ADVERTISEMENT

ಮಣಿಪುರ: ಸರ್ಕಾರ ರಚನೆಗೆ ಕಾಂಗ್ರೆಸ್‌–ಬಿಜೆಪಿ ಕಸರತ್ತು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 20:27 IST
Last Updated 11 ಮಾರ್ಚ್ 2017, 20:27 IST
ಮಣಿಪುರ: ಸರ್ಕಾರ ರಚನೆಗೆ ಕಾಂಗ್ರೆಸ್‌–ಬಿಜೆಪಿ ಕಸರತ್ತು
ಮಣಿಪುರ: ಸರ್ಕಾರ ರಚನೆಗೆ ಕಾಂಗ್ರೆಸ್‌–ಬಿಜೆಪಿ ಕಸರತ್ತು   

ಇಂಫಾಲ: ಮಣಿಪುರದಲ್ಲಿ ಅತಂತ್ರ ಫಲಿತಾಂಶ ಪ್ರಕಟವಾಗಿದೆ. ಆದರೆ, ತಾವೇ ಗೆಲುವು ಸಾಧಿಸಿರುವುದಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳೆರಡೂ ಪ್ರತಿಪಾದಿಸಿವೆ.

60 ಸೀಟುಗಳ ವಿಧಾನಸಭೆಯಲ್ಲಿ  ಸರ್ಕಾರ ರಚನೆಗೆ 31 ಸೀಟುಗಳನ್ನು ಗೆಲ್ಲಬೇಕು. ಕಾಂಗ್ರೆಸ್‌ 28 ಕ್ಷೇತ್ರಗಳಲ್ಲಿ ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 21 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ನ್ಯಾಷನಲ್ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ಮತ್ತು ಆಡಳಿತಾರೂಢ ಕಾಂಗ್ರೆಸ್‌ ವಿರುದ್ಧ ಹೋರಾಟಕ್ಕೆ ಇಳಿದಿದ್ದ ನಾಗಾ ಪೀಪಲ್ಸ್‌ ಫ್ರಂಟ್‌ (ಎನ್‌ಪಿಎಫ್‌) ತಲಾ ನಾಲ್ಕು ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿವೆ. ಲೋಕಜನಶಕ್ತಿ ಪಕ್ಷ (ಎಲ್‌ಜೆಪಿ) ಒಂದು ಕ್ಷೇತ್ರದಲ್ಲಿ ಗೆದ್ದಿದೆ. ಇನ್ನು ತೃಣಮೂಲ ಕಾಂಗ್ರೆಸ್‌ ಮತ್ತು ಪಕ್ಷೇತರ ಅಭ್ಯರ್ಥಿ ತಲಾ ಒಂದು ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ.

ADVERTISEMENT

ಎಲ್‌ಜೆಪಿ ಅಭ್ಯರ್ಥಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಪಕ್ಷದ ಮುಖಂಡ, ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ. ಹೀಗಾಗಿ ಒಟ್ಟು 22 ಸೀಟುಗಳನ್ನು ಹೊಂದಿರುವ ಬಿಜೆಪಿಗೆ ಸರ್ಕಾರ ರಚನೆಗೆ ಎನ್‌ಪಿಎಫ್‌ ಮತ್ತು ಎನ್‌ಪಿಪಿ ಹಾಗೂ ಪಕ್ಷೇತರ ಅಭ್ಯರ್ಥಿಯ ಬೆಂಬಲ ಪಡೆಯುವುದು ಅನಿವಾರ್ಯ.

ಕಾಂಗ್ರೆಸ್‌ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದಿದ್ದರೂ, ಸರ್ಕಾರ ರಚಿಸುವುದು ತಾವೇ ಎಂದು ಬಿಜೆಪಿ ವಕ್ತಾರ ನಂಗ್ತೊಂಬಮ್‌ ಬೈರನ್‌ ಹೇಳಿದ್ದಾರೆ.

‌ಈ ಸಂಬಂಧ ಈಗಾಗಲೇ ಕಾರ್ಯಪ್ರವೃತ್ತರಾಗಿರುವುದಾಗಿ ಅವರು ತಿಳಿಸಿದ್ದಾರೆ.

‘ಭ್ರಷ್ಟಾಚಾರ ಮತ್ತು ನಾಗರಿಕ ಸಮುದಾಯದ ಮೇಲಿನ ದಾಳಿಗಳ ವಿರುದ್ಧ ಜನರು ಮತ ಹಾಕಿದ್ದಾರೆ. ನಮಗೆ ಮತ ನೀಡಿದ್ದಕ್ಕೆ ಜನರಿಗೆ ಕೃತಜ್ಞರಾಗಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಟಿ. ಚವೊಬಾ ಅವರು ಸೋಲು ಅನುಭವಿಸಿದ್ದಾರೆ.

ಹೀಗಾಗಿ ಸರ್ಕಾರದ ನೇತೃತ್ವದ ವಹಿಸಲು ಪಕ್ಷದ ರಾಷ್ಟ್ರೀಯ ಮುಖಂಡರು ಹೊಸ ನಾಯಕರನ್ನು ಆಯ್ಕೆ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

‘15 ವರ್ಷದ ಅಭಿವೃದ್ಧಿ ಕೆಲಸಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಅವರು ಶಾಂತಿ, ಸ್ಥಿರತೆ, ಪ್ರಗತಿ ಮತ್ತು ಪ್ರಾದೇಶಿಕ ಸಮಗ್ರತೆಯ ರಕ್ಷಣೆಯನ್ನು ಬಯ ಸುತ್ತಿದ್ದಾರೆ’ ಎಂದು ಮುಖ್ಯ ಮಂತ್ರಿ ಓಕ್ರಮ್‌ ಇಬೊಬಿ ಸಿಂಗ್‌ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.