ADVERTISEMENT

ನೀರು ನಿರ್ವಹಣೆ: ಅಗ್ರ ಐದರಲ್ಲಿ ಕರ್ನಾಟಕ

ನೀತಿ ಆಯೋಗದಿಂದ ಸೂಚ್ಯಂಕ ಬಿಡುಗಡೆ: ಮೊದಲ ಸ್ಥಾನದಲ್ಲಿ ಗುಜರಾತ್‌, ಕೊನೆಯಲ್ಲಿ ಬಿಹಾರ

ಪಿಟಿಐ
Published 14 ಜೂನ್ 2018, 19:30 IST
Last Updated 14 ಜೂನ್ 2018, 19:30 IST
ನೀರು ನಿರ್ವಹಣೆ: ಅಗ್ರ ಐದರಲ್ಲಿ ಕರ್ನಾಟಕ
ನೀರು ನಿರ್ವಹಣೆ: ಅಗ್ರ ಐದರಲ್ಲಿ ಕರ್ನಾಟಕ   

ನವದೆಹಲಿ: ನೀತಿ ಆಯೋಗ ಸಿದ್ಧಪಡಿಸಿದ ಸಮಗ್ರ ನೀರು ನಿರ್ವಹಣೆ ಸೂಚ್ಯಂಕದ (ಸಿಡಬ್ಲ್ಯುಎಂಐ) ಅತ್ಯುತ್ತಮ ಐದು ರಾಜ್ಯಗಳಲ್ಲಿ ಕರ್ನಾಟಕವೂ ಸ್ಥಾನ ಪಡೆದುಕೊಂಡಿದೆ.

ಸೂಚ್ಯಂಕದಲ್ಲಿ ಗುಜರಾತ್‌ ಮೊದಲ ಸ್ಥಾನ ಪಡೆದಿದ್ದರೆ ನಂತರ ಸ್ಥಾನಗಳಲ್ಲಿ ಮಧ್ಯಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿವೆ.

ಈಶಾನ್ಯ ಭಾರತ ಮತ್ತು ಹಿಮಾಲಯದ ತಪ್ಪಲಿನ ರಾಜ್ಯಗಳ ಪೈಕಿ ತ್ರಿಪುರಾ ಅತ್ಯುತ್ತಮ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಅಸ್ಸಾಂ ನಂತರದ ಸ್ಥಾನಗಳಲ್ಲಿವೆ.

ADVERTISEMENT

ಇದೇ ಮೊದಲ ಬಾರಿಗೆ, ನೀತಿ ಆಯೋಗವು ನೀರು ನಿರ್ವಹಣೆಯ ಸೂಚ್ಯಂಕವನ್ನು ಸಿದ್ಧಪಡಿಸಿದೆ. ಒಂಬತ್ತು ಕ್ಷೇತ್ರಗಳು ಮತ್ತು 28 ಸೂಚಕಗಳನ್ನು ಆಧಾರವಾಗಿ ಇರಿಸಿಕೊಂಡು ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ. ಅಂತರ್ಜಲ ಮಟ್ಟ, ನೀರಿನ  ಮೂಲಗಳ ಪುನಶ್ಚೇತನ, ನೀರಾವರಿ, ಬೇಸಾಯ ಪದ್ಧತಿಗಳು, ಕುಡಿಯುವ ನೀರು, ನೀತಿ ಮತ್ತು ಆಡಳಿತ ಮುಂತಾದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಜಲಶಾಸ್ತ್ರೀಯ ವೈವಿಧ್ಯದ ಆಧಾರದಲ್ಲಿ ರಾಜ್ಯಗಳನ್ನು ಈಶಾನ್ಯ ಮತ್ತು ಹಿಮಾಲಯ ತಪ್ಪಲಿನ ರಾಜ್ಯಗಳು ಮತ್ತು ಇತರ ರಾಜ್ಯಗಳು ಎಂದು ವಿಂಗಡಿಸಲಾಗಿದೆ.

ಸಹಕಾರಿ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯನ್ನು ಇಟ್ಟುಕೊಂಡು ವಿವಿಧ ಸಾಮಾಜಿಕ ಕ್ಷೇತ್ರಗಳಿಗೆ ನೀತಿ ಆಯೋಗವು ಅಭಿವೃದ್ಧಿ ಸೂಚಕಗಳನ್ನು ಸಿದ್ಧಪಡಿಸುತ್ತಿದೆ.

‘ಆರೋಗ್ಯಕರ ರಾಜ್ಯಗಳು, ಪ್ರಗತಿಪರ ಭಾರತ’ ಎಂಬ ಹೆಸರಿನಲ್ಲಿ ಆರೋಗ್ಯ ಮಾನದಂಡಗಳ ಶ್ರೇಯಾಂಕವನ್ನು ಫೆಬ್ರುವರಿಯಲ್ಲಿ ನೀತಿ ಆಯೋಗವು ಬಿಡುಗಡೆ ಮಾಡಿತ್ತು.

ಮುಂದಿನ ಹೆಜ್ಜೆಯಾಗಿ, ನೀರಿನ ಮಹತ್ವದ ಕಾರಣದಿಂದ ನೀರು ನಿರ್ವಹಣೆಯ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನೀರಿನ ನಿರ್ವಹಣೆಯನ್ನು ಇನ್ನಷ್ಟು ಉತ್ತಮಪಡಿಸುವುದಕ್ಕಾಗಿ ಸಿಡಬ್ಲ್ಯುಎಂಐಯನ್ನು ಸಿದ್ಧಪಡಿಸಲಾಗಿದೆ ಎಂದು ನೀತಿ ಆಯೋಗ ಹೇಳಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗದಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವಾಲಯ, ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಜಂಟಿಯಾಗಿ ಮಾಹಿತಿ ಸಂಗ್ರಹದ ಕೆಲಸವನ್ನು ಮಾಡಿವೆ.

ರಾಜ್ಯಗಳಿಗೆ ಮಾತ್ರವಲ್ಲದೆ, ಕೇಂದ್ರದ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಕೂಡ ಸೂಚ್ಯಂಕವು ಮಹತ್ವದ ಮಾಹಿತಿಯನ್ನು ನೀಡುತ್ತದೆ. ನೀರಿನ ನಿರ್ವಹಣೆಯನ್ನು ಉತ್ತಮಪಡಿಸಲು ಸೂಕ್ತ ಕಾರ್ಯತಂತ್ರ ಅನುಸರಿಸಲು ಬೇಕಾದ ದತ್ತಾಂಶ ಈ ಸೂಚ್ಯಂಕದಲ್ಲಿ ದೊರೆಯುತ್ತದೆ.

**

ಬಿಕ್ಕಟ್ಟು ತೀವ್ರ: ಅಪಾಯದಲ್ಲಿ ಜನ

ನೀರಿಗೆ ಸಂಬಂಧಿಸಿ ಅತ್ಯಂತ ದೊಡ್ಡ ಬಿಕ್ಕಟ್ಟನ್ನು ಭಾರತ ಎದುರಿಸುತ್ತಿದೆ. ಸಾವಿರಾರು ಜನರು ಮತ್ತು ಅವರ ಜೀವನೋಪಾಯಗಳು ನೀರಿನ ಕೊರತೆಯಿಂದಾಗಿ ಅಪಾಯದಲ್ಲಿವೆ ಎಂದು ನೀತಿ ಆಯೋಗದ ಸೂಚ್ಯಂಕ ಎಚ್ಚರಿಸಿದೆ.

60 ಕೋಟಿ ಜನರು ಅತಿ ಹೆಚ್ಚು ಅಥವಾ ತೀವ್ರ ನೀರಿನ ಕೊರತೆ ಎದುರಿಸುತ್ತಿದ್ದಾರೆ. ಸುರಕ್ಷಿತ ಕುಡಿಯುವ ನೀರು ದೊರೆಯದೆ ವರ್ಷಕ್ಕೆ ಕನಿಷ್ಠ ಎರಡು ಲಕ್ಷ ಜನರು ಸಾಯುತ್ತಿದ್ದಾರೆ. ಈ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ನೀತಿ ಆಯೋಗ ಹೇಳಿದೆ.

**

* ಅತ್ಯುತ್ತಮ ರಾಜ್ಯಗಳು (ಇತರ ರಾಜ್ಯಗಳು ವಿಭಾಗ): ಗುಜರಾತ್‌, ಮಧ್ಯಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ

* ಅತ್ಯುತ್ತಮ ರಾಜ್ಯಗಳು (ಈಶಾನ್ಯ ವಿಭಾಗ): ತ್ರಿಪುರಾ, ಹಿಮಾಚಲ ಪ್ರದೇಶ, ಸಿಕ್ಕಿಂ, ಅಸ್ಸಾಂ

* ಪಟ್ಟಿಯ ಕೊನೆಯ ರಾಜ್ಯಗಳು: ಜಾರ್ಖಂಡ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ

***

2030ಕ್ಕೆ ನೀರಿನ ಬೇಡಿಕೆ ದುಪ್ಪಟ್ಟಾಗಲಿದೆ. ಜಿಡಿಪಿಯಲ್ಲಿ ಶೇ 6ರಷ್ಟು ನಷ್ಟವಾಗಲಿದೆ.

(ನೀರು ನಿರ್ವಹಣೆ ಸೂಚ್ಯಂಕ ವರದಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.