ADVERTISEMENT

ನನ್ನನ್ನೂ ಕೊಲೆ ಮಾಡಿಬಿಡುತ್ತಿದ್ದರು

ಕೋರ್ಟ್‌ನಲ್ಲಿ ಸರ್ಕಾರಿ ಸಾಕ್ಷಿದಾರನ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:59 IST
Last Updated 12 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ‘ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಸ್‌ನಲ್ಲಿ ಆ ಕರಾಳ ರಾತ್ರಿ ನಾನೂ ಇದ್ದೆ. ಈ ರಾಕ್ಷಸರು ನನ್ನನ್ನೂ ದರೋಡೆ ಮಾಡಿದರು. ಒಂದು ವೇಳೆ ಅವರು ನನ್ನನ್ನು ಬಸ್‌ನಿಂದ ಹೊರದೂಡಿರದಿದ್ದರೆ ಬಹುಶಃ ನಾನೂ ಕೊಲೆಯಾಗಿ ಬಿಡುತ್ತಿದ್ದೆ’ ಎಂದು  ಸರ್ಕಾರಿ ಸಾಕ್ಷಿಯಾಗಿರುವ ಬಡಗಿ ರಾಮ್‌ ಆಧಾರ್‌ ಹೇಳಿದರು.

ಡಿ. 16ರ ರಾತ್ರಿ ಚಲಿಸುತ್ತಿದ್ದ ಬಸ್‌ನಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆಸುವುದಕ್ಕೂ ಮುನ್ನ ನಡೆದಿದೆ ಎಂದು ಆರೋಪಿಸಲಾದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಕೋರ್ಟ್‌ನಲ್ಲಿ ರಾಮ್‌ ಆಧಾರ್‌ ಗುರುವಾರ ಸಾಕ್ಷಿ ನುಡಿದರು. ಕಟೆಕಟೆಯಲ್ಲಿ ನಿಂತಿದ್ದ ಮುಕೇಶ್‌ (26), ವಿನಯ್‌ ಶರ್ಮಾ (20), ಪವನ್‌ ಗುಪ್ತಾ (19), ಅಕ್ಷಯ್‌ ಸಿಂಗ್‌ ಠಾಕೂರ್‌ (28) ಅವರನ್ನು ರಾಮ್‌ ಆಧಾರ್‌ ಗುರುತು ಹಿಡಿದರು.

‘ಇವರೇ ನನಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ದರೋಡೆ ಮಾಡಿ, ಬಸ್‌ನಿಂದ ಹೊರಗೆ ತಳ್ಳಿದವರು’ ಎಂದರು. ಬಸ್‌ ಅನ್ನು ತನಿಖೆ ಸಂದರ್ಭದಲ್ಲಿ ಗುರುತಿಸಿರುವುದಾಗಿಯೂ ಅವರು ಕೋರ್ಟ್‌ಗೆ ತಿಳಿಸಿದರು. ‘ನನ್ನನ್ನು ದರೋಡೆ ಮಾಡಿಲ್ಲ ಮತ್ತು  ಸುಳ್ಳು ಸಾಕ್ಷ್ಯ ಹೇಳುತ್ತಿದ್ದೇನೆ ಎಂಬುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.