ನವದೆಹಲಿ (ಪಿಟಿಐ): ಈ ಬಾರಿಯ ಬಜೆಟ್‌ನಲ್ಲಿ ನಗರಾಭಿವೃದ್ಧಿ ಸಚಿವಾಲಯಕ್ಕೆ ಹೆಚ್ಚುವರಿ 874 ಕೋಟಿ ರೂಪಾಯಿಗಳನ್ನು ನೀಡಲಾಗಿದೆ.ಮೀಸಲಿಟ್ಟಿರುವ ಒಟ್ಟು ಹಣದಲ್ಲಿ ಬಹುಪಾಲು ಮೊತ್ತವನ್ನು ದೇಶದ ವಿವಿಧ ನಗರಗಳಲ್ಲಿ ಮೆಟ್ರೊ ರೈಲು ಸ್ಥಾಪನೆ ಮತ್ತು ಸಂಪರ್ಕ ವ್ಯವಸ್ಥೆಯ ವಿಸ್ತರಣೆಗೆ ನಗರಾಭಿವೃದ್ಧಿ ಸಚಿವಾಲಯವು ವ್ಯಯಿಸಲಿದೆ.
ಆಯಾ ರಾಜ್ಯ ಸರ್ಕಾರಗಳ ಜೊತೆಯಲ್ಲಿ ವಿವಿಧ ನಗರಗಳ ಮೆಟ್ರೊ ಸಂಪರ್ಕ ವ್ಯವಸ್ಥೆಯ ಮಾಲೀಕತ್ವವನ್ನು ಹೊಂದಿರುವ ನಗರಾಭಿವೃದ್ಧಿ ಸಚಿವಾಲಯಕ್ಕೆ ಕಳೆದ ವರ್ಷದ ಬಜೆಟ್‌ನಲ್ಲಿ 6,655 ಕೋಟಿ ರೂಪಾಯಿ ನೀಡಲಾಗಿತ್ತು. ಈ ವರ್ಷ ಒಟ್ಟು ರೂ 7,729 ಕೋಟಿ ಮೀಸಲಿಡಲಾಗಿದೆ.
ಈ ಮೊತ್ತದಲ್ಲಿ 3,164.57 ಕೋಟಿ ರೂಪಾಯಿಯನ್ನು ದೆಹಲಿ, ಬೆಂಗಳೂರು, ಕೋಲ್ಕತ್ತ, ಚೆನ್ನೈ, ಮುಂಬೈ, ಜೈಪುರ ಮತ್ತು ಕೊಚ್ಚಿಯ ಮೆಟ್ರೊ ರೈಲು ನಿಗಮಗಳಿಗೆ ಸಚಿವಾಲಯ ನೀಡಲಿದೆ.
ಈ ಹಣದಲ್ಲಿ ದೆಹಲಿ ಮೆಟ್ರೊ ಅತಿ ಹೆಚ್ಚು ಅಂದರೆ 1,112.57 ಕೋಟಿ ರೂಪಾಯಿ ಪಡೆಯಲಿದೆ. ಬೆಂಗಳೂರು ಮೆಟ್ರೊ 1670 ಕೋಟಿ ಪಡೆದರೆ, ಚೆನ್ನೈ ಪಾಲಿಗೆ 990 ಕೋಟಿ ರೂಪಾಯಿ ದೊರೆಯಲಿದೆ.
ದೆಹಲಿಯಲ್ಲಿ ಆರಂಭವಾಗಿರುವ 103 ಕಿ.ಮೀ ಮೆಟ್ರೊ ವಿಸ್ತರಣೆ ಕಾರ್ಯಕ್ಕೆ ರೂ 100 ಕೋಟಿ ನೀಡಲಾಗಿದೆ.ರಾಷ್ಟ್ರೀಯ ರಾಜಧಾನಿ ಪ್ರಾಂತ್ಯ ಯೋಜನಾ ಮಂಡಳಿಗೆ ನಗರಾಭಿವೃದ್ಧಿ ಸಚಿವಾಲಯವು 63.61 ಕೋಟಿ ನೀಡಲಿದೆ. ಇತರ 179.97 ಕೋಟಿ ರೂಪಾಯಿಗಳನ್ನು ದೇಶದಾದ್ಯಂತ ಅಭಿವೃದ್ಧಿ ಯೋಜನೆಗಳಿಗೆ ಸಚಿವಾಲಯ ವ್ಯಯಿಸಲಿದೆ.
ಮಹಾತ್ವಾಕಾಂಕ್ಷೆಯ ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ನವೀಕರಣ ಯೋಜನೆಗೆ (ಜೆನರ್ಮ್) 88 ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.