ADVERTISEMENT

ಮಮತಾ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಭಾರತ ವಿದ್ಯಾರ್ಥಿ ಒಕ್ಕೂಟದ (ಎಸ್‌ಎಫ್‌ಐ) ಸದಸ್ಯ ಸುದೀಪ್ತೋ ಗುಪ್ತಾ ಹತ್ಯೆಯನ್ನು ಖಂಡಿಸಿ ಎಡಪಕ್ಷ ಸಂಘಟನೆಗಳು ಮಂಗಳವಾರ ಇಲ್ಲಿ ಕೇಂದ್ರ ಯೋಜನಾ ಆಯೋಗದ ಕಚೇರಿ ಹೊರಗಡೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಪ್ರತಿಭಟನೆ ನಡೆಸಿದರು.

ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರನ್ನು ಭೇಟಿ ಮಾಡಲು ಮಮತಾ ಅವರು ರಾಜ್ಯದ ಹಣಕಾಸು ಸಚಿವ ಅಮಿತ್ ಮಿತ್ರಾ ಅವರೊಂದಿಗೆ ಮಧ್ಯಾಹ್ನ 3.45ರ ಸುಮಾರಿಗೆ ಆಯೋಗದ ಕಚೇರಿಗೆ ಆಗಮಿಸಿದರು. ಕಚೇರಿಯ ಮುಂದೆ ಜಮಾಯಿಸಿದ್ದ ಪ್ರತಿಭಟನಾಕಾರರು ಮಮತಾ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತು. ಉದ್ರಿಕ್ತ ಜನರು ಮಿತ್ರಾ ಅವರನ್ನು ಎಳೆದಾಡಿ ಅವರ ಅಂಗಿಯನ್ನು ಹರದಿ ಹಾಕಿದರು. ಪಂಚಾಯತ್ ಸಚಿವರಾದ ಸುಬ್ರತಾ ಮುಖರ್ಜಿ ಹಾಗೂ ನಗರಾಭಿವೃದ್ಧಿ ಸಚಿವ ಫಿರ್‌ಹದ್ ಹಕೀಂ ಕೂಡ ಪ್ರತಿಭಟನಾಕಾರರ ಆಕ್ರೋಶ ಎದುರಿಸಬೇಕಾಯಿತು.

ತಮ್ಮ ವಿರುದ್ಧ ಘೋಷಣೆ ಕೂಗಿದ್ದಕ್ಕೆ ಸಿಟ್ಟಿಗೆದ್ದ ಮಮತಾ, `ಇದು ಅನಾಗರಿಕ ವರ್ತನೆ' ಎಂದು ಕಿಡಿಕಾರಿದರು. `ಮಿತ್ರಾ ಮೇಲೆ ಪ್ರತಿಭಟನಾಕಾರರು ಹಲ್ಲೆ ಮಾಡಿದ್ದಾರೆ. ಇದು ಅವಮಾನಕರ. ನೀವು ಇಂಥ ಬೆಳವಣಿಗೆಯನ್ನು ತಡೆಯಲು ಸಾಧ್ಯವೇ' ಎಂದು ಮೊಂಟೆಕ್ ಅವರನ್ನು ಪ್ರಶ್ನಿಸಿದರು. ಸೂಕ್ತ ಭದ್ರತಾ ವ್ಯವಸ್ಥೆ ಮಾಡಿಲ್ಲ ಎಂದು ದೆಹಲಿ ಪೊಲೀಸರನ್ನು ಮಮತಾ ತರಾಟೆಗೆ ತೆಗೆದುಕೊಂಡರು.

ಆರೋಪ ನಿರಾಕರಣೆ: ಮಮತಾ ಆರೋಪವನ್ನು ಅಲ್ಲಗಳೆದಿರುವ ಎಸ್‌ಎಫ್‌ಐ ಕಾರ್ಯಕರ್ತರು, `ನಾವು ಶಾಂತಿಯುತ ಪ್ರತಿಭಟನೆ ನಡೆಸಿದ್ದೇವೆ. ಯಾರ ಮೇಲೂ ಹಲ್ಲೆ ಮಾಡಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಕಾಲೇಜು ವಿದ್ಯಾರ್ಥಿ ಒಕ್ಕೂಟಕ್ಕೆ ಚುನಾವಣೆ ನಡೆಸುವಂತೆ ಆಗ್ರಹಿಸಿ ಕಳೆದ ವಾರ ಕೋಲ್ಕತ್ತದಲ್ಲಿ ನಡೆದ ಪ್ರತಿಭಟನೆ ವೇಳೆ ಸುದೀಪ್ತೋ ಮೃತಪಟ್ಟಿದ್ದರು.

ಪ್ರಧಾನಿ ಜತೆ ಭೇಟಿ ರದ್ದು: ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಮಮತಾ ಮಧ್ಯೆ ಮಂಗಳವಾರ ಸಂಜೆ ನಡೆಯಬೇಕಿದ್ದ ಮಹತ್ವದ ಮಾತುಕತೆ, ಪ್ರತಿಭಟನೆಯ ಹಿನ್ನೆಲೆಯಲ್ಲಿ ರದ್ದಾಯಿತು. ತಮಗೆ ಆರೋಗ್ಯ ಸರಿ ಇಲ್ಲ ಎಂಬ ಕಾರಣಕ್ಕೆ ಸಭೆಯನ್ನು ರದ್ದುಮಾಡುವಂತೆ ಮಮತಾ ಕೋರಿದ್ದಾಗಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.