ADVERTISEMENT

ಮುಂಬೈ: ಹಾಡಹಗಲೇ ಪತ್ರಕರ್ತನ ಹತ್ಯೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 19:30 IST
Last Updated 11 ಜೂನ್ 2011, 19:30 IST

ಮುಂಬೈ (ಪಿಟಿಐ):  ಭೂಗತ ಹಾಗೂ ಅಪರಾಧ ಸುದ್ದಿಗಳನ್ನು ಹೆಕ್ಕಿ ತೆಗೆಯುತ್ತಿದ್ದ ಇಲ್ಲಿನ ಹಿರಿಯ ನಿಷ್ಣಾತ ತನಿಖಾ ಪತ್ರಕರ್ತನನ್ನು ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ತೈಲ ಮಾಫಿಯಾ ಸಂಚು ಈ ದುಷ್ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ.

ಎರಡು ದಶಕಗಳಿಗಿಂತಲೂ ಹೆಚ್ಚಿನ ಕಾಲದಿಂದ ಭೂಗತ ಜಗತ್ತಿನ ಸುದ್ದಿಗಳನ್ನು ಬರೆಯುತ್ತಿದ್ದ ಜ್ಯೋತಿರ್ಮಯ್ ಡೇ (56) ಹತ್ಯೆಗೀಡಾದವರು. ಇಂಗ್ಲಿಷ್ ಟ್ಯಾಬ್ಲಾಯ್ಡ `ಮಿಡ್ ಡೇ~ದಲ್ಲಿ ಅವರು ವಿಶೇಷ ತನಿಖಾ ವಿಭಾಗದ ಸಂಪಾದಕರಾಗಿದ್ದರು. ಈ ಹಿಂದೆ ಹಲವು ಇಂಗ್ಲಿಷ್ ದೈನಿಕಗಳಲ್ಲಿ ಸೇವೆ ಸಲ್ಲಿಸಿದ್ದರು.

ಮಧ್ಯಾಹ್ನ 3.30ರಲ್ಲಿ ಪೊವಾಯ್ ಪ್ರದೇಶದ ಸ್ಪೆಕ್ಟ್ರಾ ಕಟ್ಟಡದ ಬಳಿ ಬೈಕ್ ಮೇಲೆ ತೆರಳುತ್ತಿದ್ದ ಅವರ ಮೇಲೆ ಹಿಂದಿನಿಂದ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಅಪರಿಚಿತರು ಗುಂಡುಗಳನ್ನು ಹಾರಿಸಿದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು.

ಅಪರಿಚಿತ ಬಂದೂಕುಧಾರಿಗಳು ಪರಾರಿಯಾಗಿದ್ದು, ಕನಿಷ್ಠ ನಾಲ್ಕರಿಂದ ಐದು ಸುತ್ತು ಗುಂಡು ಹಾರಿಸಿದ್ದಾರೆ. ಡೇ ಅವರ ದೇಹದ ಒಂಬತ್ತು ಕಡೆ ಗಾಯಗಳಿದ್ದವು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ವಿಶ್ವಾಸ್ ಪಾಟೀಲ್ ತಿಳಿಸಿದ್ದಾರೆ.

ಡೇ ಅವರು ಇತ್ತೀಚೆಗಷ್ಟೇ ತೈಲ ಮಾಫಿಯಾ ಕುರಿತು ಸರಣಿ ಲೇಖನಗಳನ್ನು ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಬೆದರಿಕೆಗಳು ಬಂದಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ತೈಲ ಮಾಫಿಯಾ ಮತ್ತು ಭೂಗತ ಜಗತ್ತಿನ ಬಗ್ಗೆ ಅವರು ಎರಡು ಪುಸ್ತಕಗಳನ್ನೂ ಬರೆದಿದ್ದರು.
ತೀವ್ರ ಖಂಡನೆ: ಪ್ರಧಾನಿ ಮನಮೋಹನ್ ಸಿಂಗ್ ಅವರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಈ ಹೇಯ ಕೃತ್ಯವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆಯುವ ಇಂತಹ ದಾಳಿಯನ್ನು ಯಾವುದೇ ನಾಗರಿಕ ಸಮಾಜ ಸಹಿಸದು  ಎಂದು ವಾರ್ತಾ ಮತ್ತು ಪ್ರಸಾರ ಸಚಿವೆ ಅಂಬಿಕಾ ಸೋನಿ ಖಂಡಿಸಿದ್ದಾರೆ.  ಡೇ ತಮ್ಮ ಜೀವಕ್ಕೆ ಬೆದರಿಕೆ ಇರುವ ಬಗ್ಗೆ ಯಾವ ಅಧಿಕಾರಿಗಳಿಗೆ ಏನನ್ನೂ ತಿಳಿಸಿರಲಿಲ್ಲ. ಹತ್ಯೆ ಬಗ್ಗೆ ತಕ್ಷಣವೇ ಆತುರದಲ್ಲಿ ಯಾವುದೇ ಅಂತಿಮ ನಿರ್ಧಾರ ಸರಿಯಲ್ಲ ಎಂದು ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಹೇಳಿದ್ದಾರೆ.

ಕಂಬನಿ ಮಿಡಿದ ಪತ್ರಕರ್ತರು: ಡೇ ಅವರ ನಿಧನಕ್ಕೆ ಕಂಬನಿ ಮಿಡಿದಿರುವ ಭಾರತೀಯ ಸಂಪಾದಕರ ಒಕ್ಕೂಟ, ಹಂತಕರನ್ನು ಕಠಿಣ ಶಿಕ್ಷೆಗೆ ಒಳಪಡಿಸಲು ಮಹಾರಾಷ್ಟ್ರ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದೆ.
 
ಡೇ ಅವರ ಹತ್ಯೆಗೆ ಪೊಲೀಸ್ ನಿರ್ಲಕ್ಷ್ಯವೇ ಕಾರಣ. ಪೊಲೀಸ್ ಹಾಗೂ ಭೂಗತ ಜಗತ್ತಿನ ನಂಟು ಬಹಿರಂಗಗೊಳಿಸುತ್ತಿದ್ದ ಅವರ ವೃತ್ತಿಪರತೆಯನ್ನು ಸಹಿಸಲಾಗದವರು ಈ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಮುಂಬೈ ಪತ್ರಕರ್ತರ ಸಂಘಟನೆಗಳು ದೂರಿವೆ. 

ದಿಟ್ಟ ಪತ್ರಕರ್ತನ ಹತ್ಯೆಗೆ ಸಂತಾಪ ಸೂಚಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಇದು ತೋರಿಸಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.