ADVERTISEMENT

ಪರೀಕ್ಷೆ ಬರೆದ 90 ವರ್ಷದ ಅಜ್ಜಿ

ಪಿಟಿಐ
Published 27 ಏಪ್ರಿಲ್ 2018, 19:30 IST
Last Updated 27 ಏಪ್ರಿಲ್ 2018, 19:30 IST

ತಿರುವನಂತಪುರ : ಬುಡಕಟ್ಟು ಸಮುದಾಯದ 90 ವರ್ಷದ ಅಜ್ಜಿ ಮಾಕ್ಕಾ ಎಂಬುವವರು ಇದೇ ಮೊದಲ ಬಾರಿಗೆ ವಯನಾಡ್‌ ಹಳ್ಳಿಯೊಂದರಲ್ಲಿ ಪರೀಕ್ಷೆ ಬರೆದಿದ್ದಾರೆ.

ಬುಡಕಟ್ಟು ಸಮುದಾಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಕೇರಳ ಸರ್ಕಾರ ಹಮ್ಮಿಕೊಂಡಿರುವ ಸಾಕ್ಷರತಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಮುಪ್ಪಯಿನಾಡ್ನಲ್ಲಿರುವ ಅಂಬಲಕುನ್ನು ಪ್ರದೇಶದಲ್ಲಿ 4,500ರಷ್ಟು ಬುಡಕಟ್ಟು ಸಮುದಾಯವು ನೆಲೆಸಿದೆ. ಇವರಲ್ಲಿ ಶಿಕ್ಷಣದ ಅರಿವು ಮೂಡಿಸಲು ಕೇರಳ ಸಾಕ್ಷರತಾ ಅಭಿಯಾನ ಪ್ರಾಧಿಕಾರವು ಕಳೆದ ವಾರ ಪರೀಕ್ಷೆ ಏರ್ಪಡಿಸಿತ್ತು.

ADVERTISEMENT

ಈ ಪರೀಕ್ಷೆಗೆ ಹಾಜರಾದವರಲ್ಲಿ ‘ಮಾಕ್ಕಾ’ ಹಿರಿಯ ಮಹಿಳೆಯಾಗಿದ್ದು, ಛಾರಲ್‌ಕುನ್ನು ಭಾಗದ 16 ವರ್ಷದ ಲಕ್ಷ್ಮೀ ಅತ್ಯಂತ ಕಿರಿಯವಳು. ಪರೀಕ್ಷೆಗೆ ಹಾಜರಾದವರಿಗೆ ಓದುವ, ಬರೆಯುವ ಹಾಗೂ ಲೆಕ್ಕ ಮಾಡುವ ಪ್ರಶ್ನೆಗಳನ್ನು ನೀಡಲಾಗಿತ್ತು.

ಬುಡಕಟ್ಟು ಸಮುದಾಯದಲ್ಲಿರುವ ಅನಕ್ಷರತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ 283 ಸಣ್ಣ ಹಳ್ಳಿಗಳಲ್ಲಿ ಪರೀಕ್ಷೆ ಏರ್ಪಡಿಸಲಾಗಿತ್ತು. ‘100 ಅಂಕಗಳಿಗೆ ಈ ಪರೀಕ್ಷೆ ನಡೆದಿದ್ದು, ಇದರಲ್ಲಿ ತೇರ್ಗಡೆಯಾದವರು ನೇರವಾಗಿ ನಾಲ್ಕನೇ ತರಗತಿಗೆ ಸಮನಾದ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ’ ಎಂದು ಪ್ರಾಧಿಕಾರ ತಿಳಿಸಿದೆ.

‘ರಾಜ್ಯದಾದ್ಯಂತ ನಡೆದ ಪರೀಕ್ಷೆಯಲ್ಲಿ 4,516 ಮಂದಿ ಹಾಜರಾಗಿದ್ದು, ಈ ಪೈಕಿ 3,598 ಮಹಿಳೆಯರು’ ಎಂದು ಸಾಕ್ಷರತಾ ಅಭಿಯಾನದ ನಿರ್ದೇಶಕಿ ಪಿ.ಎಸ್‌.ಶ್ರೀಕಲಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.