ADVERTISEMENT

ನೀರು ಬಿಡಲು ರಾಜ್ಯ ನಕಾರ

ಕಾವೇರಿ: 10 ಟಿಎಂಸಿ ಅಡಿ ನೀರಿಗೆ ತಮಿಳುನಾಡು ಬೇಡಿಕೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 19:59 IST
Last Updated 1 ಜೂನ್ 2013, 19:59 IST

ನವದೆಹಲಿ: ಕಾವೇರಿ ಜಲಾಶಯಗಳಿಂದ ತಕ್ಷಣ 10 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಬೇಕೆಂಬ ತಮಿಳುನಾಡು ಬೇಡಿಕೆಯನ್ನು ಕರ್ನಾಟಕ ಶನಿವಾರ ತಿರಸ್ಕರಿಸಿತು. ತನ್ನ ಜಲಾಶಯಗಳಲ್ಲಿ ಸಂಗ್ರಹ ಕಡಿಮೆ ಇರುವುದರಿಂದ ನೆರೆಯ ರಾಜ್ಯಕ್ಕೆ ಸದ್ಯಕ್ಕಂತೂ ನೀರು ಹರಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿತು.

ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಡಾ. ಎಸ್.ಕೆ. ಸರ್ಕಾರ್ ಅವರ ಅಧ್ಯಕ್ಷತೆಯಲ್ಲಿ ಕಾವೇರಿ ನ್ಯಾಯಮಂಡಳಿ ತೀರ್ಪು ಜಾರಿಗೆ ರಚಿಸಲಾಗಿರುವ `ಉಸ್ತುವಾರಿ ಸಮಿತಿ' ಚೊಚ್ಚಲ ಸಭೆಯಲ್ಲಿ ತಮಿಳುನಾಡು 10 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಬೇಕೆಂಬ ಬೇಡಿಕೆ ಮಂಡಿಸಿತು. ಕರ್ನಾಟಕವು ಕಾವೇರಿ ಜಲಾಶಯಗಳಲ್ಲಿ ಬರೀ 3.77 ಟಿಎಂಸಿ ಅಡಿ ಸಂಗ್ರಹ ಇರುವುದರಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ಖಚಿತಪಡಿಸಿತು.

ಸಭೆಯಲ್ಲಿ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ತಮಿಳುನಾಡು ಮುಖ್ಯ ಕಾರ್ಯದರ್ಶಿ ಶೀಲಾ ಬಾಲಕೃಷ್ಣನ್, ಕೇರಳ ಮುಖ್ಯ ಕಾರ್ಯದರ್ಶಿ ಇ.ಕೆ. ಭರತ್ ಭೂಷಣ್, ಪುದುಚೇರಿ ಮುಖ್ಯ ಕಾರ್ಯದರ್ಶಿ ಚೇತನ್ ಬಿ. ಸಾಂಘಿ, ಕೇಂದ್ರ ಜಲ ಆಯೋಗದ ಅಧ್ಯಕ್ಷ ರಾಜೇಶ್ ಕುಮಾರ್ (ಎಲ್ಲರೂ ಸಮಿತಿ ಸದಸ್ಯರು) ಮತ್ತು ಆಯೋಗದ ಮುಖ್ಯ ಎಂಜಿನಿಯರ್ ಆರ್.ಕೆ. ಗುಪ್ತಾ (ಸಮಿತಿ ಸದಸ್ಯ ಕಾರ್ಯದರ್ಶಿ) ಭಾಗವಹಿಸಿದ್ದರು.

ಕಾವೇರಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದರಿಂದ ಸಭೆ ಯಾವುದೇ ತೀರ್ಮಾನ ಕೈಗೊಳ್ಳದೆ ಅಪೂರ್ಣಗೊಂಡಿತು. ಸದ್ಯದಲ್ಲೇ ಆರಂಭ ಆಗಲಿರುವ ಮುಂಗಾರು ಪರಿಸ್ಥಿತಿ ಹಾಗೂ ನೀರಿನ ಹರಿವಿನ ಪ್ರಮಾಣ ನೋಡಿಕೊಂಡು ಸೂಕ್ತ ನಿರ್ಧಾರ ಮಾಡಲು ಇದೇ 12ರಂದು ಪುನಃ ಸಭೆ ಸೇರಲು ಸಮಿತಿ ನಿರ್ಣಯಿಸಿತು.

ನ್ಯಾಯಮಂಡಳಿ ತೀರ್ಪಿನಂತೆ ಕರ್ನಾಟಕ ಜೂನ್ ತಿಂಗಳಲ್ಲಿ ಕಾವೇರಿ ನದಿಯಿಂದ 10 ಟಿಎಂಸಿ ಅಡಿ ನೀರು ಹರಿಸಬೇಕಾಗಿದೆ. ತಕ್ಷಣವೇ ಕೃಷಿ ಚಟುವಟಿಕೆ ಆರಂಭವಾಗುವುದರಿಂದ ತಡ ಮಾಡದೆ ನೀರು ಬಿಡಬೇಕೆಂದು ತಮಿಳುನಾಡು ಆಗ್ರಹಿಸಿತು. ಕಾವೇರಿ ನದಿ ಪಾತ್ರದಲ್ಲಿರುವ ನಾಲ್ಕು ಜಲಾಶಯಗಳಲ್ಲಿರುವ ನೀರಿನ ಸಂಗ್ರಹ 3.77 ಟಿಎಂಸಿ ಅಡಿ. ಇದು ಬೆಂಗಳೂರು, ಮೈಸೂರು ಮತ್ತಿತರ ನಗರಗಳಿಗೆ ಕುಡಿಯುವ ಉದ್ದೇಶಕ್ಕೆ ಅಗತ್ಯವಿರುವುದರಿಂದ ಸದ್ಯಕ್ಕೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಪ್ರತಿಪಾದಿಸಿತು.

`ಹೋದ ವರ್ಷ ಮಳೆ ಸರಿಯಾಗಿ ಬೀಳದೆ ನೀರಿನ ಅಭಾವ ತಲೆದೋರಿದ್ದರಿಂದ ಕರ್ನಾಟಕ ಮತ್ತು ತಮಿಳುನಾಡು ಜಲಾಶಯಗಳಲ್ಲಿ ಅತ್ಯಂತ ಕಡಿಮೆ ಸಂಗ್ರಹವಿದೆ. 2013ರ ಮೇ 31ಕ್ಕೆ ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ 3.77 ಟಿಎಂಸಿ ಅಡಿ ಹಾಗೂ ತಮಿಳುನಾಡಿನ ಮೆಟ್ಟೂರಿನಲ್ಲಿ 3.73 ಟಿಎಂಸಿ ಅಡಿ ಸಂಗ್ರಹವಿದೆ. ಹವಾಮಾನ ಇಲಾಖೆ ವರದಿಯಂತೆ ಮುಂಗಾರು ಸಕಾಲಕ್ಕೆ ಆರಂಭವಾಗಲಿದ್ದು, ಒಳ ಹರಿವಿನ ಬಗ್ಗೆ ನಿಖರ ಮಾಹಿತಿ ಸಿಗಲಿದೆ' ಎಂದು ಜಲ ಆಯೋಗದ ಅಧ್ಯಕ್ಷರು ಸ್ಪಷ್ಟಪಡಿಸಿದರು.

ಕುರುವೈ ಭತ್ತದ ಬಿತ್ತನೆಗೆ ಜೂನ್ 20ರವರೆಗೆ ತಮಿಳುನಾಡಿಗೆ 1.2 ಟಿಎಂಸಿ ಅಡಿ ನೀರು ಅಗತ್ಯವಿದೆ ಎಂದು ನ್ಯಾಯಮಂಡಳಿ ಅಂದಾಜು ಮಾಡಿದೆ. ಹಾಗೆ ಕರ್ನಾಟಕದ ಕೃಷಿ ಚಟುವಟಿಕೆಗೆ 0.9 ಟಿಎಂಸಿ ಅಡಿ ನೀರು ಬೇಕಾಗಿದೆ. ಉಭಯ ರಾಜ್ಯಗಳ ಜಲಾಶಯಗಳಲ್ಲಿರುವ ನೀರಿನ ಸಂಗ್ರಹ, ಮುಂದಿನ 10 ದಿನಗಳಿಗೆ ಅಗತ್ಯವಿರುವ ನೀರು ಹಾಗೂ ಸಕಾಲಿಕ ಮುಂಗಾರಿನ ನಿರೀಕ್ಷೆ ಹಿನ್ನೆಲೆಯಲ್ಲಿ ಈ ತಿಂಗಳ 12ರಂದು ಮತ್ತೆ ಸಭೆ ಸೇರಿ ಚರ್ಚಿಸಲು ಉಸ್ತುವಾರಿ ಸಮಿತಿ ಅಧ್ಯಕ್ಷರು ತೀರ್ಮಾನಿಸಿದರು.

ಹಿಂದಿನ ವರ್ಷ ಕರ್ನಾಟಕ 53 ಟಿಎಂಸಿ ಅಡಿ ನೀರು ಕಡಿಮೆ ಬಿಡುಗಡೆ ಮಾಡಿದೆ. ಈಗ ಜೂನ್ ತಿಂಗಳಲ್ಲಿ ನ್ಯಾಯಮಂಡಳಿ ತೀರ್ಪಿನಂತೆ 10 ಟಿಎಂಸಿ ಅಡಿ ಹರಿಸಬೇಕಾಗಿದೆ. ಒಂದೇ ಸಲಕ್ಕೆ 10 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಲಾಗದಿದ್ದರೆ ಹತ್ತು ದಿನಗಳಿಗೊಮ್ಮೆ ಮೂರು ಟಿಎಂಸಿ ಅಡಿಯಂತೆ ಬಿಡುಗಡೆ ಮಾಡಬೇಕೆಂದು ತಮಿಳುನಾಡು ಒತ್ತಾಯ ಮಾಡಿತು.

ತಮಿಳುನಾಡಿನ ಬೇಡಿಕೆ ತಿರಸ್ಕರಿಸಿದ ರಾಜ್ಯದ ಮುಖ್ಯ ಕಾರ್ಯದರ್ಶಿಗಳು, `ಎರಡು ವರ್ಷ ಮಾತ್ರ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಉಳಿದ ವರ್ಷಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಹರಿದು ಹೋಗಿದೆ. ಹಿಂದಿನ ವರ್ಷ ನೀರಿನ ಅಭಾವದ ಹಿನ್ನೆಲೆಯಲ್ಲಿ ತಜ್ಞರ ತಂಡ ಉಭಯ ರಾಜ್ಯಕ್ಕೆ ಭೇಟಿ ನೀಡಿದೆ. ಕಾವೇರಿ ಉಸ್ತುವಾರಿ ಸಮಿತಿ ಐದು ಸಲ ಸಭೆ ಸೇರಿ ಚರ್ಚಿಸಿದೆ. ಸಂಕಷ್ಟದ ಗಳಿಗೆಯಲ್ಲೂ ಸುಪ್ರೀಂಕೋರ್ಟ್ ಆದೇಶ ಪಾಲಿಸಿದ್ದು, ನಮ್ಮಿಂದ ಯಾವುದೇ ಲೋಪ ಆಗಿಲ್ಲ' ಎಂದು ತಿರುಗೇಟು ನೀಡಿದರು.

ಕಾವೇರಿ ಉಸ್ತುವಾರಿ ಸಮಿತಿ ಕಾರ್ಯಸೂಚಿಯಲ್ಲಿದ್ದ ಉಳಿದ ವಿಷಯಗಳ ಬಗ್ಗೆ ರಾಜ್ಯದ ನಿಲುವನ್ನು ಲಿಖಿತ ರೂಪದಲ್ಲಿ ಕಳುಹಿಸುವುದಾಗಿ ರಂಗನಾಥ್ ಹೇಳಿದರು. ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿಗಳ ಜತೆ ಸಮಾಲೋಚಿಸಿ `ಅಜೆಂಡಾ'ದಲ್ಲಿ ಇರುವ ವಿಷಯಗಳ ಬಗ್ಗೆ ನಿಲುವು ಸ್ಪಷ್ಟಪಡಿಸುವುದಾಗಿ ಅವರು ಸಭೆಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.