ADVERTISEMENT

ಭಯೋತ್ಪಾದನೆಗೆ ನೆರವು: ಬಂಧನ

ಪಿಟಿಐ
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST

ಲಖನೌ: ಲಷ್ಕರ್‌–ಇ–ತಯ್ಯಿಬಾ ಜತೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಹತ್ತು ಮಂದಿಯನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಬಂಧಿಸಿದೆ.

ಗೋರಖಪುರ್, ಲಖನೌ, ಪ್ರತಾಪಗಢ ಮತ್ತು ಮಧ್ಯಪ್ರದೇಶದ ರಿವಾನ್‌ನಲ್ಲಿ ಇವರನ್ನು ಶನಿವಾರ ಬಂಧಿಸಲಾಗಿದೆ.

‘ಪಾಕಿಸ್ತಾನದ ನಿರ್ದೇಶನದ ಮೇರೆಗೆ ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸುವ ಕಾರ್ಯದಲ್ಲಿ ಇವರೆಲ್ಲರೂ ತೊಡಗಿದ್ದರು’ ಎಂದು ಎಟಿಎಸ್‌ ಐಜಿ ಅಸೀಂ ಅರುಣ್‌ ತಿಳಿಸಿದ್ದಾರೆ.

ADVERTISEMENT

‘ಲಷ್ಕರ್‌–ಇ–ತಯ್ಯಿಬಾ ಸಂಘಟನೆಯ ಸದಸ್ಯನೊಬ್ಬ ಈ ಹತ್ತು ಮಂದಿ ಜತೆ ಸಂಪರ್ಕ ಹೊಂದಿದ್ದ. ನಕಲಿ ಹೆಸರಿನಲ್ಲಿ ಬ್ಯಾಂಕ್‌ ಖಾತೆಗಳನ್ನು ತೆರೆಯಲು ಸೂಚಿಸಿದ್ದ ಆತ, ಯಾವ ಖಾತೆ, ಎಷ್ಟು ಹಣವನ್ನು ವರ್ಗಾವಣೆ ಮಾಡಬೇಕು ಎನ್ನುವುದನ್ನು ತಿಳಿಸುತ್ತಿದ್ದ’ ಎಂದು ತಿಳಿಸಿದ್ದಾರೆ.

‘ಬಂಧಿತ ಆರೋಪಿಗಳಲ್ಲಿ ಕೆಲವರಿಗೆ ಯಾವ ರೀತಿಯ ಚಟುವಟಿಕೆಗಳಲ್ಲಿ ತೊಡಗಿದ್ದೇವೆ ಎನ್ನುವ ಸ್ಪಷ್ಟ ಮಾಹಿತಿ ಇತ್ತು. ಇನ್ನು ಕೆಲವರು ಇದೊಂದು ಲಾಟರಿ ವಂಚನೆ ಎಂದೇ ಭಾವಿಸಿಕೊಂಡಿದ್ದರು. ಈ ಆರೋಪಿಗಳ ಜಾಲ ವಿವಿಧೆಡೆ ವ್ಯಾಪಿಸಿರುವ ಸಾಧ್ಯತೆ ಇದ್ದು, ಇನ್ನೂ ಹಲವರನ್ನು ಬಂಧಿಸಲಾಗುವುದು’ ಎಂದು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಬ್ಯಾಂಕ್‌ ಸಿಬ್ಬಂದಿ ವಹಿಸಿರುವ ಪಾತ್ರದ ಬಗ್ಗೆ ಪರಿಶೀಲಿಸಲಾಗುವುದು. ಆರೋಪಿಗಳಿಂದ ಎಟಿಎಂ ಕಾರ್ಡ್‌ಗಳು, ₹42 ಲಕ್ಷ ನಗದು, ಮೂರು ಲ್ಯಾಪ್‌ಟಾಪ್‌ಗಳು, ವಿವಿಧ ಬ್ಯಾಂಕ್‌ಗಳ ಪಾಸ್‌ಬುಕ್‌ಗಳು ಮತ್ತು ಪಿಸ್ತೂಲ್‌ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳಿಂದ ತಪ್ಪೊಪ್ಪಿಗೆ ಹೇಳಿಕೆ
ನವದೆಹಲಿ (ಪಿಟಿಐ):
ಕಾಶ್ಮೀರ ಕಣಿವೆಯಲ್ಲಿ ದೇಶ ವಿರೋಧಿ ಚಟುವಟಿಕೆ ಕೈಗೊಳ್ಳಲು ಹಣಕಾಸು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿ

ಗಳು ನೀಡಿದ ತಪ್ಪೊಪ್ಪಿಗೆ ಹೇಳಿಕೆಗಳು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಸಲ್ಲಿಸಿದ ಆರೋಪಪಟ್ಟಿಯಲ್ಲಿ ಪ್ರಮುಖ ಸಾಕ್ಷ್ಯಗಳಾಗಿವೆ.

ಲಷ್ಕರ್‌–ಇ– ತಯ್ಯಿಬಾ ಸಂಘಟನೆ ಸಂಸ್ಥಾಪಕ ಹಫೀಜ್ ಸಯೀದ್‌ ಸೇರಿದಂತೆ 12 ಉಗ್ರರ ವಿರುದ್ಧ ಈ ಆರೋಪಪಟ್ಟಿ ಸಲ್ಲಿಸಲಾಗಿದೆ.

ಚಾರ್ಲಿ, ರೋಮಿಯೋ, ಅಲ್ಫಾ, ಪಾಟರ್‌, ಪೈ, ಹ್ಯಾರಿ, ಗಾಮಾ ಎನ್ನುವ ಕೋಡ್‌ಗಳನ್ನು ಬಳಸಿಕೊಂಡಿದ್ದ ಈ ಆರೋಪಿಗಳಿಂದ ಎನ್‌ಐಎ ಹೇಳಿಕೆಗಳನ್ನು ಪಡೆದಿತ್ತು. ಇವರ ಜತೆ ಇನ್ನೊಬ್ಬ ಅಪರಿಚಿತ ವ್ಯಕ್ತಿಯೊಬ್ಬನ ಹೇಳಿಕೆ ಪಡೆದಿದೆ.

ಈ ವರ್ಷದ ಜನವರಿ 18ರಂದು ಎನ್‌ಐಎ ಆರೋಪಪಟ್ಟಿ ಸಲ್ಲಿಸಿತ್ತು. ಕಳೆದ ವರ್ಷ ಮೇ 30ರಂದು ಪ್ರತ್ಯೇಕತಾವಾದಿಗಳ ವಿರುದ್ಧ
ಪ್ರಕರಣ ದಾಖಲಿಸಿದ್ದ ಎನ್‌ಐಎ, ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆಗಳನ್ನು ಕೈಗೊಳ್ಳಲು ಪಾಕಿಸ್ತಾನದಿಂದ ಹಣಕಾಸು ವರ್ಗಾವಣೆಯಾದ ಬಗ್ಗೆ ಈ ಎಂಟು ಆರೋಪಿಗಳಿಂದ ಹೇಳಿಕೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.