ನವದೆಹಲಿ (ಪಿಟಿಐ): `ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ಹೋರಾಡುತ್ತಿರುವ ನನ್ನನ್ನು ಯಾರಾದರು ತಡೆಯಲು ಪ್ರಯತ್ನಿಸಿದರೆ ಕಾಂಗ್ರೆಸ್ ತ್ಯಜಿಸುತ್ತೇನೆ' ಎಂದು ಕೇಂದ್ರ ಉಕ್ಕು ಖಾತೆ ಸಚಿವ ಬೇಣಿ ಪ್ರಸಾದ್ ವರ್ಮಾ ಬೆದರಿಕೆ ಹಾಕಿದ್ದಾರೆ.
ಮುಲಾಯಂ ಯಾದವ್ ವಿರುದ್ಧ ಕೆಟ್ಟ ಭಾಷೆ ಬಳಸಿದ್ದ ಬೇಣಿ ಅವರಿಗೆ ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ಮಧುಸೂದನ್ ಮಿಸ್ತ್ರಿ ಅವರು ಬುಧವಾರ ಛೀಮಾರಿ ಹಾಕಿದ ಬೆನ್ನಲ್ಲೇ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
`ನನ್ನ ಹೇಳಿಕೆ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡ ನಂತರ ಪ್ರತಿಕೃತಿ ದಹಿಸಲಾಗಿದೆ. ಇದರಿಂದ ನಾನು ತೀವ್ರ ಅವಮಾನಕ್ಕೆ ಒಳಗಾಗಿದ್ದೇನೆ. ಶೀಘ್ರವೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಈ ಕುರಿತು ಚರ್ಚಿಸುವೆ' ಎಂದು ಬೇಣಿ ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
`ಕುರ್ಚಿ ಅಥವಾ ಸಚಿವ ಸ್ಥಾನಕ್ಕಾಗಿ ನಾನು ರಾಜಕೀಯದಲ್ಲಿ ಇಲ್ಲ. ನಾನು ಮೌಲ್ಯಗಳನ್ನು ನಂಬಿದ್ದೇನೆ. ನಾನು ಯಾವುದೇ ವೇಳೆ ಕಾಂಗ್ರೆಸ್ ತೊರೆಯಬಹುದು ಅಥವಾ ಆ ಪಕ್ಷವೇ ನನ್ನನ್ನು ಹೊರಹಾಕಬಹುದು. ಮುಲಾಯಂ ವಿರುದ್ಧ ಹೋರಾಡುತ್ತಿರುವ ನನ್ನನ್ನು ತಡೆದರೆ ರಾಜೀನಾಮೆ ನೀಡುತ್ತೇನೆ' ಎಂದು ಹೇಳಿದ್ದಾರೆ.
`ಪ್ರಧಾನಿಯಾಗುವ ಮಹದಾಸೆ ಹೊಂದಿರುವ ಮುಲಾಯಂ ಸಿಂಗ್ ಯಾದವ್ ಅವರು ಮೊದಲು ಪ್ರಧಾನಿ ಕಚೇರಿಯಲ್ಲಿ ಕಸ ಗುಡಿಸುವವನ ಕೆಲಸಕ್ಕೆ ಪ್ರಯತ್ನಿಸಬೇಕು' ಎಂದು ಬೇಣಿ ಈಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.