ADVERTISEMENT

ಬಿಜೆಪಿ ಹೀನಾಯಸ್ಥಿತಿ ಬಟಾಬಯಲು

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 19:30 IST
Last Updated 13 ಜುಲೈ 2012, 19:30 IST

ನಾಗ್ಪುರ (ಪಿಟಿಐ): `ಕರ್ನಾಟಕದಲ್ಲಿನ ರಾಜಕೀಯ ಬೆಳವಣಿಗೆಯು ಬಿಜೆಪಿಯ ಹೀನ ಸ್ಥಿತಿಯನ್ನು ಬಟಾಬಯಲು ಮಾಡಿದೆ~ ಎಂದು  ಕೇಂದ್ರ ಸಚಿವ ಎಂ. ವೀರಪ್ಪ ಮೊಯಿಲಿ ಹೇಳಿದ್ದಾರೆ.
ಕಳೆದ ವರ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವತಃ ತಾವೇ ಉತ್ತರಾಧಿಕಾರಿಯನ್ನು ಆಯ್ಕೆಮಾಡಿದ್ದರು.

ಇದೀಗ ಅವರನ್ನು ಕೆಳಗಿಳಿಸುವಲ್ಲಿ ಯಶಸಿಯಾಗಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕತ್ವವು ಇದನ್ನೆಲ್ಲ ಅಸಹಾಯಕತೆಯಿಂದ ನೋಡಬೇಕಾಯಿತು~ ಎಂದು  ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
`ಯಡಿಯೂರಪ್ಪ ಮೊದಲು ಸದಾನಂದ ಗೌಡರನ್ನು ಆಯ್ಕೆ ಮಾಡಿದ್ದರು. ನಂತರ ಸ್ವತಃ ತಾವೇ ಮತ್ತೆ ಮುಖ್ಯಮಂತ್ರಿ ಗಾದಿ ಏರಲು ಪ್ರಯತ್ನಿಸಿದ್ದರು. ಕೊನೆಗೆ ಸದಾ ನಂದ ಗೌಡರನ್ನು ಇಳಿಸಿ ತಮ್ಮ ನಿಷ್ಠರಾದ ಜಗ ದೀಶ್ ಶೆಟ್ಟರ್ ಅವರಿಗೆ ಅಧಿಕಾರ ಹಸ್ತಾಂತರಿಸುವಲ್ಲಿ ಯಶಸ್ವಿಯಾದರು. ಇವೆಲ್ಲವೂ ಬಿಜೆಪಿಯ ಹೀನಾಯ ಸ್ಥಿತಿಯನ್ನು ತೋರಿಸುತ್ತವೆ~ ಎಂದು ವ್ಯಂಗ್ಯವಾಡಿದರು.

ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ಕರ್ನಾಟಕವು ಭ್ರಷ್ಟಾಚಾರ ಹಾಗೂ ಜಾತಿ ರಾಜಕಾರಣವನ್ನು ನೋಡಬೇಕಾಗಿ ಬಂತು ಎಂದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ನೆಲೆಭದ್ರಪಡಿಸಿಕೊಳ್ಳುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡುವ ನಿರೀಕ್ಷೆ ಇದೆ. ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಬಹುಮತ ಇರಲಿಲ್ಲ. ಕೊನೆಗೆ ಪಕ್ಷೇತರರನ್ನು ಒಲಿಸಿಕೊಂಡು ಬಲ ಪ್ರದರ್ಶನ ಮಾಡಿತು ಎಂದು ಹೇಳಿದರು.

ಚುಂಬಕ ಶಕ್ತಿ ರಾಹುಲ್
ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕರ್ತರನ್ನು `ಸೆಳೆಯುವ~ ವ್ಯಕ್ತಿಯಾಗಿದ್ದಾರೆ. ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಸ್ವತಃ ಅವರಿಗೆ ಬಿಟ್ಟ ವಿಷಯ ಎಂದು ಮೊಯಿಲಿ ನುಡಿದರು.
`ಯುವ ಕಾಂಗ್ರೆಸ್ ಬಲಪಡಿಸುವಲ್ಲಿ ರಾಹುಲ್ ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ.

ಅವರ ಹೊಣೆಗಾರಿಕೆಯ ಬಗ್ಗೆ ಬೇರೆಯವರು ಮಾತನಾಡುವ ಅಗತ್ಯವಿಲ್ಲ. ಸೋನಿಯಾ ಹಾಗೂ ರಾಹುಲ್ ಇಬ್ಬರೂ ಪಕ್ಷ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಪಕ್ಷಕ್ಕೆ ಹಾಗೂ ಯುಪಿಎ ಸರ್ಕಾರಕ್ಕೆ ಇವರು ದೊಡ್ಡ ಶಕ್ತಿ ಇದ್ದಂತೆ~ ಅವರು ಬಣ್ಣಿಸಿದರು. 

ಕಾಂಗ್ರೆಸ್ ವ್ಯವಹಾರದ ಬಗ್ಗೆ ಪಕ್ಷದ ಮುಖಂಡ ಮತ್ತು ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, `ನನ್ನ ಸಂಪುಟ ಸಹೋದ್ಯೋಗಿ ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಹೆಚ್ಚಿಗೆ ಏನನ್ನೂ ಹೇಳುವ ಅಗತ್ಯವಿಲ್ಲ~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT