ADVERTISEMENT

ಪ್ರಧಾನಿ ಮೋದಿ ಹತ್ಯೆಗೆ ಸಂಚು: ಕೊಯಮತ್ತೂರಿನಲ್ಲಿ ವ್ಯಕ್ತಿಯ ಬಂಧನ

ಪಿಟಿಐ
Published 25 ಏಪ್ರಿಲ್ 2018, 3:51 IST
Last Updated 25 ಏಪ್ರಿಲ್ 2018, 3:51 IST
ನರೇಂದ್ರ ಮೋದಿ (ಸಂಗ್ರಹ ಚಿತ್ರ)
ನರೇಂದ್ರ ಮೋದಿ (ಸಂಗ್ರಹ ಚಿತ್ರ)   

‌ಕೊಯಮತ್ತೂರು: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ಹೂಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಇಲ್ಲಿನ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು 1998ರ ಕೊಯಮತ್ತೂರು ಸರಣಿ ಸ್ಫೋಟಕ್ಕೆ ಸಂಬಂಧಿಸಿ ಜೈಲು ಶಿಕ್ಷೆ ಪೂರ್ಣಗೊಳಿಸಿ ಬಿಡುಗಡೆಯಾಗಿರುವಾತ. ಪ್ರಧಾನಿ ಹತ್ಯೆಗೆ ಸಂಚು ರೂಪಿಸಿದ ಬಗ್ಗೆ ಆತದ ನಡೆಸಿರುವ ದೂರವಾಣಿ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಕುಣಿಯಮುತ್ತೂರ್‌ನಲ್ಲಿ ವಾಸವಿರುವ ಆರೋಪಿಯು ಸಾರಿಗೆ ಗುತ್ತಿಗೆದಾರರೊಬ್ಬರ ಬಳಿ ದೂರವಾಣಿ ಮೂಲಕ ಮಾತನಾಡುವಾಗ ಹತ್ಯೆ ಸಂಚಿನ ವಿಷಯ ತಿಳಿಸಿದ್ದ.

ADVERTISEMENT

ಎಂಟು ನಿಮಿಷಗಳ ದೂರವಾಣಿ ಸಂಭಾಷಣೆಯಲ್ಲಿ ಆತ ವಾಹನಗಳ ಹಣಕಾಸಿಗೆ ಸಂಬಂಧಿಸಿ ಮಾತನಾಡಿದ್ದ. ಸಂಭಾಷಣೆಯ ಮಧ್ಯದಲ್ಲಿ ಹಠಾತ್ತಾಗಿ, ‘ಮೋದಿಯನ್ನು ಹತ್ಯೆ ಮಾಡಲು ನಿರ್ಧರಿಸಿದ್ದೇವೆ. 1998ರಲ್ಲಿ ಎಲ್‌.ಕೆ.ಅಡ್ವಾಣಿ (ಬಿಜೆಪಿ ಹಿರಿಯ ನಾಯಕ) ನಗರಕ್ಕೆ ಭೇಟಿ ನೀಡಿದ್ದಾಗ ಬಾಂಬ್‌ಗಳನ್ನಿರಿಸಿದ್ದೆವು’ ಎಂದು ಹೇಳಿದ್ದಾನೆ.

‘ನನ್ನ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ. 100ಕ್ಕೂ ಹೆಚ್ಚು ವಾಹನಗಳಿಗೆ ಹಾನಿ ಮಾಡಿದ್ದೇನೆ’ ಎಂದೂ ಆತ ಗುತ್ತಿಗೆದಾರನ ಜತೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಭಾಷಣೆ ಮತ್ತು ಮಾತುಕತೆ ನಡೆಸಿದ ವ್ಯಕ್ತಿಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಗರದಲ್ಲಿ 1998ರ ಫೆಬ್ರುವರಿಯಲ್ಲಿ ಸಂಭವಿಸಿದ್ದ ಸರಣಿ ಬಾಂಬ್‌ ಸ್ಫೋಟದಲ್ಲಿ 58 ಜನ ಮೃತಪಟ್ಟಿದ್ದರು. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗೆ ಹಾನಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.