ADVERTISEMENT

ಪ್ರಸಾದಂ ಬಿಡುಗಡೆಗೆ ಸಂಧಾನಕಾರರ ಮನವಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 10:00 IST
Last Updated 19 ಫೆಬ್ರುವರಿ 2011, 10:00 IST

 ಭುವನೇಶ್ವರ (ಪಿಟಿಐ):  ನಕ್ಸಲರಿಂದ ಅಪಹರಣಗೊಂಡ ಮಾಲ್ಕನ್‌ಗಿರಿ ಜಿಲ್ಲಾಧಿಕಾರಿ ಮತ್ತು ಕರ್ನಾಟಕದ ಅಳಿಯ ಆರ್ ವಿನೀಲ್ ಕೃಷ್ಣ ಮತ್ತು ಕಿರಿಯ ಎಂಜಿನಿಯರ್ ಪವಿತ್ರ ಮೋಹನ್ ಮಝಿ ಅವರನ್ನು ಬಿಡುಗಡೆಗೊಳಿಸುವ ಪ್ರಯತ್ನ ಶನಿವಾರ ಮತ್ತಷ್ಟು ಚುರುಕುಗೊಂಡಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ನೇತೃತ್ವದಲ್ಲಿ ನಡೆದ ಸಭೆಯ ನಂತರ ರಾಜ್ಯ ಗೃಹ ಕಾರ್ಯದರ್ಶಿ ಬೇಹಾರ ಅವರು ಒತ್ತೆಯಾಳುಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದರು.

ನಕ್ಸಲರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ನೀಡಿದ್ದ ಗಡುವನ್ನು ಶುಕ್ರವಾರ ರಾತ್ರಿ 24 ಗಂಟೆ ವಿಸ್ತರಿಸಿದ ಬೆನ್ನಲ್ಲೆ ರಾಜ್ಯ ಸರ್ಕಾರ ಸಂಧಾನ ಪ್ರಕ್ರಿಯೆಗೆ ಚಾಲನೆ ನೀಡಿದೆ. ಹೈದರಾಬಾದ್ ಮೂಲದ ಸಂಧಾನಕಾರರಾದ ಪ್ರೊ.ಸೋಮೇಶ್ವರರಾವ್ ಹಾಗೂ ಪ್ರೊ. ಹರ್ ಗೋಪಾಲ್ ಅವರೊಂದಿಗೆ ಸರ್ಕಾರ ನಿರಂತರ ಸಂಪರ್ಕದಲ್ಲಿದ್ದು, ಅವರ ಬರುವಿಕೆಗಾಗಿ ನಿರೀಕ್ಷೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಅತ್ತ ಒಡಿಸ್ಸಾ ವಿಧಾನಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಕಿರಿಯ ಎಂಜಿನಿಯರ್ ಅವರ ಸುರಕ್ಷಿತ ಬಿಡುಗಡೆಗೆ ಆಗ್ರಹಿಸಿ ಒಕ್ಕೊರಲ ನಿರ್ಣಯ ತೆಗೆದುಕೊಳ್ಳಲಾಯಿತು.

ಹರಗೋಪಾಲ್ ಅವರು ಸದ್ಯ ನ್ಯಾಯಾಂಗ ಬಂಧನದಲ್ಲಿರುವ ನಕ್ಸಲರ ಪ್ರಮುಖ ನಾಯಕ ಘಾಂಟಿ ಪ್ರಸಾದಂ ಅವರನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಪ್ರಸಾದಂ ಅವರನ್ನು  ಬಿಡುಗಡೆ ಮಾಡಿದರೆ ಸಂಧಾನ ಪ್ರಕ್ರಿಯೆಗೆ ಬಹಳಷ್ಟು ಸಹಕಾರಿಯಾಗಲಿದೆ ಎಂದು ಹರಗೋಪಾಲ್ ಅವರು ತಿಳಿಸಿದ್ದಾರೆ.

ಈ ಮಧ್ಯೆ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರು ಒತ್ತೆಯಾಳುಗಳಿಗೆ ಯಾವುದೇ ವಿಧವಾದ ತೊಂದರೆ ಮಾಡಬಾರದೆಂದು ನಕ್ಸಲರಲ್ಲಿ ಮನವಿ ಮಾಡಿದ್ದಾರೆ. ನಕ್ಸಲರ ಬೇಡಿಕೆಯಂತೆ ಅವರ ವಿರುದ್ಧದ ನಕ್ಸಲ್ ನಿಗ್ರಹದ ಜಂಟಿ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದ್ದು, ಮಾತುಕತೆ ಪ್ರಕ್ರಿಯೆಗೆ ಒತ್ತು ನೀಡಲಾಗಿದೆ.

ADVERTISEMENT

ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಬಿಹಾರ ಸರ್ಕಾರ ಮಾವೋವಾದಿಗಳ ಉಪಟಳವಿರುವ ಕಡೆಗಳಲ್ಲಿ  ಅಧಿಕಾರಿಗಳು  ಸೂಕ್ತ ಭದ್ರತೆಯೊಂದಿಗೆ ಭೇಟಿ ನೀಡಬೇಕೆಂದು ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.