ADVERTISEMENT

ಪರಾರಿಯಾದವರ ಆಸ್ತಿ ಜಪ್ತಿ ಮಸೂದೆಗೆ ಸಂಪುಟ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST
ಪರಾರಿಯಾದವರ ಆಸ್ತಿ ಜಪ್ತಿ ಮಸೂದೆಗೆ ಸಂಪುಟ ಒಪ್ಪಿಗೆ
ಪರಾರಿಯಾದವರ ಆಸ್ತಿ ಜಪ್ತಿ ಮಸೂದೆಗೆ ಸಂಪುಟ ಒಪ್ಪಿಗೆ   

ನವದೆಹಲಿ: ದೊಡ್ಡ ಮಟ್ಟದ ಆರ್ಥಿಕ ಅಪರಾಧಗಳನ್ನು ಎಸಗಿ ದೇಶ ಬಿಟ್ಟು ಪರಾರಿಯಾಗುವ ಆರೋಪಿಗಳು ವಂಚನೆ ಮೂಲಕ ಗಳಿಸಿದ ಹಣ ಮತ್ತು ಅವರ ಹೆಸರಿನಲ್ಲಿ ಇರುವ ಇತರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ‘ಪರಾರಿಯಾದ ಆರ್ಥಿಕ ಅಪರಾಧಿಗಳ ಮಸೂದೆ 2018’ಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

ಇದರಿಂದಾಗಿ, ಇದೇ 5ರಿಂದ ಪುನರಾರಂಭವಾಗಲಿರುವ ಸಂಸತ್ತಿನ ಬಜೆಟ್‌ ಅಧಿವೇಶನದಲ್ಲಿ ಮಸೂದೆ ಮಂಡನೆಗೆ ಅವಕಾಶ ಸಿಗಲಿದೆ.

ಮಸೂದೆ ಅಂಗೀಕಾರ ಆದರೆ ₹100 ಕೋಟಿಗಿಂತ ಹೆಚ್ಚು ಮೊತ್ತದ ವಂಚನೆ ಆರೋಪ ಪ್ರಕರಣಗಳಿಗೆ ಅನ್ವಯ ಆಗಲಿದೆ. ಆರೋಪಿಯ ಹೆಸರಿನಲ್ಲಿರುವ ಆಸ್ತಿಯ ಜತೆಗೆ ಅವರ ಬೇನಾಮಿ ಆಸ್ತಿಗಳನ್ನೂ ಜಪ್ತಿ ಮಾಡಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ADVERTISEMENT

ವಿದೇಶದಲ್ಲಿರುವ ಆಸ್ತಿಗಳನ್ನು ವಶಪಡಿಸಿಕೊಳ್ಳುವುದಕ್ಕೂ ಮಸೂದೆ ಅಧಿಕಾರ ನೀಡುತ್ತದೆ. ಆದರೆ, ಅದಕ್ಕೆ ಆ ಆಸ್ತಿ ಇರುವ ದೇಶದ ಸಹಕಾರವೂ ಅಗತ್ಯ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ಸರ್ಕಾರದ ವಿರುದ್ಧ ಕಾನೂನು ಸಮರ ನಡೆಸಲು ಆರೋಪಿಗೆ ಇರುವ ಹಕ್ಕನ್ನು ಮಸೂದೆಯು ರದ್ದು ಮಾಡುತ್ತದೆ.

ಈ ಮಸೂದೆಯು ಅಂಗೀಕಾರವಾದರೆ ಅದು ಹೊಸ ಪ್ರಕರಣಗಳಿಗೆ ಮಾತ್ರವಲ್ಲ, ಹಿಂದಿನ ಪ್ರಕರಣಗಳಿಗೂ ಅನ್ವಯ ಆಗಲಿದೆ. ತನಿಖೆ ತಪ್ಪಿಸಿಕೊಳ್ಳುವುದಕ್ಕಾಗಿ ಈಗಾಗಲೇ ವಿದೇಶಕ್ಕೆ ಪರಾರಿಯಾಗಿರುವವರ ಆಸ್ತಿಯನ್ನು ವಶಕ್ಕೆ ಪಡೆಯಲು ಸಾಧ್ಯವಾಗಲಿದೆ ಎಂದು ಜೇಟ್ಲಿ ತಿಳಿಸಿದರು.

2017–18ರ ಬಜೆಟ್‌ನಲ್ಲಿಯೇ ಇಂತಹ ಪ್ರಸ್ತಾವವನ್ನು ಮುಂದಿಡಲಾಗಿತ್ತು. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚನೆ ಹಗರಣ ಬಯಲಾದ್ದರಿಂದ ಈ ಮಸೂದೆಯನ್ನು ತ್ವರಿತಗತಿಯಲ್ಲಿ ಸಿದ್ಧಪಡಿಸಲಾಗಿದೆ.

ಬ್ಯಾಂಕ್‌ ನಿವೃತ್ತ ಮುಖ್ಯಸ್ಥೆ ವಿರುದ್ಧ ಎಫ್‌ಐಆರ್‌

ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾದ ನಿವೃತ್ತ ಮುಖ್ಯಸ್ಥೆ ಅರ್ಚನಾ ಭಾರ್ಗವ ಅವರ ವಿರುದ್ಧ ಸರಣಿ ವಂಚನೆ ಆರೋಪದ ಪ್ರಕರಣಗಳನ್ನು ಸಿಬಿಐ ದಾಖಲಿಸಿದೆ. ಘೋಷಿತ ಆದಾಯಕ್ಕಿಂತ ₹3.63 ಕೋಟಿ ಮೌಲ್ಯದ ಆಸ್ತಿಯನ್ನು ಅವರು ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ರಾಷ್ಟ್ರೀಯ ಹಣಕಾಸು ಲೆಕ್ಕಪರಿಶೋಧನೆ ಪ್ರಾಧಿಕಾರ

ಕಂಪನಿಗಳ ಲೆಕ್ಕ ಪರಿಶೋಧನೆಯ ಗುಣಮಟ್ಟ ಹೆಚ್ಚಿಸುವುದಕ್ಕಾಗಿ ರಾಷ್ಟ್ರೀಯ ಹಣಕಾಸು ಲೆಕ್ಕಪರಿಶೋಧನೆ ಪ್ರಾಧಿಕಾರ (ಎನ್‌ಎಫ್‌ಆರ್‌ಎ) ಸ್ಥಾಪನೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಇದು ಸ್ವತಂತ್ರ ಲೆಕ್ಕಪರಿಶೋಧನೆ ನಿಯಂತ್ರಣ ವ್ಯವಸ್ಥೆಯಂತೆ ಕೆಲಸ ಮಾಡಲಿದೆ.

ಷೇರು ಮಾರುಕಟ್ಟೆಯಲ್ಲಿ ನೋಂದಣಿ ಆಗಿರುವ ಕಂಪನಿಗಳು ಮತ್ತು ಸರ್ಕಾರಿ ಸ್ವಾಮ್ಯದ ದೊಡ್ಡ ಕಂಪನಿಗಳವರೆಗೆ ಈ ಪ್ರಾಧಿಕಾರದ ವ್ಯಾಪ್ತಿ ಇರುತ್ತದೆ. ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ಶೀಘ್ರ ರೂಪಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.