ADVERTISEMENT

ನಿತೀಶ್ ಪ್ರಧಾನಿ ಅಭ್ಯರ್ಥಿಯಲ್ಲ

ಕಾರ್ಯಕಾರಿಣಿಯಲ್ಲಿ ಜೆಡಿಯು ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 19:59 IST
Last Updated 13 ಏಪ್ರಿಲ್ 2013, 19:59 IST
ನಿತೀಶ್ ಪ್ರಧಾನಿ ಅಭ್ಯರ್ಥಿಯಲ್ಲ
ನಿತೀಶ್ ಪ್ರಧಾನಿ ಅಭ್ಯರ್ಥಿಯಲ್ಲ   

ನವದೆಹಲಿ (ಐಎಎನ್‌ಎಸ್):`ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನಿ ಸ್ಥಾನದ ಆಕಾಂಕ್ಷಿ ಅಲ್ಲ' ಎಂದು ಜೆಡಿಯು ಶನಿವಾರ ಸ್ಪಷ್ಟಪಡಿಸಿದೆ.

`ಪ್ರಧಾನಿ ಅಭ್ಯರ್ಥಿ ವಿಷಯದಲ್ಲಿ ನಾವು ನಿಲುವು ಸ್ಪಷ್ಟಪಡಿಸಿದ್ದೇವೆ' ಎಂದು ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ ತಿಳಿಸಿದ್ದಾರೆ.

ಮೋದಿ ವಿರುದ್ಧ ವಾಗ್ದಾಳಿ: ರಾಜಧಾನಿಯಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತ್ಯಾಗಿ, `ದಶಕದ ಹಿಂದೆ ಗುಜರಾತ್‌ನಲ್ಲಿ ಸಾವಿರಕ್ಕೂ ಹೆಚ್ಚು ಜನರನ್ನು ಬಲಿಪಡೆದ ಕೋಮುಗಲಭೆಗಳನ್ನು ತಡೆಯುವಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ' ಎಂದು ವಾಗ್ದಾಳಿ ನಡೆಸಿದರು. 

`ಮೋದಿ ಅವರನ್ನು ಜಾತ್ಯತೀತ ನಾಯಕರನ್ನಾಗಿ ಜೆಡಿಯು ಪರಿಗಣಿಸಲಿದೆಯೇ' ಎಂಬ ಪ್ರಶ್ನೆಗೆ ಈ ಪ್ರತಿಕ್ರಿಯೆ ನಿಡಿದರು.
`ಪ್ರಧಾನಿ ಅಭ್ಯರ್ಥಿ ಘೋಷಿಸಲು ಬಿಜೆಪಿಗೆ ಗಡುವು ವಿಧಿಸುವಿರಾ' ಎಂಬ ಮತ್ತೊಂದು ಪ್ರಶ್ನೆಗೆ, `ಬಿಜೆಪಿ ನಮ್ಮ ಮಿತ್ರ ಪಕ್ಷ. ನಾವು ಮೈತ್ರಿಕೂಟದ ನೀತಿ ಸಂಹಿತೆಯನ್ನು ಪಾಲಿಸುತ್ತೇವೆ. ಮತ್ತೊಂದು ಪಕ್ಷದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಮತ್ತು ಯಾವುದೇ ಒತ್ತಡ ತಂತ್ರ ಹೇರುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

`ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವವರೆಗೂ ನಾವು ಕಾಯುತ್ತೇವೆ. ಆ ನಂತರವಷ್ಟೇ ಆ ಬಗ್ಗೆ ಪ್ರತಿಕ್ರಿಯೆ ನೀಡುತ್ತೇವೆ' ಎಂದರು. ಭಾನುವಾರ ರಾಜಧಾನಿಯಲ್ಲಿ ನಡೆಯಲಿರುವ ಜೆಡಿಯು ರಾಷ್ಟ್ರೀಯ ಸಮಾವೇಶದಲ್ಲಿ ಪಕ್ಷ ತನ್ನ ಭವಿಷ್ಯದ ರಾಜಕೀಯ ನಡೆಗಳ ಕುರಿತು ನಿರ್ಣಯಗಳನ್ನು ಪ್ರಕಟಿಸಲಿದೆ ಎಂದರು.

`ಸೌಂದರ್ಯ ಸ್ಪರ್ಧೆಯಲ್ಲ'
ಆನಂದ್ (ಗುಜರಾತ್): ಮುಂದಿನ ಲೋಕಸಭಾ ಚುನಾವಣೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ನಡುವಿನ ಸ್ಪರ್ಧೆಯಾಗಲಿದೆ ಎಂಬ ಚರ್ಚೆಗಳನ್ನು ಅಲ್ಲಗಳೆದಿರುವ ಕೇಂದ್ರ ಸಚಿವ ಜೈರಾಮ್ ರಮೇಶ್, `ಚುನಾವಣೆ ಎನ್ನುವುದು ಸೌಂದರ್ಯ ಸ್ಪರ್ಧೆಯಲ್ಲ' ಎಂದು ವ್ಯಂಗ್ಯವಾಡಿದ್ದಾರೆ.

ಐಆರ್‌ಎಂಎ ಸಮಾವೇಶದಲ್ಲಿ ಭಾಗವಹಿಸಿದ ಅವರನ್ನು `ನರೇಂದ್ರ ಮೋದಿ ಅವರನ್ನು ಬಿಜೆಪಿ ತನ್ನ ಮುಂದಿನ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುತ್ತಿದೆಯಲ್ಲ' ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಈ ಪ್ರತಿಕ್ರಿಯೆ ನೀಡಿದರು.

`ಭಾರತದ ಚುನಾವಣೆಗಳನ್ನು ಹಗುರವಾಗಿ ಪರಿಗಣಿಸಬಾರದು. ಅಮೆರಿಕದಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಂತೆ ಇಬ್ಬರು ವ್ಯಕ್ತಿಗಳ ನಡುವಿನ ಚುನಾವಣೆಗಳು ಇವಲ್ಲ. ನಮ್ಮಲ್ಲಿ ರಾಜಕೀಯ ಪಕ್ಷಗಳ ಆಧಾರಿತ ಚುನಾವಣೆ ನಡೆಯುತ್ತವೆ. ಇಲ್ಲಿ ರಾಜಕೀಯ ಪಕ್ಷಗಳ ನಡುವೆ ಸ್ಪರ್ಧೆ ಇರುತ್ತದೆಯೇ ಹೊರತು ವ್ಯಕ್ತಿಗಳ ಮಧ್ಯೆ ಅಲ್ಲ' ಎಂದೂ ಸಚಿವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.