ನವದೆಹಲಿ (ಪಿಟಿಐ): ಪ್ರಸಾರ ಮಾಧ್ಯಮಗಳ (ಟಿವಿ) ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವ ದಿಸೆಯಲ್ಲಿ ಭಾರತೀಯ ಪತ್ರಿಕಾ ಮಂಡಳಿ ಹಾಗೂ ಟಿವಿ ಚಾನೆಲ್‌ಗಳ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಸಮಿತಿ ರಚನೆಗೆ ಪತ್ರಿಕಾ ಮಂಡಳಿ ಅಧ್ಯಕ್ಷ ನ್ಯಾ. ಮಾರ್ಕಂಡೇಯ ಖಟ್ಜು ಪ್ರಸ್ತಾಪ ಮುಂದಿಟ್ಟಿದಾರೆ.
ಈ ಸಂಬಂಧ ಟಿವಿ ಚಾನೆಲ್‌ಗಳ ಸಂಪಾದಕರುಗಳಿಗೆ ಅವರು ಪತ್ರ ಬರೆದಿದ್ದಾರೆ. ಬ್ರಾಡ್‌ಕಾಸ್ಟ್ ಎಡಿಟರ್ಸ್ ಅಸೋಸಿಯೇಷನ್ (ಬಿಇಎ) ಅಧ್ಯಕ್ಷ ಶಾಜಿ ಜಮಾನ್ ಹಾಗೂ ಪ್ರಧಾನ ಕಾರ್ಯದರ್ಶಿ ಎನ್.ಕೆ. ಸಿಂಗ್ ಅವರಿಗೆ ಪತ್ರ ಬರೆದಿರುವ ಖಟ್ಜು, ಈ ಸಮಿತಿಯಲ್ಲಿ ಪತ್ರಿಕಾ ಮಂಡಳಿ ಹಾಗೂ `ಬಿಇಎ~ ಸಮಾನ ಸಂಖ್ಯೆಯ ಸದಸ್ಯರನ್ನು ಹೊಂದಬಹುದು ಎಂಬ ಸಲಹೆ ನೀಡಿದ್ದಾರೆ.
ದೇಶದ ಹಲವು ಭಾಗಗಳಲ್ಲಿ ಪ್ರಸಾರ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತಿರುವ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಂಟಿ ಸಮಿತಿ ರಚನೆ ಅನಿವಾರ್ಯ ಹಾಗೂ ಅಗತ್ಯವಾಗಿದೆ ಎಂದು ಖಟ್ಜು ಈ ಪತ್ರದಲ್ಲಿ ವಿವರಿಸಿದ್ದಾರೆ.
`ಮಾಧ್ಯಮ ಪ್ರತಿನಿಧಿಗಳ ವಿರುದ್ಧ ದೈಹಿಕ ಹಲ್ಲೆಯ ಘಟನೆಗಳು, ತಮ್ಮ ವಿರುದ್ಧ ಬರೆಯುವ ಪತ್ರಕರ್ತರನ್ನು ವಜಾಗೊಳಿಸುವಂತೆ ಸರ್ಕಾರಗಳು ಪತ್ರಿಕಾ ಸಂಸ್ಥೆಗಳ ಮೇಲೆ ಒತ್ತಡ ತರುವ ವಿದ್ಯಮಾನಗಳು ಮೇಲಿಂದ ಮೇಲೆ ಬೆಳಕಿಗೆ ಬರುತ್ತಿವೆ.~
`ಪತ್ರಿಕಾ ಮಂಡಳಿ ಕೇವಲ ಪತ್ರಿಕಾ ಮಾಧ್ಯಮದ ಆಗುಹೋಗುಗಳ ಬಗ್ಗೆ ನಿಗಾ ವಹಿಸುತ್ತಿದ್ದರೂ ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ ಹಾಗೂ ಮಹಾರಾಷ್ಟ್ರದಲ್ಲಿ ವಿದ್ಯುನ್ಮಾನ ಮಾಧ್ಯಮದ ಸ್ವಾತಂತ್ರ್ಯಕ್ಕಾಗಿಯೂ ನಾನು ಹೋರಾಡುತ್ತಿದ್ದೇನೆ~ ಎಂದು ಅವರು ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.