ADVERTISEMENT

ನೌಕಾ ಸಮರಾಭ್ಯಾಸಕ್ಕೆ ಭಾರತದ ಆಹ್ವಾನ ತಿರಸ್ಕರಿಸಿದ ಮಾಲ್ಡೀವ್ಸ್

ಏಜೆನ್ಸೀಸ್
Published 27 ಫೆಬ್ರುವರಿ 2018, 12:52 IST
Last Updated 27 ಫೆಬ್ರುವರಿ 2018, 12:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಾರ್ಚ್‌ನಲ್ಲಿ ನಡೆಯುವ ‘ಮಿಲನ್’ ನೌಕಾ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುವಂತೆ ಭಾರತ ನೀಡಿದ ಆಹ್ವಾನವನ್ನು ಮಾಲ್ಡೀವ್ಸ್ ತಿರಸ್ಕರಿಸಿದೆ.

‘ಆಹ್ವಾನ ತಿರಸ್ಕರಿಸುವುದಕ್ಕೆ ಮಾಲ್ಡೀವ್ಸ್ ಯಾವುದೇ ಕಾರಣ ನೀಡಿಲ್ಲ’ ಎಂದು ನೌಕಾಪಡೆಯ ಅಡ್ಮಿರಲ್ ಸುನಿಲ್ ಲಾಂಬಾ ತಿಳಿಸಿದ್ದಾರೆ.

ಮಾರ್ಚ್ 6ರಿಂದ ಎಂಟು ದಿನಗಳ ಮಹಾ ಸಮರಾಭ್ಯಾಸ ನಡೆಯಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ನಡೆಯುವ ಸಮರಾಭ್ಯಾಸದಲ್ಲಿ ಕನಿಷ್ಠ 16 ರಾಷ್ಟ್ರಗಳು ಭಾಗವಹಿಸಲಿವೆ.

ADVERTISEMENT

ಮಾಲ್ಡೀವ್ಸ್‌ನಲ್ಲಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರು ತುರ್ತು ಪರಿಸ್ಥಿತಿ ಹೇರಿದ್ದಾರೆ. ಸಮರಾಭ್ಯಾಸದಲ್ಲಿ ಪಾಲ್ಗೊಳ್ಳದಿರಲು ಇದೇ ಕಾರಣ ಎನ್ನಲಾಗಿದೆ.

ಸುಪ್ರೀಂ ಕೋರ್ಟ್ ಆದೇಶ ಮೀರಿ ಯಮೀನ್ ಅವರು ಇದೇ 5ರಂದು ತುರ್ತು ಪರಿಸ್ಥಿತಿ ಘೋಷಿಸಿದ್ದರು. ಭಾರತ ಇದನ್ನು ಕಟುವಾಗಿ ಟೀಕಿಸಿದೆ.

ಇಂಡೋ–ಪೆಸಿಫಿಕ್ ವಲಯದಲ್ಲಿ ಚೀನಾ ಸೇನೆಯ ಪ್ರಾಬಲ್ಯ ಹೆಚ್ಚುತ್ತಿರುವ ಬೆನ್ನಲ್ಲೇ ಭಾರತ ಈ ಸಮರಾಭ್ಯಾಸವನ್ನು ಆಯೋಜಿಸಿದೆ. 1995ರಲ್ಲಿ ಮೊದಲ ಬಾರಿ ‘ಮಿಲನ್’ ಆಯೋಜನೆ ಆಗಿತ್ತು.

ಹಿಂದೂ ಮಹಾಸಾಗರ ವಲಯದ ರಾಷ್ಟ್ರಗಳ ಜೊತೆ ಉತ್ತಮ ಬಾಂಧವ್ಯ ಹೊಂದುವುದು ಮತ್ತು ಸಮಾನ ಹಿತಾಸಕ್ತಿ ಕುರಿತು ಚರ್ಚಿಸುವುದು ‘ಮಿಲನ್’ ಉದ್ದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.