ADVERTISEMENT

ಪದ್ಮಾವತಿ ಅಲ್ಲ ಪದ್ಮಾವತ್‌!

ಯುಎ ಪ್ರಮಾಣಪತ್ರ ನೀಡಲು ಸೆನ್ಸಾರ್‌ ಮಂಡಳಿ ನಿರ್ಧಾರ

ಪಿಟಿಐ
Published 30 ಡಿಸೆಂಬರ್ 2017, 20:20 IST
Last Updated 30 ಡಿಸೆಂಬರ್ 2017, 20:20 IST
ಪದ್ಮಾವತಿ ಅಲ್ಲ ಪದ್ಮಾವತ್‌!
ಪದ್ಮಾವತಿ ಅಲ್ಲ ಪದ್ಮಾವತ್‌!   

ಮುಂಬೈ: ದೇಶದಾದ್ಯಂತ ಪರ–ವಿರೋಧ ಚರ್ಚೆ ಹುಟ್ಟುಹಾಕಿದ್ದ, ಸಂಜಯ್‌ ಲೀಲಾ ಬನ್ಸಾಲಿ ಅವರ ‘ಪದ್ಮಾವತಿ’ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ– ಸೆನ್ಸಾರ್‌ ಮಂಡಳಿ) ‘ಯುಎ’ ಪ್ರಮಾಣಪತ್ರ ನೀಡಲು ನಿರ್ಧರಿಸಿದೆ.

ಚಲನಚಿತ್ರದ ಯಾವುದೇ ಭಾಗಕ್ಕೆ ಕತ್ತರಿ ಹಾಕಲು ಅದು ಸೂಚಿಸಿಲ್ಲ. ಆದರೆ, ಚಿತ್ರದ ಹೆಸರನ್ನು ‘ಪದ್ಮಾವತ್‌’ ಎಂದು ಬದಲಾಯಿಸುವಂತೆ ಸೆನ್ಸಾರ್‌ ಮಂಡಳಿಯು ನಿರ್ದೇಶಕರಿಗೆ ಸೂಚಿಸಿದೆ. ಇದಲ್ಲದೆ ಇತರ ನಾಲ್ಕು ಮಾರ್ಪಾಡುಗಳನ್ನು ಮಾಡುವಂತೆಯೂ ನಿರ್ದೇಶಿಸಿದೆ.

ಚಿತ್ರದಲ್ಲಿ 26 ದೃಶ್ಯಾವಳಿಗಳಿಗೆ ಕತ್ತರಿ ಹಾಕಲು ಮಂಡಳಿ ಸೂಚಿಸಿದೆ ಎಂಬ ವದಂತಿ ಆರಂಭದಲ್ಲಿ ಹರಿದಾಡಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿ ಹೇಳಿಕೆ ಬಿಡುಗಡೆ ಮಾಡಿದ ಸೆನ್ಸಾರ್‌ ಮಂಡಳಿ ಅಧ್ಯಕ್ಷ ಪ್ರಸೂನ್‌ ಜೋಷಿ, ‘ಚಿತ್ರದ ಹೆಸರು ಬದಲಾವಣೆ ಸೇರಿ ಕೇವಲ ಐದು ಬದಲಾವಣೆಗಳನ್ನು ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಹಕ್ಕು ನಿರಾಕರಣೆ ಹೇಳಿಕೆಗಳಲ್ಲೂ (ಡಿಸ್‌ಕ್ಲೇಮರ್‌) ಕೆಲವು ಬದಲಾವಣೆಗಳಿಗೆ ಮಂಡಳಿ ಸಲಹೆ ನೀಡಿದೆ. ಚಿತ್ರದಲ್ಲಿ ‘ಸತಿ’ ಪದ್ಧತಿಯನ್ನು ವೈಭವೀಕರಿಸಲಾಗಿಲ್ಲ ಎಂಬುದನ್ನು ನಮೂದಿಸುವಂತೆ ನಿರ್ದೇಶನ ನೀಡಿದೆ. ಜೊತೆಗೆ, ಬಿಂಬಿಸಲಾಗಿರುವ ಪಾತ್ರಕ್ಕೆ ಸರಿಹೊಂದುವ ರೀತಿಯಲ್ಲಿ ‘ಘೂಮರ್‌’ ಹಾಡಿನಲ್ಲೂ ಅಗತ್ಯವಾದ ಮಾರ್ಪಾಡುಗಳಿಗೆ ಸಲಹೆ ನೀಡಿದೆ.

ಒಪ್ಪಿಗೆ: ಪ್ರಸ್ತಾವಿತ ಬದಲಾವಣೆಗಳಿಗೆ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರು ಸಂಪೂರ್ಣವಾಗಿ ಒಪ್ಪಿದ್ದಾರೆ ಎಂದೂ ಜೋಷಿ ಹೇಳಿದ್ದಾರೆ.

ಮಂಡಳಿಯ ಪರಿಶೀಲನಾ ಸಮಿತಿಯು ಗುರುವಾರ (ಡಿ.28) ಸಭೆ ಸೇರಿತ್ತು. ಚಿತ್ರಕ್ಕೆ ಯುಎ ಪ್ರಮಾಣಪತ್ರ ನೀಡುವ ಬಗ್ಗೆ ಅಂದು ನಿರ್ಧಾರ ಕೈಗೊಳ್ಳಲಾಗಿತ್ತು.ಇದಕ್ಕೂ ಮೊದಲು, ಬನ್ಸಾಲಿ ಅವರು ಸಂಸದೀಯ ಸಮಿತಿಯ ಮುಂದೆ ಹಾಜರಾಗಿದ್ದರು. 16ನೇ ಶತಮಾನದಲ್ಲಿ ಮಲಿಕ್‌ ಮೊಹಮ್ಮದ್‌ ಜಯಸಿ ಅವರು ರಚಿಸಿದ್ದ ‘ಪದ್ಮಾವತ್‌’ ಮಹಾಕಾವ್ಯ ಆಧರಿಸಿ ಈ ಚಲನಚಿತ್ರವನ್ನು ತಯಾರಿಸಲಾಗಿದೆ ಎಂದು ಹೇಳಿದ್ದರು.

ಚಿತ್ರ ಹುಟ್ಟು ಹಾಕಿದ್ದ ಚರ್ಚೆಯನ್ನು ಗಮನದಲ್ಲಿರಿಸಿಕೊಂಡು ಸೆನ್ಸಾರ್‌ ಮಂಡಳಿಯ ಅಂತಿಮ ನಿರ್ಧಾರದ ಬಗ್ಗೆ ಅಭಿಪ್ರಾಯ ನೀಡಲು ಮೂವರು ಸದಸ್ಯರ ವಿಶೇಷ ಸಮಿತಿಯನ್ನೂ ನೇಮಕ ಮಾಡಲಾಗಿತ್ತು.

ಈಗಲೇ ಹೇಳಲಾಗದು: ಕರ್ಣಿ ಸೇನಾ

ಜೈಪುರ: ‘ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ನಿರ್ಧಾರದ ಬಗ್ಗೆ ಈಗಲೇ ಹೇಳಲಾಗದು’ ಎಂದು ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿರುವ ರಜಪೂತ ಕರ್ಣಿ ಸೇನಾದ ಸಂಸ್ಥಾಪಕ ಲೋಕೇಂದ್ರ ಸಿಂಗ್‌ ಕಲ್ವಿ ಹೇಳಿದ್ದಾರೆ.

‘ಹಲವು ವಿಚಾರಗಳ ಬಗ್ಗೆ ಇನ್ನೂ ಸ್ಪಷ್ಟನೆ ಸಿಗಬೇಕಾಗಿದೆ. ಈ ವಿಚಾರದಲ್ಲಿ ನನ್ನ ನಿಲುವು ಸ್ಪಷ್ಟವಾಗಿದೆ. ಅದು ಎಲ್ಲರಿಗೂ ತಿಳಿದಿದೆ’ ಎಂದು ಅವರು ಹೇಳಿದ್ದಾರೆ.

‘ಚಿತ್ರವನ್ನು ಒಂಬತ್ತು ತಜ್ಞರ ಸಮಿತಿ ವೀಕ್ಷಿಸಲಿದೆ ಎಂದು ಹೇಳಲಾಗಿತ್ತು. ಆದರೆ, ಮೂರು ಜನರು ಮಾತ್ರ ನೋಡಿದ್ದಾರೆ. ಸಮಿತಿಯ ಶಿಫಾರಸುಗಳೇನು ಎಂಬುದರ ಬಗ್ಗೆ ಜನರಿಗೆ ಮಾಹಿತಿ ಇಲ್ಲ’ ಎಂದು ಅವರು ಹೇಳಿದ್ದಾರೆ.

ಮುಂದೇನು?

ಸೂಚಿಸಲಾದ ಮಾರ್ಪಾಡುಗಳನ್ನು ಅಳವಡಿಸಿ ಚಿತ್ರವನ್ನು ಮಂಡಳಿಗೆ ಸಲ್ಲಿಸಬೇಕು. ಆ ನಂತರ ಅದು ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡಲಿದೆ.

*

ಇದೊಂದು ಅಸಾಮಾನ್ಯ ಮತ್ತು ಅತ್ಯಂತ ಕಷ್ಟದ ಪರಿಸ್ಥಿತಿ. ಸಮತೋಲನದ ನಡೆಯಿಂದಾಗಿ ಸಕಾರಾತ್ಮಕವಾಗಿ ಇದನ್ನು ಪರಿಹರಿಸಲು ಸಾಧ್ಯವಾಯಿತು.

–ಪ್ರಸೂನ್‌ ಜೋಷಿ, ಸಿಬಿಎಫ್‌ಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.