ADVERTISEMENT

ಮೂರನೇ ದಿನವೂ ಪ್ರತಿಭಟನೆಗೆ ಕಲಾಪ ಬಲಿ

ಪಿಟಿಐ
Published 7 ಮಾರ್ಚ್ 2018, 19:30 IST
Last Updated 7 ಮಾರ್ಚ್ 2018, 19:30 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ನವದೆಹಲಿ: ಬ್ಯಾಂಕ್ ವಂಚನೆ ಮತ್ತು ದೇಶದ ಹಲವೆಡೆ ಪ್ರತಿಮೆಗಳ ಧ್ವಂಸ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಜತೆಗೆ ಎನ್‌ಡಿಎಯ ಕೆಲವು ಮಿತ್ರ ಪಕ್ಷಗಳೂ ಪ್ರತಿಭಟನೆ ನಡೆಸಿದ ಕಾರಣ ಎರಡೂ ಸದನಗಳಲ್ಲಿ ಸತತ ಮೂರನೇ ದಿನವೂ ಕಲಾಪ ನಡೆಯಲಿಲ್ಲ.

ಸುಮಾರು ₹ 13,000 ಕೋಟಿ ಮೊತ್ತದ ಬ್ಯಾಂಕ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದು ಕಾಂಗ್ರೆಸ್ ಸದಸ್ಯರು ಲೋಕಸಭೆಯಲ್ಲಿ ಪಟ್ಟುಹಿಡಿದರು. ವೆಲ್ಲೂರಿನಲ್ಲಿ ಪೆರಿಯಾರ್ ಪ್ರತಿಮೆಯನ್ನು ಧ್ವಂಸ ಮಾಡಿದ್ದರ ವಿರುದ್ಧ ಸದನದಲ್ಲಿ ಎಐಎಡಿಎಂಕೆ ಮತ್ತು ಎಎಪಿ ಸದಸ್ಯರು ಪ್ರತಿಭಟನೆ ನಡೆಸಿದರು.

ತೆಲಂಗಾಣದಲ್ಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಟಿಆರ್‌ಎಸ್ ಸದಸ್ಯರು ಪ್ರತಿಭಟನೆ ನಡೆಸಿದರೆ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ನೀಡಬೇಕು ಎಂದು ಟಿಡಿಪಿ ಸಂಸದರು ಒತ್ತಾಯಿಸಿದರು. ಮರಾಠಿಗೆ ಶಾಸ್ತ್ರೀಯ ಭಾಷಾ ಸ್ಥಾನ ನೀಡಬೇಕು ಎಂದು ಶಿವಸೇನಾ ಸಂಸದರು ಆಗ್ರಹಿಸಿದರು. ಎಲ್ಲರ ಪ್ರತಿಭಟನೆ ಜೋರಾದ ಕಾರಣ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.

ADVERTISEMENT

ಮಧ್ಯಾಹ್ನ ಶಿವಸೇನಾದ ಮನವಿಯನ್ನು ಆಲಿಸಿದ ಗೃಹ ಸಚಿವ ರಾಜನಾಥ್ ಸಿಂಗ್, ‘ಸಂಬಂಧಿತ ಸಚಿವರ ಜತೆ ಈ ಬಗ್ಗೆ ಮಾತನಾಡುತ್ತೇನೆ’ ಎಂದು ಭರವಸೆ ನೀಡಿದರು. ಆಗ ಶಿವಸೇನಾ ಸದಸ್ಯರು ಪ್ರತಿಭಟನೆ ಹಿಂಪಡೆದರು. ಆದರೆ ಎಐಎಡಿಎಂಕೆ ಮತ್ತು ಎಎಪಿ ಸದಸ್ಯರ ಪ್ರತಿಭಟನೆ ಮುಂದುವರಿಯಿತು. ಪರಿಸ್ಥಿತಿ ತಿಳಿಯಾಗದ ಕಾರಣ ಕಲಾಪವನ್ನು ದಿನದಮಟ್ಟಿಗೆ ಮುಂದೂಡಲಾಯಿತು.

ರಾಜ್ಯಸಭೆಯಲ್ಲಿ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಮತ್ತು ಎಐಎಡಿಎಂಕೆ ಸದಸ್ಯರು ಪೆರಿಯಾರ್ ಪ್ರತಿಮೆ ಧ್ವಂಸದ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಪ್ರತಿಮೆಗಳ ಧ್ವಂಸವನ್ನು ಸಭಾಪತಿ ಎಂ.ವೆಂಕಯ್ಯ ನಾಯ್ಡು ಸಹ ಖಂಡಿಸಿದರು. ಆಗಲೂ ಪ್ರತಿಭಟನೆ ನಿಲ್ಲದ ಕಾರಣ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು. ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಭಟನೆ ಮುಂದುವರಿಯಿತು. ಹೀಗಾಗಿ ಕಲಾಪವನ್ನು ದಿನದಮಟ್ಟಿಗೆ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.