ADVERTISEMENT

ಪರಿಶಿಷ್ಟ ಪಂಗಡಕ್ಕೆ ಮೇದಾರ ಸಮುದಾಯ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ನವದೆಹಲಿ:  ಕರ್ನಾಟಕದ ಮೇದಾರ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್ಟಿ)ಕ್ಕೆ ಸೇರಿಸುವ ಮಹತ್ವದ ನಿರ್ಣಯವನ್ನು ಕೇಂದ್ರ ಸಚಿವ ಸಂಪುಟ ಕೈಗೊಂಡಿದೆ.

ಈ ಸಮುದಾಯದ ದಶಕಗಳ ಬೇಡಿಕೆಯನ್ನು ದೀಪಾವಳಿ ಕೊಡುಗೆಯಾಗಿ ಈಡೇರಿಸಿದ್ದು, ಇನ್ನು ಮುಂದೆ ಮೇದಾರ ಸಮುದಾಯದವರು ಎಸ್ಟಿ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಈ ಸಂಬಂಧದ ಮಸೂದೆಯನ್ನು ಸಂಸತ್‌ನಲ್ಲಿ ಮಂಡನೆ ಮಾಡಲಾಗುವುದು ಎಂದು ವಾರ್ತಾ ಮತ್ತು ಪ್ರಚಾರ ಖಾತೆ ಸಚಿವೆ ಅಂಬಿಕಾ ಸೋನಿ ತಿಳಿಸಿದ್ದಾರೆ.

ಸಂಪುಟದ ಈ ನಿರ್ಧಾರದಿಂದಾಗಿ ಕರ್ನಾಟಕದಲ್ಲಿರುವ ಸುಮಾರು ಎರಡು ಲಕ್ಷ ಮಂದಿ ಮೇದಾರರು ಸಂವಿಧಾನದ ಪ್ರಕಾರ ಪರಿಶಿಷ್ಟ ಪಂಗಡದವರು ಪಡೆಯುವ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ. ಜತೆಗೆ ಅವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

ಕೇಂದ್ರ ಸರ್ಕಾರ ಮೇದಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸೌಲಭ್ಯ ಕಲ್ಪಿಸಿ, ಅಗತ್ಯ ಮಸೂದೆಯನ್ನು ಸಂಸತ್‌ನಲ್ಲಿ ಅಂಗೀಕರಿಸಿದರೂ ಸಹ, ಆ ಸಮುದಾಯದಕ್ಕೆ ಪರಿಶಿಷ್ಟ ಪಂಗಡ ಸೌಲಭ್ಯ ನೀಡುವ ಹೊಣೆ ಮಾತ್ರ ರಾಜ್ಯ ಸರ್ಕಾರದ್ದಾಗಿದೆ ಎಂದೂ ಅಂಬಿಕಾ ಸೋನಿ ತಿಳಿಸಿದರು.

ಕೃತಜ್ಞತೆ: ಪರಿಶಿಷ್ಟ ಪಂಗಡಕ್ಕೆ ಮೇದಾರರನ್ನು ಸೇರ್ಪಡೆ ಮಾಡಲು ಕೇಂದ್ರ ಸಚಿವ ಸಂಪುಟ ಕೈಗೊಂಡ ನಿರ್ಧಾರವನ್ನು ಮಾಜಿ ಶಾಸಕ ಹಾಗೂ ಕರ್ನಾಟಕ ಆದಿವಾಸಿ ರಕ್ಷಣಾ ಸಮಿತಿ ಅಧ್ಯಕ್ಷ ಎಚ್.ಡಿ.ಬಸವರಾಜ್ ಅವರು ಸ್ವಾಗತಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.