ADVERTISEMENT

ಮೇಜರ್‌ ಗೊಗೋಯಿ ವಿರುದ್ಧ ತನಿಖೆಗೆ ಸೇನೆ ಆದೇಶ

ಜತೆಗಿದ್ದ ಯುವತಿ ಬಗ್ಗೆ ಸಂದೇಹ: ಕೊಠಡಿ ನಿರಾಕರಿಸಿದ್ದಕ್ಕೆ ಗಲಾಟೆ

ಪಿಟಿಐ
Published 25 ಮೇ 2018, 19:30 IST
Last Updated 25 ಮೇ 2018, 19:30 IST
ಮೇಜರ್‌ ನಿತಿನ್‌
ಮೇಜರ್‌ ನಿತಿನ್‌   

ಶ್ರೀನಗರ: ಯುವತಿಯೊಬ್ಬಳ ಜತೆ ವಸತಿಗೃಹವೊಂದಕ್ಕೆ ತೆರಳಿದಾಗ ಕೊಠಡಿ ನಿರಾಕರಿಸಿದ ಸಿಬ್ಬಂದಿ ಜತೆ ಗಲಾಟೆ ಮಾಡಿಕೊಂಡಿದ್ದ ಮೇಜರ್‌ ನಿತಿನ್‌ ಲಿಟುಲ್‌ ಗೊಗೋಯಿ ವಿರುದ್ಧ ಭಾರತೀಯ ಸೇನೆ ಶುಕ್ರವಾರ ತನಿಖೆಗೆ ಆದೇಶಿಸಿದೆ.

ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಈಗಾಗಲೇ ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.

ADVERTISEMENT

ಇದಕ್ಕೂ ಮೊದಲು ಪಹಲ್ಗಾಮ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭೂಸೇನೆಯ ಮುಖ್ಯಸ್ಥ ಬಿಪಿನ್‌ ರಾವತ್, ‘ಮೇಜರ್‌ ಗೊಗೋಯಿ ವಿರುದ್ಧದ ಆರೋಪ ಸಾಬೀತಾದರೆ ಕಠಿಣ ಶಿಕ್ಷೆ ವಿಧಿಸಲಾಗುವುದು’ ಎಂದು ಭರವಸೆ ನೀಡಿದ್ದರು.

ಕಳೆದ ವರ್ಷ ಕಾಶ್ಮೀರ ಕಣಿವೆಯಲ್ಲಿ ಫಾರೂಕ್‌ ಅಹ್ಮದ್‌ ಧರ್‌ ಎಂಬ ಸ್ಥಳೀಯ ವ್ಯಕ್ತಿಯನ್ನು ಸೇನೆಯ ಜೀಪ್‌ ಬಾನೆಟ್‌ಗೆ ಕಟ್ಟಿಹಾಕಿ ‘ಮಾನವ ಗುರಾಣಿ’ಯಂತೆ ಬಳಸಿದ್ದ ಪ್ರಕರಣದಲ್ಲಿ ಗೊಗೋಯಿ ಭಾರಿ ಸುದ್ದಿಯಾಗಿದ್ದರು.

ಏನಿದು ಗಲಾಟೆ?: ಆನ್‌ಲೈನ್‌ ಮೂಲಕ ಶ್ರೀನಗರದ ವಸತಿಗೃಹವೊಂದರಲ್ಲಿ ಕೊಠಡಿ ಕಾಯ್ದಿರಿಸಿದ್ದ ಮೇಜರ್‌ ಗೊಗೋಯಿ ಇದೇ ಬುಧವಾರ ತಮ್ಮ ವಾಹನ ಚಾಲಕ ಮತ್ತು ಬದ್ಗಾಮ್‌ ಗ್ರಾಮದ ಯುವತಿಯೊಬ್ಬಳ ಜತೆ ವಸತಿಗೃಹಕ್ಕೆ ತೆರಳಿದ್ದರು.

ಯುವತಿಯ ಬಗ್ಗೆ ಸಂದೇಹಗೊಂಡ ಹೋಟೆಲ್ ಸಿಬ್ಬಂದಿ ಆಕೆಯ ದಾಖಲೆ ಕೇಳಿದ್ದರು. ಸೂಕ್ತ ದಾಖಲೆ ಮತ್ತು ಮಾಹಿತಿ ನೀಡದ ಕಾರಣ ಕೊಠಡಿ ನೀಡಲು ನಿರಾಕರಿಸಿದ್ದರು. ಇದರಿಂದ ಸಿಟ್ಟಿಗೆದ್ದ ಗೊಗೋಯಿ, ಹೋಟೆಲ್‌ ಸಿಬ್ಬಂದಿ ಜತೆ ಜಗಳ ತೆಗೆದಿದ್ದರು.

ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಹೋಟೆಲ್‌ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದರು. ಗೊಗೋಯಿ, ಅವರ ವಾಹನ ಚಾಲಕ ಮತ್ತು ಯುವತಿಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದಿದ್ದರು.

ಬಳಿಕ ಘಟನೆಯನ್ನು ಸೇನೆಯ ಗಮನಕ್ಕೆ ತಂದಿದ್ದ ಪೊಲೀಸರು, ಗೊಗೋಯಿ ಅವರನ್ನು ಸೇನೆಯ ವಶಕ್ಕೆ ಒಪ್ಪಿಸಿದ್ದರು.

**

ಯುವತಿ ಕುಟುಂಬಕ್ಕೆ ಆರ್ಥಿಕ ನೆರವು

ವಸತಿಗೃಹದಲ್ಲಿ ಮೇಜರ್‌ ನಿತಿನ್‌ ಲೀಟುಲ್‌ ಗೊಗೋಯಿ ಜತೆ ಪೊಲೀಸರು ಬಂಧಿಸಿದ ಯುವತಿಯ ಕುಟುಂಬಕ್ಕೆ ನ್ಯಾಶನಲ್‌ ಕಾನ್ಫರೆನ್ಸ್‌ (ಎನ್‌ಸಿ) ನಾಯಕ ಒಮರ್‌ ಅಬ್ದುಲ್ಲಾ ₹1.30 ಲಕ್ಷ ಆರ್ಥಿಕ ನೆರವು ನೀಡಿದ್ದಾರೆ.

ಬದ್ಗಾಮ್‌ನಲ್ಲಿ ವಾಸಿಸುತ್ತಿರುವ ಯುವತಿಯ ಕುಟುಂಬಸ್ಥರು ಕಡು ಬಡವರಾಗಿದ್ದು ತಗಡಿನ ಶೆಡ್‌ವೊಂದರಲ್ಲಿ ವಾಸಿಸುತ್ತಿದ್ದಾರೆ. ಹಾಗಾಗಿ ಮನೆ ಕಟ್ಟಿಕೊಳ್ಳಲು ಒಮರ್‌ ತಮ್ಮ ಶಾಸಕರ ಅನುದಾನದಿಂದ ಹಣಕಾಸಿನ ನೆರವು ಒದಗಿಸಿದ್ದಾರೆ ಎಂದು ಅವರ ಕಾರ್ಯದರ್ಶಿ ಟ್ವೀಟ್‌ ಮಾಡಿದ್ದಾರೆ.

ಯುವತಿ ವಾಸಿಸುತ್ತಿರುವ ಬೀರ್ವಾ ವಿಧಾನಸಭಾ ಕ್ಷೇತ್ರವನ್ನು ಒಮರ್‌ ಅಬ್ದುಲ್ಲಾ ಪ್ರತಿನಿಧಿಸುತ್ತಿದ್ದಾರೆ.

**

ಭಾರತೀಯ ಸೇನೆಯ ಯಾವುದೇ ಅಧಿಕಾರಿ ತಪ್ಪು ಮಾಡಿದರೂ ಕಠಿಣ ಶಿಕ್ಷೆ ನೀಡಲಾಗುವುದು. ಈ ಬಗ್ಗೆ ಸಂಶಯ ಬೇಡ.

ಬಿಪಿನ್‌ ರಾವತ್‌, ಭೂಸೇನೆಯ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.