ADVERTISEMENT

ಮಹಿಳಾ ಮೀಸಲು: ಸರ್ವಪಕ್ಷ ಸಭೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 16:50 IST
Last Updated 8 ಮಾರ್ಚ್ 2011, 16:50 IST

ನವದೆಹಲಿ (ಪಿಟಿಐ): ಅಂತರರಾಷ್ಟ್ರೀಯ ಮಹಿಳಾ ದಿನವಾದ ಮಂಗಳವಾರ ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ಎಲ್ಲ ಪಕ್ಷಗಳು ಒಲವು ತೋರಿದರೂ, ಕೋಟಾ ಹಂಚಿಕೆ ಬಗ್ಗೆ ಮಾತ್ರ ವಿಭಿನ್ನ ನಿಲುವು ವ್ಯಕ್ತಪಡಿಸಿವೆ.ಈ ಹಿನ್ನೆಲೆಯಲ್ಲಿ ಸರ್ವ ಪಕ್ಷಗಳಲ್ಲೂ ಒಮ್ಮತಾಭಿಪ್ರಾಯವನ್ನು ಮೂಡಿಸಲು ಮತ್ತೆ ಹೊಸದಾಗಿ ರಾಜಕೀಯ ನಾಯಕರೊಡನೆ ಸಮಾಲೋಚನೆ ನಡೆಸುವಂತೆ ಸಭಾಧ್ಯಕ್ಷೆ ಮೀರಾ ಕುಮಾರ್ ಅವರನ್ನು ಸರ್ಕಾರ ಒತ್ತಾಯಿಸಿದೆ.

ಅನಿರೀಕ್ಷಿತವಾಗಿ ಎದುರಾದ ಚರ್ಚೆಯಲ್ಲಿ ಎಸ್‌ಪಿ, ಆರ್‌ಜೆಡಿ ಹಾಗೂ ಜೆಡಿಯು ಜೊತೆ ಪಾಲ್ಗೊಂಡ ಇತರ ಪಕ್ಷಗಳ ಸದಸ್ಯರು, ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸಲು ಯಾವುದೇ ಬದಲಾವಣೆ ಇಲ್ಲದಂತೆ ಈಗಿರುವ ಮಾದರಿಯಲ್ಲೇ ಮಸೂದೆ ಮಂಡಿಸಿ, ರಾಜ್ಯಸಭೆ ಯಂತೆಯೇ ಲೋಕಸಭೆಯಲ್ಲೂ ಅಂಗೀಕರಿಸುವುದರ ವಿರುದ್ಧ ಎಚ್ಚರಿಕೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಾ ನಾಯಕ ಪ್ರಣವ್ ಮುಖರ್ಜಿ, ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಒಮ್ಮತಾಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಸಭಾಧ್ಯಕ್ಷರೇ ಸರ್ವ ಪಕ್ಷಗಳೊಡನೆ ಸಮಾಲೋಚನೆ ಕೈಗೊಳ್ಳಬೇಕು ಎಂದರು.

ಇದಕ್ಕೂ ಮುನ್ನ ಮಾತನಾಡಿದ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಮಸೂದೆಗೆ ಸಂಬಂಧಿಸಿದಂತೆ ಒಮ್ಮತಾಭಿಪ್ರಾಯ ಮೂಡಿಸಲು ಸಲಹೆ ನೀಡಿದರು.ರಾಷ್ಟ್ರಪತಿ, ಲೋಕಸಭಾಧ್ಯಕ್ಷೆ, ಪ್ರತಿಪಕ್ಷ ನಾಯಕಿ, ಯುಪಿಎ ಅಧ್ಯಕ್ಷೆ, ಹೀಗೆ ಮಹಿಳೆಯರೇ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರೂ ಸಹ, ಕಳೆದ 16 ವರ್ಷಗಳಿಂದಲೂ ಮಹಿಳಾ ಮೀಸಲು ಮಸೂದೆ ನೆನೆಗುದಿಯಲ್ಲಿರುವ ಬಗ್ಗೆ ವಿಷಾದಿಸಿದರು.

ಮಹಿಳಾ ಮೀಸಲು ಮಸೂದೆಗೆ ಸಂಪೂರ್ಣ ಬೆಂಬಲ ಸೂಚಿಸಿದ ಸಭಾಧ್ಯಕ್ಷರು, ಈ ಬಗ್ಗೆ ಒಮ್ಮತಾಭಿಪ್ರಾಯ ಮೂಡಿಸಲು ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಬಳಿಕ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸುವ ಭರವಸೆ ನೀಡಿದರು.

ಮುಲಾಯಂ ಸಿಂಗ್ ಯಾದವ್ (ಎಸ್‌ಪಿ), ಶರದ್ ಯಾದವ್ (ಜೆಡಿಯು) ಹಾಗೂ ರಘುವಂಶ ಪ್ರಸಾದ್ ಸಿಂಗ್ (ಆರ್‌ಜೆಡಿ) ಮಾತನಾಡಿ, ಮಹಿಳಾ ಮೀಸಲು ಮಸೂದೆಯಲ್ಲಿ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಕೋಟಾ ಒದಗಿಸದಿದ್ದರೆ ಗಂಭೀರ ಪರಿಣಾಮದ ಬೆದರಿಕೆ ಹಾಕಿದರು.

‘ಮಹಿಳಾ ಮೀಸಲಾತಿಗೆ ತಾವು ವಿರೋಧಿಗಳಲ್ಲ, ಆದರೆ ಈಗಿನ ಮಾದರಿಯ ಮಸೂದೆಗೆ ಮಾತ್ರ ಆಕ್ಷೇಪ ಎತ್ತಿದ್ದೇವೆ’ ಎಂದ ಮುಲಾಯಂ, ರಾಜಕೀಯ ಪಕ್ಷಗಳು ತಮ್ಮ ಟಿಕೆಟ್ ಹಂಚಿಕೆಯಲ್ಲಿ ಶೇ 20ರಷ್ಟು ಸ್ಥಾನಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ನೀಡಬೇಕು’ ಎಂದು ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.