ADVERTISEMENT

ಮಂತ್ರಾಲಯಕ್ಕೆ ಬೆಂಕಿ: ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 22 ಜೂನ್ 2012, 19:30 IST
Last Updated 22 ಜೂನ್ 2012, 19:30 IST
ಮಂತ್ರಾಲಯಕ್ಕೆ ಬೆಂಕಿ: ತನಿಖೆಗೆ ಆದೇಶ
ಮಂತ್ರಾಲಯಕ್ಕೆ ಬೆಂಕಿ: ತನಿಖೆಗೆ ಆದೇಶ   

ಮುಂಬೈ (ಪಿಟಿಐ): ಭಾರಿ ಅಗ್ನಿ ಅನಾಹುತ ಸಂಭವಿಸಿದ ಮಹಾರಾಷ್ಟ್ರ ಸಚಿವಾಲಯ ಕಟ್ಟಡ (ಮಂತ್ರಾಲಯ)ದಿಂದ ಶುಕ್ರವಾರ ಇನ್ನೂ ಇಬ್ಬರ ಮೃತದೇಹಗಳನ್ನು ಹೊರತೆಗೆಯುವುದರೊಂದಿಗೆ ಅನಾಹುತದಲ್ಲಿ ಮೃತರಾದವರ ಸಂಖ್ಯೆ ಐದಕ್ಕೆ ಏರಿದೆ.

ಗುರುವಾರ ಮಧ್ಯಾಹ್ನ ಕಾಣಿಸಿಕೊಂಡ ಬೆಂಕಿಯನ್ನು ಹರಸಾಹಸದ ಬಳಿಕ ಶುಕ್ರವಾರ ಮುಂಜಾನೆಯಷ್ಟೆ ಸಂಪೂರ್ಣವಾಗಿ ನಂದಿಸಲು ಸಾಧ್ಯವಾಯಿತು ಎಂದು ಅಗ್ನಿಶಾಮಕ ದಳದ ಅಧಿಕಾರಿ ಜೋಶಿ ತಿಳಿಸಿದರು.
ಏಳಂತಸ್ತಿನ ಕಟ್ಟಡದ ಆರನೇ ಮಹಡಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದ ವೇಳೆ ಎರಡು ಶವಗಳು ಗುರುವಾರ ಕಂಡುಬಂದಿದ್ದವು. ಶುಕ್ರವಾರ ಮೂರು ಶವಗಳು ಪತ್ತೆಯಾಗಿವೆ.

ಘಟನೆಯಲ್ಲಿ ಗಾಯಗೊಂಡ 11 ಮಂದಿಯನ್ನು ಜೆಜೆ ಆಸ್ಪತ್ರೆ ಮತ್ತು ಸೇಂಟ್ ಜಾರ್ಜ್ ಆಸ್ಪತ್ರೆ, ಮೂವರನ್ನು ಜಿಟಿ ಆಸ್ಪತ್ರೆ ಹಾಗೂ ಇಬ್ಬರನ್ನು ನಾಯರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೆ ಮತ್ತೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.  ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ವಾರ್ತಾ ಇಲಾಖೆಯ ಅಧಿಕಾರಿ ಹೇಮಂತ್ ಖೈರೆ ಅವರ ಆರೋಗ್ಯಸ್ಥಿತಿ ಗಂಭೀರವಾಗಿದೆ ಎಂದು ಲಹಾನೆ ತಿಳಿಸಿದರು.

 ತನಿಖೆಗೆ ನಿರ್ಧಾರ: ಘಟನೆಗೆ ಸಂಬಂಧಿಸಿ ಅಪರಾಧ ವಿಭಾಗದಿಂದ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಪ್ರಥ್ವಿರಾಜ್ ಚೌಹಾಣ್ ಘೋಷಿಸಿದ್ದಾರೆ. ಪರಿಸ್ಥಿತಿಯ ಅವಲೋಕನ ನಡೆಸಲು ಕರೆಯಲಾದ ಸಚಿವ ಸಂಪುಟದ ವಿಶೇಷ ಸಭೆಯ ಬಳಿಕ ಅವರು ಇದನ್ನು ತಿಳಿಸಿದರು.

ಬೆಂಕಿ ಅನಾಹುತದಲ್ಲಿ ನಾಶಗೊಂಡಿರುವ ಕಂಪ್ಯೂಟರ್ ಹಾರ್ಡ್‌ಡಿಸ್ಕ್‌ಗಳಿಂದ ಡಾಟಾ ಮರುಸಂಗ್ರಹಿಸಲು ನಾಸ್‌ಕಾಂ, ಸೈಬರ್ ಸೆಲ್ ಹಾಗೂ ವಿದೇಶಿ ಪರಿಣತರ ನೆರವು ಕೋರಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಬೆಂಕಿಯಲ್ಲಿ ನಾಶವಾಗದೆ ಉಳಿದ ಕಡತಗಳನ್ನು ಸುರಕ್ಷಿತವಾಗಿ ಬೇರೆಡೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರಲ್ಲದೆ ಘಟನೆಯ ಹಿಂದೆ ವಿಧ್ವಂಸಕ ಕೃತ್ಯದ ಸಾಧ್ಯತೆಯನ್ನು ತಳ್ಳಿ ಹಾಕಿದರು.

ಆದರ್ಶ ಸೊಸೈಟಿ ಹಗರಣಕ್ಕೆ ಸಂಬಂಧಿಸಿದ  ಎಲ್ಲಾ ಕಡತಗಳನ್ನು ಸಿಬಿಐಗೆ ಒಪ್ಪಿಸಿರುವುದರಿಂದ ತನಿಖೆಯ ಮೇಲೆ ಯಾವುದೇ ಪರಿಣಾಮ ಉಂಟಾಗದು ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ, ಕಟ್ಟಡದ ಅಗ್ನಿ ಸುರಕ್ಷಾ ವ್ಯವಸ್ಥೆಯಲ್ಲಿ ಲೋಪಗಳಿದ್ದರೆ ಅದನ್ನು ಕೂಡಲೇ ಪತ್ತೆಹಚ್ಚಲಾಗುವುದು ಎಂದರಲ್ಲದೆ  ಸಚಿವರುಗಳೆಲ್ಲರೂ ತಮ್ಮ ಪ್ರವಾಸಗಳನ್ನು ರದ್ದುಪಡಿಸಿ ಕಚೇರಿಯ ಕಡತಗಳನ್ನು ಪುನರ್‌ಸಂಗ್ರಹಿಸುವ ಕಾರ್ಯದಲ್ಲಿ ತೊಡಗಬೇಕು ಎಂದು ಕರೆ ನೀಡಿದರು.

ಅನಾಹುತದಲ್ಲಿ ಮೃತರಾದವರಿಗೆ ಸಂತಾಪ ಸೂಚಿಸಿದ ಚವಾಣ್, ಮಂತ್ರಾಲಯದ ಕಾರ್ಯಕಲಾಪಗಳು ಯಥಾಸ್ಥಿತಿಗೆ ಮರಳುವಂತೆ ಮಾಡುವಲ್ಲಿ ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುವುದು ಎಂದರು. ಅಗ್ನಿಶಾಮಕ ದಳ ಕಟ್ಟಡದ ನಷ್ಟ ಅಂದಾಜಿಸುವವರೆಗೆ  ಕಟ್ಟಡದೊಳಕ್ಕೆ ಪ್ರವೇಶ ನಿರಾಕರಿಸಲಾಗಿದ್ದು  ಸೋಮವಾರದಿಂದ ಪ್ರವೇಶ ಪುನರಾರಂಭಗೊಳ್ಳಲಿದೆ ಎಂದರು. 

ಆದರೆ ಇದಾವುದರ ಬಗ್ಗೆ ಮಾಹಿತಿ ದೊರೆಯದ ಸಚಿವಾಲಯದ ಕಚೇರಿ ಸಿಬ್ಬಂದಿಗಳು ಶುಕ್ರವಾರ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾದದ್ದು ಕಂಡುಬಂತು. ಬೆಂಕಿಯ  ಕೆನ್ನಾಲಿಗೆಗಳು ಬಲುಬೇಗದಲ್ಲಿ ಎಲ್ಲೆಡೆ ಹರಡಿದರೂ ಕೂಡ ಉಳಿದ ಕಚೇರಿಗಳಿಗೆ ಹೋಲಿಸಿದಲ್ಲಿ ಮುಖ್ಯಮಂತ್ರಿಯವರ ಕಚೇರಿಗೆ ಅಷ್ಟೇನೂ  ಹಾನಿ ಸಂಭವಿಸಲಿಲ್ಲ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಇದೇ ವೇಳೆ ವರದಿಗಾರರಿಗೆ ತಿಳಿಸಿದರು.

ಈ ಮಧ್ಯೆ ಬೆಂಕಿ ಮೊದಲು ಕಾಣಿಸಿಕೊಂಡ ನಾಲ್ಕನೇ ಮಹಡಿಯಲ್ಲಿದ್ದ ನಗರಾಭಿವೃದ್ಧಿ ಇಲಾಖೆ ಉಪ ಕಾರ್ಯದರ್ಶಿ ಅವರ ಕಚೇರಿ ಮತ್ತು ಪುನರ್ವಸತಿ ಮತ್ತು ಪರಿಹಾರ ಪ್ರಧಾನ ಕಾರ್ಯದರ್ಶಿ ಪ್ರವೀಣ ಪರ್ದೇಶಿ ಅವರ ಕಚೇರಿ ಹಾನಿಯಾಗದೆ ಉಳಿದಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. 

 ನಾಪತ್ತೆ: ಮುಖ್ಯಮಂತ್ರಿ ಅವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೋಹನ್ ಶಂಕರ್ ಮೋರೆ ಅವರು ಇದುವರೆಗೂ ಮನೆಗೆ ಹಿಂತಿರುಗಿಲ್ಲ ಎಂದು ಅವರ ಕುಟುಂಬದ ಸದಸ್ಯರು ದೂರು ನೀಡಿದ್ದು ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪವಾರ್-ಚವಾಣ್ ಭೇಟಿ:
ಮಹಾರಾಷ್ಟ್ರದ ಆಡಳಿತಾರೂಢ ಕಾಂಗ್ರೆಸ್ ಮಿತ್ರಪಕ್ಷವಾದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರಥ್ವಿರಾಜ್ ಚವಾಣ್ ಹಾಗೂ ಸಚಿವರುಗಳನ್ನು ಭೇಟಿ ಮಾಡಿ ಪರಿಸ್ಥಿತಿಯ ಅವಲೋಕನ ನಡೆಸಿದರು.

ಜೈಲ್ ಭರೋ ಚಳವಳಿ ರದ್ದು:
ಮಂತ್ರಾಲಯದಲ್ಲಿ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ  ಬಿಜೆಪಿ ತನ್ನ ಜೈಲ್ ಭರೋ ಚಳವಳಿಯನ್ನು ರದ್ದುಗೊಳಿಸಿದೆ ಎಂದು ಪಕ್ಷದ   ರಾಜ್ಯ ಘಟಕದ ಮುಖ್ಯಸ್ಥ ಸುಧೀರ್ ಮುಗಾಂಟಿವಾರ್ ತಿಳಿಸಿದರು.

ಗಡ್ಕರಿ ಆಗ್ರಹ: ಘಟನೆ ಕುರಿತಂತೆ ಸುಪ್ರೀಂಕೋರ್ಟ್ ಹಾಲಿ ಅಥವಾ ಮಾಜಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ತಿಳಿಸಿದ್ದಾರೆ.ಅಗ್ನಿ ಆಕಸ್ಮಿಕವು ವಿಪತ್ತು ನಿರ್ವಹಣೆಯಲ್ಲಿ ಮಹಾರಾಷ್ಟ್ರ ಸರ್ಕಾರ ದುರ್ಬಲವಾಗಿರುವುದನ್ನು ಎತ್ತಿತೋರಿಸುತ್ತದೆ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.