ADVERTISEMENT

`ನೆರೆಹೊರೆ ಸಂಬಂಧ ಸುಧಾರಣೆಗೆ ಆದ್ಯತೆ'

ನೂತನ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 19:59 IST
Last Updated 1 ಆಗಸ್ಟ್ 2013, 19:59 IST

ನವದೆಹಲಿ (ಪಿಟಿಐ): ನೆರೆಯ ರಾಷ್ಟ್ರಗಳೊಂದಿಗೆ ಸಂಬಂಧ ಸುಧಾರಿಸಲು ಮೊದಲ ಆದ್ಯತೆ ನೀಡುವುದಾಗಿ ತಿಳಿಸಿರುವ ನೂತನ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್, `ಭಾರತವು ಭಯೋತ್ಪಾದನೆ ಮುಕ್ತ ಪರಿಸರದಲ್ಲಿ ಪಾಕಿಸ್ತಾನದೊಡನೆ ಸಹಕಾರದ ಬಾಂಧವ್ಯ ಹೊಂದಲು ಬಯಸಿದೆ' ಎಂದು ಹೇಳಿದ್ದಾರೆ.

ಈ ಹಿಂದೆ ಜರ್ಮನಿಯ ರಾಯಭಾರಿ ಮತ್ತು ಆಸ್ಟ್ರೇಲಿಯಾದ ಹೈಕಮಿಷನರ್ ಆಗಿದ್ದ 59 ವರ್ಷದ ಸುಜಾತಾ ಮುಂದಿನ ಎರಡು ವರ್ಷಗಳ ಅವಧಿಗೆ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರಂಜನ್ ಮಥಾಯ್ ಅವರಿಂದ ಅಧಿಕಾರ ವಹಿಸಿಕೊಂಡ ನಂತರ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದರು.

`ಯಾವಾಗಲೂ ಪಾಕ್‌ದೊಂದಿಗೆ ಶಾಂತಿಯುತ ಮತ್ತು ಸಹಕಾರದ ಸಂಬಂಧಗಳನ್ನು ಬೆಳೆಸುವುದು ಭಾರತದ ನೀತಿಯಾಗಿದ್ದು, ಇದು ಸ್ವಾಭಾವಿಕವಾಗಿ, ಹಿಂಸಾಚಾರ ಮತ್ತು ಭಯೋತ್ಪಾದನೆ ಮುಕ್ತ ಪರಿಸರವನ್ನು ಅವಲಂಬಿಸಿದೆ' ಎಂದು ನುಡಿದರು.

`ತಕ್ಷಣಕ್ಕೆ ನೆರೆಯ ಮಿತ್ರ ದೇಶಗಳೊಡನೆ ಬಾಂಧವ್ಯ ವೃದ್ಧಿಗೆ ಆದ್ಯತೆ ನೀಡಿ, ನಂತರ ಜಗತ್ತಿನೆಲ್ಲೆಡೆ ಇರುವ ಭಾರತದ ತಂತ್ರಕೌಶಲ್ಯಗಳ ಪಾಲುದಾರ ರಾಷ್ಟ್ರಗಳೊಂದಿಗೆ ಸಂಬಂಧ ಬಲಪಡಿಸಲು ಗಮನ ಹರಿಸುವುದಾಗಿ' ಸುಜಾತಾ ಸಿಂಗ್ ತಿಳಿಸಿದರು.

ಭಾರತೀಯ ಸೇನೆಯ ಕ್ಯಾಪ್ಟನ್ ಸೌರಭ್ ಕಾಲಿಯಾ ಅವರನ್ನು ಪಾಕ್ ಸೈನಿಕನೊಬ್ಬ ಹತ್ಯೆ ಮಾಡಿದ ಕ್ರೂರತೆಯನ್ನು ವಿಡಿಯೊದಲ್ಲಿ ವರ್ಣಿಸಿದ ಘಟನೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಪಾಕ್ ಸರ್ಕಾರದೊಡನೆ ಚರ್ಚಿಸುವುದಾಗಿ ಹೇಳಿದರು. ಭಾರತದ ಯೋಧರಿಗೆ ಪಾಕ್ ಸೇನೆ ನೀಡಿದ ಹಿಂಸೆಯನ್ನು ಜಿನೀವಾ ಸಮಾವೇಶದ ನಿರ್ಣಯದಡಿ ಬಲವಾಗಿ ಖಂಡಿಸುವುದಾಗಿ ನುಡಿದರು.

ಭೂತಾನ್‌ಗೆ ಭಾರತ ಸೀಮೆಎಣ್ಣೆ ಸಬ್ಸಿಡಿ ರದ್ದುಪಡಿಸಿರುವುದರಿಂದ ದ್ವಿಪಕ್ಷೀಯ ಬಾಂಧವ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯದಲ್ಲಿಯೇ ತಾವು ಆ ದೇಶಕ್ಕೆ ಭೇಟಿ ನೀಡಿ, ಪ್ರಧಾನಿ ಮನಮೋಹನ್ ಸಿಂಗ್ ಆಹ್ವಾನದ ಮೇರೆಗೆ ಭಾರತಕ್ಕೆ ಬರುತ್ತಿರುವ ಭೂತಾನ್ ಪ್ರಧಾನಿ ತ್ಸೇರಿಂಗ್ ಟಾಬ್‌ಗೇ ಭೇಟಿಗೂ ಪೂರ್ವಭಾವಿಯಾಗಿ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.