಿದ್ದಾರೆ.

ಯುಪಿಎ ಹಾಗೂ ಎಡರಂಗದ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ `ದೀದಿ' (ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ) ಮನವೊಲಿಕೆಯ ಕಸರತ್ತು ನಡೆಸಿದ್ದಾರೆ.

ಎಫ್‌ಡಿಐ ವಿಷಯದಲ್ಲಿ ಯುಪಿಎ ಸಖ್ಯ ಕಡಿದುಕೊಂಡಿರುವ ತೃಣಮೂಲ ಕಾಂಗ್ರೆಸ್, ಮುಂದಿನ ದಿನಗಳಲ್ಲಿ ಎನ್‌ಡಿಎಗೆ ಬೆಂಬಲ ನೀಡುವ  ಸಾಧ್ಯತೆ ಹಿನ್ನೆಲೆಯಲ್ಲಿ ಮೋದಿ ಅವರ ಈ ನಡೆ ಮಹತ್ವ ಪಡೆದುಕೊಂಡಿದೆ.

`ರಾಜ್ಯದಲ್ಲಿ ಈ ಹಿಂದೆ 32 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಎಡರಂಗದ ಪಾಪ ತೊಳೆಯಲು ಮಮತಾ ಸರ್ಕಾರಕ್ಕೆ ವರ್ಷಗಳೇ ಬೇಕಾಗಬಹುದು. ಆದರೆ ಈ ನಿಟ್ಟಿನಲ್ಲಿ ಅವರು ಯಶಸ್ವಿಯಾಗುತ್ತಾರೆ ಎಂಬ ನಂಬಿಕೆ ಇದೆ. ಗುಜರಾತ್‌ನಲ್ಲಿ ಕೂಡ ಇಂಥದ್ದೇ ಸ್ಥಿತಿ ಇತ್ತು. ಕಾಂಗ್ರೆಸ್‌ನ ದುರಾಡಳಿತವನ್ನು ಸರಿಪಡಿಸಲು ನನಗೆ 10 ವರ್ಷಗಳು ಬೇಕಾಯಿತು' ಎಂದು ಹೇಳಿ ಪರೋಕ್ಷವಾಗಿ ತಮ್ಮ ಸಾಧನೆಯನ್ನು ಬಿಂಬಿಸುವ ಪ್ರಯತ್ನವನ್ನೂ ಮಾಡಿದ್ದಾರೆ.

ಯುಪಿಎ ಸರ್ಕಾರ ಕಾಂಗ್ರೆಸ್ಸೇತರ ರಾಜ್ಯಗಳ ಬಗ್ಗೆ ಮಲತಾಯಿ ಧೋರಣೆ ತಾಳಿದೆ ಎಂದು `ದೀದಿ' ಮಾಡಿದ ಆರೋಪಕ್ಕೆ ಮತ್ತಷ್ಟು ಕುಮ್ಮಕ್ಕು ನೀಡಿದ ಮೋದಿ, `ಕೇಂದ್ರದ ಈ ಧೋರಣೆಯು ದೇಶದ ಒಕ್ಕೂಟ ವ್ಯವಸ್ಥೆಗೆ ಕೇಡು ಬಗೆಯುತ್ತದೆ' ಎಂದಿದ್ದಾರೆ.

ಕೋಲ್ಕತ ಪ್ರವಾಸದಲ್ಲಿರುವ ಮೋದಿ ಮಂಗಳವಾರ ಇಲ್ಲಿನ ವಾಣಿಜ್ಯ ಮಂಡಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

`ಒಬ್ಬ ರಾಜಕಾರಣಿಗೆ ತಾನು ಅತ್ಯುನ್ನತ ಸ್ಥಾನಕ್ಕೆ ಏರಬೇಕೆಂಬ ಬಯಕೆ ಇರುತ್ತದೆ. ಇದಕ್ಕೆ ನಿಮ್ಮ ಅನಿಸಿಕೆ ಏನು' ಎಂಬ ಪ್ರಶ್ನೆಗೆ, `ಇರಬಹುದೇನೋ. ಆದರೆ ನಾನು ರಾಜಕಾರಣಿ ಅಲ್ಲ. ನನಗೆ ಅದರಲ್ಲಿ ಆಸಕ್ತಿಯೂ ಇಲ್ಲ' ಎಂದು ಚಾಣಾಕ್ಷತನದಿಂದ ಉತ್ತರಿಸಿದರು.

ಯುಪಿಎ ವಿರುದ್ಧ ವಾಗ್ದಾಳಿ: `ಯುಪಿಎ ಸರ್ಕಾರ ಕ್ಯಾಲೆಂಡರ್ ನೋಡುತ್ತಿಲ್ಲ, ಗಡಿಯಾರ ನೋಡುತ್ತಿದೆ. ನಿಜವಾದ ಅರ್ಥದಲ್ಲಿ ಅದರ ಅವಧಿ ಮುಗಿದಿದೆ. ಕಳೆದ ಎರಡು ವರ್ಷಗಳಿಂದ ಅಭಿವೃದ್ಧಿ ಕಾರ್ಯ ನಡೆದಿಲ್ಲ' ಎಂದು ವ್ಯಂಗ್ಯವಾಡಿದರು.

ಉದ್ಯಮಿಗಳಿಗೆ ಹಿತೋಪದೇಶ: `ದೇಶವು ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದರೆ, ಆ ಪ್ರಕ್ರಿಯೆ ಪಶ್ಚಿಮ ಬಂಗಾಳದಿಂದಲೇ ಶುರುವಾಗಬೇಕು. ಬಂಗಾಳದ ಅಭಿವೃದ್ಧಿಯು ಆ ರಾಜ್ಯಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಅದು ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿ ಬಹುದೊಡ್ಡ ಪ್ರಗತಿಗೆ ಮುನ್ನುಡಿಯಾಗುತ್ತದೆ' ಎಂದು ಮೋದಿ ಇಲ್ಲಿನ ಉದ್ದಿಮೆದಾರರಿಗೆ ಹಿತೋಪದೇಶ ಮಾಡಿದರು.

21 ಪ್ರತಿಭಟನಾಕಾರರ ಸೆರೆ: ಮೋದಿ ಉದ್ಯಮಿಗಳ ಜತೆ ಸಮಾಲೋಚನೆ ನಡೆಸುತ್ತಿದ್ದ ಹೋಟೆಲ್ ಹೊರಗಡೆ ಪ್ರತಿಭಟನೆ ನಡೆಸಿದ 21 ಜನರನ್ನುಬಂಧಿಸಲಾಯಿತು.

ಕಾಂಗ್ರೆಸ್ ಟೀಕೆ: ಯುಪಿಎ ಸರ್ಕಾರವು ಕಾಂಗ್ರೆಸ್ಸೇತರ ರಾಜ್ಯಗಳ ಬಗ್ಗೆ ಮಲತಾಯಿ ಧೋರಣೆ ತಳೆದಿದೆ ಎಂಬ ಮೋದಿ ಟೀಕೆಯನ್ನು ಕಾಂಗ್ರೆಸ್ ಅಲ್ಲಗಳೆದಿದೆ.

`ರಾಜ್ಯದ ವೈಫಲ್ಯವನ್ನು ಮುಚ್ಚಿಹಾಕುವ ಉದ್ದೇಶದಿಂದ ಇಂಥ ಆರೋಪ ಮಾಡಲಾಗುತ್ತಿದೆ' ಎಂದು ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರದೀಪ್ ಭಟ್ಟಾಚಾರ್ಯ ಪ್ರತಿಕ್ರಿಯಿಸಿದ್ದಾರೆ.

ಪಿಎಂಒ ತಿರುಗೇಟು:  `ಆರ್ಥಿಕ ನ್ಯಾಯ'ಕ್ಕಾಗಿ ಕೇಂದ್ರ ಸರ್ಕಾರವು ಪರಸ್ಪರ ಒಡಂಬಡಿಕೆ ಮಾಡಿಕೊಂಡ ಸೂತ್ರದನ್ವಯ ರಾಜ್ಯಗಳಿಗೆ ಅನುದಾನ ನೀಡಿದೆ' ಎಂದು ಪ್ರಧಾನಿ ಕಾರ್ಯಾಲಯ ಸ್ಪಷ್ಟಪಡಿಸಿದೆ.

ಜೆಡಿಯು ವ್ಯಂಗ್ಯ: `ಮೋದಿ ಪ್ರಧಾನಿಯಾಗಲು ಹಪಹಪಿಸುತ್ತಿದ್ದಾರೆ' ಎಂದು ಜೆಡಿಯು ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.