ADVERTISEMENT

ಮಹಿಳಾ ಮೀಸಲು ಬೋಗಿಗಳಿಗೆ ಭಿನ್ನ ಬಣ್ಣ

ಸುರಕ್ಷತೆ ಹೆಚ್ಚಿಸಲು ಹಲವು ಕ್ರಮಗಳ ಜಾರಿಗೆ ರೈಲ್ವೆ ಚಿಂತನೆ

ಪಿಟಿಐ
Published 4 ಮೇ 2018, 19:52 IST
Last Updated 4 ಮೇ 2018, 19:52 IST
ಮಹಿಳಾ ಮೀಸಲು ಬೋಗಿ
ಮಹಿಳಾ ಮೀಸಲು ಬೋಗಿ   

ನವದೆಹಲಿ: ‘ಮಹಿಳೆಯರಿಗೆ ಮೀಸಲಿರಿಸಿದ ಬೋಗಿಗಳನ್ನು ರೈಲಿನ ಮಧ್ಯ ಭಾಗದಲ್ಲಿ ಜೋಡಿಸಲಾಗುತ್ತದೆ ಮತ್ತು ಆ ಬೋಗಿಗಳು ಇನ್ನು ಮುಂದೆ ಭಿನ್ನ ಬಣ್ಣದ್ದಾಗಿರಲಿವೆ’ ಎಂದು ರೈಲ್ವೆ ಸಚಿವಾಲಯ ಹೇಳಿದೆ.

ರೈಲ್ವೆಯು 2018ನ್ನು ಮಹಿಳಾ ಸುರಕ್ಷತಾ ವರ್ಷವನ್ನಾಗಿ ಆಚರಿಸುತ್ತಿದ್ದು, ಅದರ ಭಾಗವಾಗಿ ಈ ಕ್ರಮಕ್ಕೆ ಮುಂದಾಗಿದೆ.

‘ಸದ್ಯ ಮಹಿಳಾ ಮೀಸಲು ಬೋಗಿಗಳು ರೈಲಿನ ಕೊನೆಯಲ್ಲಿದೆ. ಬಹುತೇಕ ಸಂದರ್ಭದಲ್ಲಿ ನಿಲ್ದಾಣಗಳಲ್ಲಿ ಈ ಬೋಗಿಗಳು ನಿಲ್ಲುವ ಜಾಗದಲ್ಲಿ ಬೆಳಕಿನ ವ್ಯವಸ್ಥೆ ಇರುವುದಿಲ್ಲ. ಅಲ್ಲದೆ ಪ್ಲಾಟ್‌ಫಾರಂನ ಕೊನೆಯ ಭಾಗದಲ್ಲಿ ಇರುವುದರಿಂದ ಮಹಿಳೆಯರು ಈ ಬೋಗಿಗಳಿಗೆ ಹತ್ತುವುದಿಲ್ಲ. ಇದು ಅತ್ಯಂತ ಗಂಭೀರವಾದ ಸಮಸ್ಯೆ’ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.

ADVERTISEMENT

‘ಈ ಆತಂಕಗಳನ್ನು ನಿವಾರಿಸುವ ಸಲುವಾಗಿ ಮಹಿಳಾ ಮೀಸಲು ಬೋಗಿಗಳನ್ನು ರೈಲಿನ ಮಧ್ಯಭಾಗದಲ್ಲಿ ಜೋಡಿಸಲಾಗುವುದು. ಅಲ್ಲದೆ ಅವುಗಳನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಸಾಮಾನ್ಯ ಬೋಗಿಗಳಿಗಿಂತ ಭಿನ್ನ ಬಣ್ಣ ಬಳಿಯಲಾಗುತ್ತದೆ. ತಡರಾತ್ರಿಯಲ್ಲಿ ರೈಲು ಹತ್ತುವ ಒಬ್ಬಂಟಿ ಮಹಿಳಾ ಪ್ರಯಾಣಿಕರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ’ ಎಂದು ಸಚಿವಾಲಯ ಹೇಳಿದೆ.

‘ಮಹಿಳಾ ಮೀಸಲು ಬೋಗಿಗಳಿಗೆ ಯಾವ ಬಣ್ಣ ಇರಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ. ಬಹುಶಃ ತಿಳಿ ಗುಲಾಬಿ (ಪಿಂಕ್) ಬಣ್ಣವನ್ನು ಅಂತಿಮಗೊಳಿಸಬಹುದು’ ಎಂದು ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ.

‘ಮಹಿಳಾ ಮೀಸಲು ಬೋಗಿಗಳ ಬಾಗಿಲುಗಳನ್ನು ಮುಚ್ಚಿದ್ದರೂ, ಕಿಟಕಿಗಳ ಮೂಲಕ ಪುರುಷರು ಒಳಕ್ಕೆ ನುಗ್ಗುವ ಬಗ್ಗೆ ಭಾರಿ ಸಂಖ್ಯೆಯಲ್ಲಿ ದೂರುಗಳು ದಾಖಲಾಗಿವೆ. ಹೀಗಾಗಿ ಈ ಬೋಗಿಗಳ ಕಿಟಕಿಗಳಿಗೆ ಜಾಲರಿ ಅಳವಡಿಸಲಾಗುವುದು. ಮತ್ತಷ್ಟು ಸುರಕ್ಷತೆಗಾಗಿ ಬೋಗಿಗಳ ಒಳಭಾಗದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗುವುದು’ ಎಂದು ಮೂಲಗಳು ಹೇಳಿವೆ.

ವಿಳಂಬ ಹೆಚ್ಚಳ: ಕಳೆದ ಆರ್ಥಿಕ ವರ್ಷದಲ್ಲಿ (2017–18ರಲ್ಲಿ) ದೇಶದಲ್ಲಿ ಸಂಚರಿಸಿದ ರೈಲುಗಳಲ್ಲಿ ಶೇ 30ರಷ್ಟು ನಿಗದಿತ ಸಮಯಕ್ಕಿಂತ ತಡವಾಗಿ ಕೊನೆಯ ನಿಲ್ದಾಣಗಳನ್ನು ಮುಟ್ಟಿವೆ. ಹಳಿ ಉನ್ನತೀಕರಣ ಮತ್ತು ನಿರ್ವಹಣಾ ಕಾಮಗಾರಿಗಳಿಂದಾಗಿ ರೈಲುಗಳು ತಡವಾಗಿವೆ. ಇದನ್ನು ತಪ್ಪಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.