ADVERTISEMENT

ಮೀನುಗಾರರ ಶ್ರೇಯೋಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಅಗತ್ಯ: ರಾಹುಲ್‌ ಗಾಂಧಿ

ಪಿಟಿಐ
Published 14 ಡಿಸೆಂಬರ್ 2017, 10:38 IST
Last Updated 14 ಡಿಸೆಂಬರ್ 2017, 10:38 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಪೂಂಥುರಾ/ವಿಝಿನ್‌ಜಾಂ(ಕೇರಳ):  ಒಖಿ ಚಂಡಮಾರುತದಿಂದ 66 ಜನರು ಜೀವ ಕಳೆದುಕೊಂಡ ದಕ್ಷಿಣ ಕೇರಳದ ಪ್ರದೇಶಗಳಿಗೆ ಕಾಂಗ್ರೆಸ್‌ನ ಚುನಾಯಿತ ಅಧ್ಯಕ್ಷ ರಾಹುಲ್‌ ಗಾಂಧಿ ಗುರುವಾರ ಭೇಟಿ ನೀಡಿದರು. ಸಂಬಂಧಿಗಳನ್ನು ಕಳೆದುಕೊಂಡ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದರು.

ಸ್ಥಳೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮೀನುಗಾರರ ಶ್ರೇಯೋಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯದ ಅಗತ್ಯತೆ ಇದೆ. ಈಗ ಆಗಿರುವ ಹಾನಿಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪಾಠ ಕಲಿಯಬೇಕಿದೆ. ಅನಾಹುತ ತಪ್ಪಿಸಲು ಹವಾಮಾನ ಮುನ್ಸೂಚನೆ ನೀಡುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕಿದೆ’ ಎಂದರು.

‘ದೇಶದಲ್ಲಿ ಪ್ರಸ್ತುತ ರೈತರು ಮತ್ತು ಮೀನುಗಾರರ ಪರಿಸ್ಥಿತಿ ಒಂದೇ ಆಗಿದೆ. ಇಬ್ಬರೂ ಇಂದು ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ. ರೈತರಿಗಾಗಿ ಈಗಾಗಲೇ ಒಂದು ಸಚಿವಾಲಯವಿದೆ. ಮೀನುಗಾರರ ಹಿತಕಾಯಲು ಪ್ರತ್ಯೇಕ ಸಚಿವಾಲಯ ರಚಿಸುವ ಅಗತ್ಯ ಇದೆ’ ಎಂದರು.

ADVERTISEMENT

ನವೆಂಬರ್‌ 30ರಂದು ಕೇರಳ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶಗಳಿಗೆ ಒಖಿ ಚಂಡಮಾರುತ ಅಪ್ಪಳಿಸಿದ್ದರಿಂದ 95 ಮೀನುಗಾರರು ಕಾಣೆಯಾಗಿದ್ದಾರೆ.

ಈ ಭೇಟಿಯಲ್ಲಿ ರಾಹುಲ್‌ಗೆ ಮಾಜಿ ಮುಖ್ಯಮಂತ್ರಿ ಉಮನ್‌ ಚಾಂಡಿ, ಸಂಸದ ಶಶಿ ತರೂರ್‌ ಮತ್ತು ಕೆ.ಸಿ.ವೇಣುಗೋಪಾಲ್‌ ಸಾಥ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.