ನವದೆಹಲಿ: ಇದೇ 19ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲು ಬಳ್ಳಾರಿ ಲೋಕಸಭೆ ಸದಸ್ಯೆ ಜೆ. ಶಾಂತಾ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿತು. ಆದರೆ, ಈ ಮತವನ್ನು ಪ್ರತ್ಯೇಕ ಸೀಲ್ ಮಾಡಿದ ಲಕೋಟೆಯಲ್ಲಿಟ್ಟು ನ್ಯಾಯಾಲಯದ ನಿರ್ದೇಶನದ ಬಳಿಕ ಎಣಿಕೆ ಮಾಡಬೇಕು ಎಂದು ಸೂಚಿಸಿತು.
ಶಾಂತಾ ಹೊಸದಾಗಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾ.ಟಿ.ಎಸ್.ಠಾಕೂರ್ ಹಾಗೂ ಗ್ಯಾನಸುಧಾ ಮಿಶ್ರ ಅವರಿರುವ ಪೀಠ ತನ್ನ ಮೊದಲಿನ ಆದೇಶ ತಿದ್ದುಪಡಿ ಮಾಡಿ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಜಿದಾರರಿಗೆ ಅನುಮತಿ ನೀಡಿತು.
`ರಾಷ್ಟ್ರಪತಿ ಚುನಾವಣೆ ಒಂದು ಅಪರೂಪದ ಸಂದರ್ಭ. ಈ ಚುನಾವಣೆಯಲ್ಲಿ ಶಾಂತಾ ಅವರಿಗೆ ಮತದಾನ ಮಾಡಲು ಅವಕಾಶ ನೀಡುವುದರಿಂದ ನಿಮಗೇನೂ ತೊಂದರೆ ಆಗುವುದಿಲ್ಲ~ ಎಂದು ನ್ಯಾಯಪೀಠವು, ಇವರ ಆಯ್ಕೆಯನ್ನು ಪ್ರಶ್ನಿಸಿರುವ ಕಾಂಗ್ರೆಸ್ ಕಾರ್ಯಕರ್ತ ಎಂ. ಚಂದ್ರೇಗೌಡ ಅವರ ವಕೀಲರಿಗೆ ಹೇಳಿತು.
ಶಾಂತಾ ಅವರ ಪರ ಹಾಜರಾದ ಹಿರಿಯ ವಕೀಲ ಜಯದೀಪ್ ಗುಪ್ತ ತಮ್ಮ ಕಕ್ಷಿಗಾರರಿಗೆ ಮತ ಹಾಕಲು ಅವಕಾಶ ಕೊಡಬೇಕು. ಇಲ್ಲವಾದರೆ ರಾಷ್ಟ್ರಪತಿ ಚುನಾವಣೆಯಲ್ಲಿ ಅವರ ಇಡೀ ಕ್ಷೇತ್ರಕ್ಕೆ ಪ್ರಾತಿನಿಧ್ಯವೇ ಸಿಗದಂತಾಗುತ್ತದೆ. ಹೈಕೋರ್ಟ್ ಕೇವಲ ಪ್ರಕ್ರಿಯೆಯಲ್ಲಿನ ಕೆಲವು ಲೋಪಗಳಿಂದಾಗಿ ಅವರ ಸದಸ್ಯತ್ವ ಅನೂರ್ಜಿತಗೊಳಿಸಿ ಮರು ಎಣಿಕೆಗೆ ಆದೇಶಿಸಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.