ADVERTISEMENT

ನಿರ್ಭಯ ಕ್ರೂಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ?

ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ

ಪಿಟಿಐ
Published 7 ನವೆಂಬರ್ 2017, 19:30 IST
Last Updated 7 ನವೆಂಬರ್ 2017, 19:30 IST
ನಿರ್ಭಯ ಕ್ರೂಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ?
ನಿರ್ಭಯ ಕ್ರೂಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ?   

ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ‘ನಿರ್ಭಯ’ ದೂರಗಾಮಿ ಕ್ರೂಸ್ ಕ್ಷಿಪಣಿಯ ಉಡಾವಣೆ ಮತ್ತು ಹಾರಾಟ ಪರೀಕ್ಷೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮಂಗಳವಾರ ನಡೆಸಿದೆ. ಅತ್ಯಂತ ಕೆಳಮಟ್ಟದಲ್ಲಿ ಹಾರಾಟ ನಡೆಸುವುದರಿಂದ ರೇಡಾರ್‌ಗಳು ಇವನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಇದು ಅತ್ಯಂತ ಜಟಿಲವಾದ ತಂತ್ರಜ್ಞಾನ. ಪಾಕಿಸ್ತಾನವು ಬಾಬರ್‌ ಕ್ರೂಸ್ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ಹೀಗಾಗಿ ಮಂಗಳವಾರದ ಪರೀಕ್ಷೆ ಅತ್ಯಂತ ಮಹತ್ವದದ್ದು ಎಂದು ಡಿಆರ್‌ಡಿಒ ಹೇಳಿದೆ.

ಐದನೇ ಪರೀಕ್ಷೆ...

* ಒಡಿಶಾದ ಚಾಂಡಿಪುರ ಪರೀಕ್ಷಾ ಕೇಂದ್ರದಲ್ಲಿ ಕ್ಷಿಪಣಿಯ ಪರೀಕ್ಷೆ
* ಇದು ಈ ಕ್ಷಿಪಣಿಯ ಐದನೇ ಪರೀಕ್ಷೆಯಾಗಿದೆ. ಉಳಿದ ನಾಲ್ಕು ಪರೀಕ್ಷೆಗಳಲ್ಲಿ ಎರಡನೆಯದ್ದು ಮಾತ್ರ ಯಶಸ್ವಿ
* ಟರ್ಬೊಜೆಟ್ ಎಂಜಿನ್‌ ಚಾಲಿತ ಕ್ಷಿಪಣಿ ಇದಾಗಿರುವುದರಿಂದ, ಹಾರಾಟದ ವೇಳೆ ಇವು ದಿಕ್ಕು ಬದಲಿಸುತ್ತವೆ. ಮೂರನೇ ಪರೀಕ್ಷೆ ವೇಳೆ ಕ್ಷಿಪಣಿ ಇದೇ ರೀತಿ ದಿಕ್ಕು ಬದಲಿಸಿದ್ದ ಕಾರಣ ಅದನ್ನು ಹಾದಿ ಮಧ್ಯೆಯೇ ಸಮುದ್ರಕ್ಕೆ ಬೀಳಿಸಲಾಗಿತ್ತು
* ಮಂಗಳವಾರದ ಪರೀಕ್ಷೆಯಲ್ಲಿ ಕ್ಷಿಪಣಿ ದಿಕ್ಕು ಬದಲಿಸದೆ ನಿಗದಿತ ಗುರಿಯನ್ನು ತಲುಪಿದೆ
* ವಾಯುಪಡೆಯ ವಿಮಾನದ ಮೂಲಕ ಕ್ಷಿಪಣಿಯನ್ನು ಹಿಂಬಾಲಿಸಿ ಅದರ ಕಾರ್ಯಾಚರಣೆಯನ್ನು ದಾಖಲಿಸಲಾಗಿದೆ. ಜತೆಗೆ ರೇಡಾರ್‌ಗಳನ್ನು ಬಳಸಿ ಇದರ ಚಲನೆಯ ದಿಕ್ಕನ್ನು ದಾಖಲಿಸಲಾಗಿದೆ
* ಈ ದಾಖಲಾತಿಗಳನ್ನು ಮತ್ತು ದತ್ತಾಂಶಗಳನ್ನು ಇನ್ನಷ್ಟೇ ವಿಶ್ಲೇಷಿಸಬೇಕಾಗಿದೆ. ಆನಂತರವಷ್ಟೇ ಪರೀಕ್ಷೆ ಯಶಸ್ವಿಯೇ ಎಂಬುದು ತಿಳಿಯುತ್ತದೆ

ADVERTISEMENT

ಎರಡು ಹಂತದ ಎಂಜಿನ್ ವ್ಯವಸ್ಥೆಯ ಕ್ಷಿಪಣಿ

1. ರಾಕೆಟ್‌ನಲ್ಲಿ ಬಳಸುವ ಬೂಸ್ಟರ್‌ ಎಂಜಿನ್‌ ಮೊದಲಿಗೆ ಚಾಲೂ ಆಗುತ್ತದೆ. ಇದು ಕ್ಷಿಪಣಿಯನ್ನು ನಿಗದಿತ ಎತ್ತರಕ್ಕೆ ಕೊಂಡೊಯ್ಯುತ್ತದೆ. ಆ ನಿರ್ದೇಶಿತ ಎತ್ತರದಲ್ಲಿ ಕ್ಷಿಪಣಿಯ ವೇಗ ನಿಗದಿತ ಪ್ರಮಾಣವನ್ನು ಮುಟ್ಟಿದ ನಂತರ ಬೂಸ್ಟರ್‌ ಎಂಜಿನ್ ಕ್ಷಿಪಣಿಯಿಂದ ಬೇರೆಯಾಗುತ್ತದೆ

2. ಕ್ಷಿಪಣಿಯ ಟರ್ಬೊಜೆಟ್ ಎಂಜಿನ್ ಚಾಲೂ ಆಗುತ್ತದೆ. ನಂತರ ಕ್ಷಿಪಣಿಯಲ್ಲಿರುವ ರೆಕ್ಕೆಗಳು ತೆರೆದುಕೊಳ್ಳುತ್ತವೆ. ಪಥ ನಿರ್ದೇಶಕ ವ್ಯವಸ್ಥೆ  ಮತ್ತು ರೆಕ್ಕೆಗಳು ಇರುವುದರಿಂದ ಹಾರಾಟದ ಸಂದರ್ಭದಲ್ಲಿ ಕ್ಷಿಪಣಿಯ ಚಲನೆಯ ದಿಕ್ಕನ್ನು ಬದಲಿಸಲು ಅವಕಾಶವಿರುತ್ತದೆ. ಈ ಪಥ ನಿರ್ದೇಶಕ ವ್ಯವಸ್ಥೆಯೂ ಸಂಪೂರ್ಣ ದೇಶೀಯವಾದುದು

6 ಮೀಟರ್‌ – ಕ್ಷಿಪಣಿಯ ಎತ್ತರ

2.7 ಮೀಟರ್‌ – ರೆಕ್ಕಗಳೂ ಸೇರಿದಂತೆ ಕ್ಷಿಪಣಿಯ ಅಗಲ

200–300 ಕೆ.ಜಿ – ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ

1,000 ಕಿ.ಮೀ.– ದಾಳಿ ವ್ಯಾಪ್ತಿ

857 ಕಿ.ಮೀ.– ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿವೆ. ಈ ಕ್ಷಿಪಣಿಯನ್ನು ಸಬ್‌ ಸಾನಿಕ್ ಎಂದು ವರ್ಗೀಕರಿಸಲಾಗಿದೆ. ಶಬ್ದದ ವೇಗಕ್ಕಿಂತ (ಪ್ರತಿ ಗಂಟೆಗೆ 1,224 ಕಿ.ಮೀ) ಕಡಿಮೆ ವೇಗದಲ್ಲಿ ಚಲಿಸುವ ಕ್ಷಿಪಣಿ, ವಿಮಾನಗಳನ್ನು ಸಬ್‌ಸಾನಿಕ್‌ ಎಂದು ಕರೆಯುವುದು ವಾಡಿಕೆ

ಬ್ಯಾಲೆಸ್ಟಿಕ್ ಕ್ಷಿಪಣಿಗಳು
ಬ್ಯಾಲೆಸ್ಟಿಕ್ ಕ್ಷಿಪಣಿಗಳು ಗುರುತ್ವಾಕರ್ಷಣ ಬಲದ ಮೂಲಕ ಕಾರ್ಯ ನಿರ್ವಹಿಸುತ್ತವೆ. ರಾಕೆಟ್‌ ಎಂಜಿನ್‌ ಇಂತಹ ಕ್ಷಿಪಣಿಯನ್ನು ಭೂಮಿಯ ವಾತಾವರಣದ ಆಚೆಗೆ (ಬಾಹ್ಯಾಕಾಶ) ಹೊತ್ತೊಯ್ಯುತ್ತದೆ. ಆನಂತರ ಬಾಹ್ಯಾಕಾಶದಲ್ಲಿ ನಿಗದಿತ ಅಂತರವನ್ನು ಕ್ಷಿಪಣಿಗಳು ಎಂಜಿನ್‌ನ ಬಲವಿಲ್ಲದೆಯೇ ಕ್ರಮಿಸುತ್ತವೆ. ಇದನ್ನು ಫ್ರೀ ಫ್ಲೈಟ್ ಎಂದು ಕರೆಯಲಾಗುತ್ತದೆ. ನಂತರ ಭೂಮಿಯತ್ತ ಇವು ಬೀಳುತ್ತವೆ. ವೇಗವಾಗಿ ಚಲಿಸುತ್ತಿರುವ ಕಾರಣ ಬೀಳುವಾಗಲೂ ಇವು ಗುರಿಯತ್ತ ನುಗ್ಗುತ್ತಿರುತ್ತವೆ. ಭಾರಿ ದೂರದ ದಾಳಿ ವ್ಯಾಪ್ತಿ ಮತ್ತು ಭಾರಿ ವೇಗಕ್ಕೆ ಬ್ಯಾಲೆಸ್ಟಿಕ್ ತಂತ್ರಜ್ಞಾನ ಹೇಳಿ ಮಾಡಿಸಿದ್ದು. ಆದರೆ ಇವು ಎದುರಾಳಿ ಸೇನೆಯ ರೇಡಾರ್‌ಗಳಿಗೆ ಸುಲಭವಾಗಿ ಸಿಲುಕುತ್ತವೆ. ಹೀಗಾಗಿ ದಾಳಿಗೆ ಮುನ್ನವೇ ಇವನ್ನು ಎದುರಾಳಿ ಸೇನೆ ಹೊಡೆದುರುಳಿಸಲು ಅವಕಾಶವಿರುತ್ತದೆ.

ಕ್ರೂಸ್ ಕ್ಷಿಪಣಿಗಳು
ಇವು ಉಡಾವಣೆ ಆದಾಗಿನಿಂದ ಗುರಿಯನ್ನು ಧ್ವಂಸ ಮಾಡುವವರೆಗೂ ಎಂಜಿನ್‌ನ ಶಕ್ತಿಯಿಂದಲೇ ಚಲಿಸುತ್ತವೆ. ಇವು ಮಾನರಹಿತ ವಿಮಾನಗಳಾಗಿದ್ದು ಅತ್ಯಂತ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿವೆ. ಜಗತ್ತಿನ ಬಹುತೇಕ ಎಲ್ಲಾ ಸೇನೆಗಳ ಬಳಿ ಇರುವ ರೇಡಾರ್‌ಗಳ ಕಣ್ಣುಗಳನ್ನು ತಪ್ಪಿಸಲು ಜಗತ್ತಿನ ಎಲ್ಲಾ ಕ್ರೂಸ್ ಕ್ಷಿಪಣಿಗಳು ಶಕ್ತವಾಗಿವೆ. ಇವನ್ನು ಹತ್ತಿರದ ಗುರಿಗಳ ಮೇಲೆ ದಾಳಿ ನಡೆಸಲು ಬಳಸಲಾಗುತ್ತದೆ. ಮುಖ್ಯವಾಗಿ ಇವುಗಳು ಹೆಚ್ಚು ಭಾರದ ಸಿಡಿತಲೆಗಳನ್ನು ಹೊತ್ತೊಯ್ಯಲು ಶಕ್ತವಾಗಿವೆ

500 ಮೀ.– 4 ಕಿ.ಮೀ– ನಿರ್ಭಯ ಕ್ಷಿಪಣಿಯ ಹಾರಾಟ ವ್ಯಾಪ್ತಿ
100 ಕಿ.ಮೀ. – ಸಮುದ್ರಮಟ್ಟದಿಂದ ಭೂಮಿಯ ವಾತಾವರಣದ ಹೊರ ಅಂಚಿನ ಎತ್ತರ ಫ್ರೀ ಫ್ಲೈಟ್ ಅಂತರ

ರೇಡಾರ್‌ಗಳಿಗೆ ಸಿಲುಕುವುದಿಲ್ಲವೇಕೆ...

ನೆಲದಡಿ ಹುದುಗಿಸಿದ ವಸ್ತುಗಳನ್ನೂ ಪತ್ತೆ ಮಾಡುವ ಸಾಮರ್ಥ್ಯವಿರುವ ರೇಡಾರ್‌ಗಳು ಹಲವು ದೇಶಗಳ ಬಳಿ ಇವೆ. ಆದರೆ ವಿಮಾನ ಮತ್ತು ಕ್ಷಿಪಣಿಗಳ ಹಾರಾಟದ ಸರಾಸರಿ ಎತ್ತರದ ವ್ಯಾಪ್ತಿಯ ಮೇಲಷ್ಟೇ  ಏರ್‌ ರೇಡಾರ್‌ಗಳು ನಿಗಾ ವಹಿಸುತ್ತಿರುತ್ತವೆ. ಇನ್ನು ನೆಲದ ಮೇಲಿನ ವಸ್ತುಗಳ ಮೇಲೆ ಕಣ್ಣಿಡುವ ರೇಡಾರ್‌ಗಳು ವಿಮಾನ–ಕ್ಷಿಪಣಿಗಳ ಮೇಲೆ ನಿಗಾ ಇರಿಸುವುದಿಲ್ಲ. ಹೀಗಾಗಿ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುವ ಕ್ಷಿಪಣಿ– ವಿಮಾನಗಳನ್ನು ರೇಡಾರ್‌ಗಳು ಗುರುತಿಸುವುದು ಕಷ್ಟ.

ಆಧಾರ:  ಡಿಆರ್‌ಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.