ADVERTISEMENT

ಮಧ್ಯಪ್ರದೇಶದಲ್ಲಿ ಪ್ರತಿಭಟನೆ ವೇಳೆ ಗುಂಡೇಟಿಗೆ ಐವರು ರೈತರು ಬಲಿ; ಕರ್ಫ್ಯೂ ಜಾರಿ

ಏಜೆನ್ಸೀಸ್
Published 6 ಜೂನ್ 2017, 18:58 IST
Last Updated 6 ಜೂನ್ 2017, 18:58 IST
ಮಧ್ಯಪ್ರದೇಶದಲ್ಲಿ ಪ್ರತಿಭಟನೆ ವೇಳೆ ಗುಂಡೇಟಿಗೆ ಐವರು ರೈತರು ಬಲಿ; ಕರ್ಫ್ಯೂ ಜಾರಿ
ಮಧ್ಯಪ್ರದೇಶದಲ್ಲಿ ಪ್ರತಿಭಟನೆ ವೇಳೆ ಗುಂಡೇಟಿಗೆ ಐವರು ರೈತರು ಬಲಿ; ಕರ್ಫ್ಯೂ ಜಾರಿ   

ಭೋಪಾಲ್‌: ಮಧ್ಯಪ್ರದೇಶದ ಮಂಡ್‌ಸೌರ್‌ ಜಿಲ್ಲೆಯಲ್ಲಿ ಪ್ರತಿಭಟನಾ ನಿರತ ರೈತರು ಮತ್ತು ಪೊಲೀಸರ ಮಧ್ಯೆ ಮಂಗಳವಾರ ನಡೆದ ಘರ್ಷಣೆಯಲ್ಲಿ ಪೊಲೀಸರ ಗುಂಡೇಟಿಗೆ ಐವರು ರೈತರು ಸಾವಿಗೀಡಾಗಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಕರ್ಫ್ಯೂ ಜಾರಿ ಮಾಡಲಾಗಿದ್ದು, ಸರ್ಕಾರ ಘಟನೆಯ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

ರೈತರು ತಮ್ಮ ಬೆಳೆದ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡುವುದು ಸೇರಿದಂತೆ ಸಾಲ ಮನ್ನಾಕ್ಕೆ ಒತ್ತಾಯಿಸಿ ಐದು ದಿನದಿಂದ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾ ರೂಪ ಪಡೆದು ಕೊಂಡಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ನಡೆಸಿದ ಗುಂಡೇಟಿಗೆ ಐವರು ರೈತರು ಬಲಿಯಾಗಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಕರ್ಫ್ಯು ವಿಧಿಸಲಾಗಿದ್ದು, ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ ಅವರು ಘಟನೆಯ ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದಾರೆ.

₹10 ಲಕ್ಷ ಪರಿಹಾರ
ಘಟನೆಯಲ್ಲಿ ಮೃತಪಟ್ಟ ರೈತರ ಕುಟುಂಬಳಿಗೆ ಘೋಷಿಸಲಾಗಿದ್ದ ₹5 ಲಕ್ಷ ಪರಿಹಾರವನ್ನು ₹10 ಲಕ್ಷಕ್ಕೆ ಹೆಚ್ಚಿಸಿ ಸರ್ಕಾರ ಆದೇಶಿಸಿದೆ.

ಶಾಂತಿ ಕಾಪಾಡಲು ಮನವಿ
ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ ಎಂದು ಭರವಸೆ ನೀಡಿರುವ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು, ಜನರು ಹಿಂಸಾಚಾರಕ್ಕೆ ಪ್ರಚೋದನೆ ನೀಡಬಾರದು. ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

(ಮಧ್ಯಪ್ರದೇಶದ ಮಂದಸೌರ್‌ ಜಿಲ್ಲೆಯ ಪಿಪಲ್ಯಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ  ವೇಳೆ ಪೊಲೀಸರು ಗುಂಡು ಹಾರಿಸಿದ್ದರಿಂದ ಆಕ್ರೋಶಗೊಂಡ ರೈತರು ವಾಹನಗಳಿಗೆ ಬೆಂಕಿ ಹಚ್ಚಿದರು - ಪಿಟಿಐ ಚಿತ್ರ)

‘ಮಹಾರಾಷ್ಟ್ರದಲ್ಲಿ ಸಾಲ ಮನ್ನಾ’
ಮುಂಬೈ:
‘ಹಿಂದೆಂದೂ ಇಲ್ಲದಷ್ಟು ದೊಡ್ಡ ರೀತಿಯಲ್ಲಿ ರಾಜ್ಯದ ರೈತರ ಸಾಲ ಮನ್ನಾ ಮಾಡಲು ಯೋಜನೆ ರೂಪಿಸಲಾಗುತ್ತಿದೆ’ ಎಂದು ಮಹಾ ರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌  ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ರೈತರು ಕಳೆದ ಆರು ದಿನಗಳಿಂದ ನಡೆಸುತ್ತಿರುವ ಮುಷ್ಕರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ಸಾಲ ಮನ್ನಾ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಕಳೆದ ವಾರ ರೈತರ ಸಭೆ ನಡೆಸಲಾಗಿದ್ದು, ಅಕ್ಟೋಬರ್‌ 31ರ ಒಳಗೆ ಈ ಯೋಜನೆ ಜಾರಿಗೊಳಿಸುವ ಕುರಿತು ಚರ್ಚಿಸಲಾಗಿದೆ’ ಎಂದು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.