ADVERTISEMENT

ಮುಂಬೈ ಅವಳಿ ಸ್ಫೋಟ: ಪೋಟಾ ತೀರ್ಪು ಎತ್ತಿಹಿಡಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

 ಮುಂಬೈ (ಐಎಎನ್‌ಎಸ್): ಮುಂಬೈನಲ್ಲಿ 2003ರಲ್ಲಿ ನಡೆದ ಅವಳಿ ಬಾಂಬ್ ಸ್ಫೋಟ ಪ್ರಕರಣದ ಮೂವರು ಆರೋಪಿಗಳ ಮರಣ ದಂಡನೆ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದೆ.

ಆರೋಪಿಗಳ ಪೈಕಿ ಮಹಿಳೆಯೂ ಸೇರಿದ್ದಾಳೆ. ವಿಶೇಷ ಪೋಟಾ ನ್ಯಾಯಾಲಯ ಅಶ್ರತ್ ಅನ್ಸಾರಿ, ಹನೀಫ್ ಸೈಯದ್ ಅನೀಸ್ ಹಾಗೂ ಆತನ ಪತ್ನಿ ಫಾಮೀದಾ ಸೈಯದ್‌ಗೆ 2009ರ ಅಗಸ್ಟ್‌ನಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಿತ್ತು.

ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು.ಆರೋಪಿಗಳು 2003ರ ಅಗಸ್ಟ್ 25ರಂದು ದಕ್ಷಿಣ ಮುಂಬೈನ ಗೇಟ್ ವೇ ಆಫ್ ಇಂಡಿಯಾ ಮತ್ತು ಝವೇರಿ ಬಜಾರ್ ಪ್ರದೇಶದಲ್ಲಿ ಶಕ್ತಿಶಾಲಿ ಬಾಂಬ್ ಇಟ್ಟು ಸ್ಫೋಟಿಸಿದ್ದರು. ಈ ಘಟನೆಯಲ್ಲಿ 52 ಮಂದಿ ಸತ್ತಿದ್ದರು. ಇದಲ್ಲದೇ 2003 ಜುಲೈ 28ರಂದು ಕೇಂದ್ರ ಮುಂಬೈನ ಘಾಟ್‌ಕೋಪರ್‌ನಲ್ಲಿ ಬಸ್‌ನಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ್ದು, ಇಬ್ಬರು ಮೃತಪಟ್ಟಿದ್ದರು. ಈ ಘಟನೆಯಲ್ಲಿಯೂ ಮೂವರ ಕೈವಾಡ ದೃಢಪಟ್ಟಿದೆ ಎಂದು ನ್ಯಾಯಮೂರ್ತಿಗಳಾದ ಎ.ಎಂ.ಕನ್ವೀಲ್ಕರ್ ಮತ್ತು ಪಿ.ಡಿ.ಕೋಡೆ ಅವರನ್ನು ಒಳಗೊಂಡ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಆರೋಪಿಗಳು ನಿಷೇಧಿತ ಲಷ್ಕರ್-ಎ-ತೋಯ್ಬಾ ಸಂಘಟನೆಗೆ ಸೇರಿದ್ದು, ಮುಂಬೈನ ವಿವಿಧ ಕಡೆಗಳಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದರು ಎಂದೂ ಆರೋಪಿಸಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಕನಿಷ್ಠ 103 ಸಾಕ್ಷಿಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಒಬ್ಬ ಆರೋಪಿ ಮಾಫಿ ಸಾಕ್ಷಿಯಾಗಿದ್ದು, ಇಬ್ಬರನ್ನು ದೋಷ ಮುಕ್ತಗೊಳಿಸಲಾಗಿತ್ತು. ಇನ್ನೊಬ್ಬ ಆರೋಪಿ ವಿಚಾರಣೆ ಹಂತದಲ್ಲಿಯೇ ಮೃತಪಟಟ್ಟಿದ್ದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.