ADVERTISEMENT

‘ಬಿಕ್ಕಟ್ಟು ಪರಿಹಾರಕ್ಕೆ ಸಭೆ ಕರೆಯಿರಿ’

ಪಿಟಿಐ
Published 25 ಏಪ್ರಿಲ್ 2018, 19:38 IST
Last Updated 25 ಏಪ್ರಿಲ್ 2018, 19:38 IST

ನವದೆಹಲಿ: ದೇಶದ ಉನ್ನತ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಚರ್ಚೆಗೆ ಸುಪ್ರೀಂ ಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳ ಸಭೆ ಕರೆಯುವಂತೆ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳಿಬ್ಬರು ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರಿಗೆ ಬರೆದ ಎರಡು ಸಾಲಿನ ಪತ್ರಕ್ಕೆ ಹಿರಿಯ ನ್ಯಾಯಮೂರ್ತಿಗಳಾದ ರಂಜನ್‌ ಗೊಗೊಯಿ ಮತ್ತು ಮದನ್‌ ಬಿ. ಲೋಕೂರ್‌ ಸಹಿ ಹಾಕಿದ್ದಾರೆ. ಆದರೆ, ಈ ಬಗ್ಗೆ ಮಿಶ್ರಾ ಇದುವರೆಗೂ ತಮ್ಮ ನಿಲುವು ಸ್ಪಷ್ಟಪಡಿಸಿಲ್ಲ.

ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ವಿರೋಧ ಪಕ್ಷಗಳ ವಾಗ್ದಂಡನೆ ನೋಟಿಸ್‌ ತಿರಸ್ಕರಿಸುವುದಕ್ಕೆ ಒಂದು ದಿನ ಮೊದಲೇ ಈ ಪತ್ರ ಬರೆಯಲಾಗಿದೆ.

ADVERTISEMENT

ಸೋಮವಾರ ಬೆಳಿಗ್ಗೆ ನಡೆದ ನ್ಯಾಯಮೂರ್ತಿಗಳ ಚಹಾಕೂಟದ ಚರ್ಚೆಯ ವೇಳೆ ಈ ವಿಷಯ ಪ್ರಸ್ತಾಪವಾಗಿತ್ತು. ಇದರಿಂದಾಗಿ ಸೋಮವಾರ ನ್ಯಾಯಾಲಯ ಕಲಾಪಗಳು ನಿಗದಿತ ಸಮಯಕ್ಕಿಂತ 15 ನಿಮಿಷ ತಡವಾಗಿ ಆರಂಭವಾಗಿದ್ದವು.

ಇದಕ್ಕೂ ಮೊದಲು ಅಂದರೆ ಮಾರ್ಚ್‌ನಲ್ಲಿ ಹಿರಿಯ ನ್ಯಾಯಮೂರ್ತಿಗಳಾದ ಚೆಲಮೇಶ್ವರ್‌ ಮತ್ತು ಕುರಿಯನ್‌ ಜೋಸೆಫ್‌ ಅವರು ನ್ಯಾಯಾಂಗದ ಸಾಂಸ್ಥಿಕ ಸಮಸ್ಯೆ ಕುರಿತು ಚರ್ಚಿಸಲು ಪೂರ್ಣಪ್ರಮಾಣದ ಪೀಠ ರಚಿಸುವಂತೆ ಪ್ರತ್ಯೇಕವಾಗಿ ಒತ್ತಾಯಿಸಿದ್ದರು.

ಸಾಮಾನ್ಯವಾಗಿ ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಸಮಸ್ಯೆಗಳು ಎದುರಾದಾಗ ಮುಖ್ಯ ನ್ಯಾಯಮೂರ್ತಿಯು ಎಲ್ಲ ನ್ಯಾಯಮೂರ್ತಿಗಳ ಸಭೆ ಕರೆಯುವುದು ವಾಡಿಕೆ. ಅಕ್ಟೋಬರ್‌ 2ರಂದು ಮಿಶ್ರಾ ನಿವೃತ್ತಿಯಿಂದ ತೆರವಾಗಲಿರುವ ಸ್ಥಾನವನ್ನು ರಂಜನ್‌ ಗೊಗೊಯಿ ತುಂಬಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.