ADVERTISEMENT

ಯುವಕರ ಮೇಲೆ ಹತ್ತಿದ ಸಿಆರ್‌ಪಿಎಫ್ ವಾಹನ: ಶ್ರೀನಗರ ಮತ್ತೆ ಉದ್ವಿಗ್ನ

ಪಿಟಿಐ
Published 2 ಜೂನ್ 2018, 19:30 IST
Last Updated 2 ಜೂನ್ 2018, 19:30 IST
ಸಿಆರ್‌ಪಿಎಫ್‌ ಜಿಪ್ಸಿಯ ಮೇಲೆ ಮುಗಿಬಿದ್ದಿರುವ ಮುಸುಕುಧಾರಿ ಪ್ರತಿಭಟನಾಕಾರರು. ಜಿಪ್ಸಿಯ ಕೆಳಗೆ ಇಬ್ಬರು ಸಿಲುಕಿಕೊಂಡಿರುವುದೂ ಚಿತ್ರದಲ್ಲಿ ಕಾಣುತ್ತಿದೆ. ಹುರಿಯತ್ ಕಾನ್ಫರೆನ್ಸ್‌ನ ಅವಾಮಿ ಆಕ್ಷ್ಯನ್ ಕಮಿಟಿಯ ಅಧ್ಯಕ್ಷ ಮಿರ್ವೇಜ್ ಉಮರ್ ಫಾರೂಕ್ ತಮ್ಮ ಟ್ವಿಟರ್ ಮತ್ತು ಫೇಸ್‌ಬುಕ್ ಖಾತೆಗಳಲ್ಲಿ ಈ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ
ಸಿಆರ್‌ಪಿಎಫ್‌ ಜಿಪ್ಸಿಯ ಮೇಲೆ ಮುಗಿಬಿದ್ದಿರುವ ಮುಸುಕುಧಾರಿ ಪ್ರತಿಭಟನಾಕಾರರು. ಜಿಪ್ಸಿಯ ಕೆಳಗೆ ಇಬ್ಬರು ಸಿಲುಕಿಕೊಂಡಿರುವುದೂ ಚಿತ್ರದಲ್ಲಿ ಕಾಣುತ್ತಿದೆ. ಹುರಿಯತ್ ಕಾನ್ಫರೆನ್ಸ್‌ನ ಅವಾಮಿ ಆಕ್ಷ್ಯನ್ ಕಮಿಟಿಯ ಅಧ್ಯಕ್ಷ ಮಿರ್ವೇಜ್ ಉಮರ್ ಫಾರೂಕ್ ತಮ್ಮ ಟ್ವಿಟರ್ ಮತ್ತು ಫೇಸ್‌ಬುಕ್ ಖಾತೆಗಳಲ್ಲಿ ಈ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ನೌಹಟ್ಟಾ ಪ್ರದೇಶದಲ್ಲಿ ಶುಕ್ರವಾರ ನಡೆದ ಘರ್ಷಣೆ ಸಂಬಂಧ ಪೊಲೀಸರು, ಕಲ್ಲು ತೂರಾಟಗಾರರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಶುಕ್ರವಾರ ನೌಹಟ್ಟಾದ ಜಾಮಿಯಾ ಮಸೀದಿ ಸಮೀಪದ ರಸ್ತೆಯಲ್ಲಿ ಮುಸುಕುಧಾರಿ ಯುವಕರು ಪ್ರತಿಭಟನೆ ನಡೆಸುತ್ತಿದ್ದರು. ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ಸಿಆರ್‌ಪಿಎಫ್‌ನ ವಾಹನದ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಲು ಆರಂಭಿಸಿದರು.

ಅಲ್ಲಿಂದ ತಪ್ಪಿಸಿಕೊಳ್ಳುವ ಭರದಲ್ಲಿ ವೇಗವಾಗಿ ತೆರಳಿದ ವಾಹನದ ಕೆಳೆಗೆ ಇಬ್ಬರು ಪ್ರತಿಭಟನಾಕಾರರು ಸಿಲುಕಿದ್ದರು.ತೀವ್ರ ಗಾಯಗಳಾಗಿದ್ದ ಆ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಕೈಸರ್ ಭಟ್ ಎಂಬಾತ್ ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದಾನೆ.

ADVERTISEMENT

‘ವಾಹನ ನಿಲ್ಲಿಸಿದ್ದರೆ ಸಾಯಬೇಕಿತ್ತು’: ‘ನೂರಾರು ಯುವಕರು ನಮ್ಮತ್ತ ಒಮ್ಮೆಲೇ ಕಲ್ಲು ತೂರಲು ಆರಂಭಿಸಿದ್ದರು. ಒಂದೊಮ್ಮೆ ವಾಹನ ಅಲ್ಲೇ ನಿಂತಿದ್ದರೆ ಅವರಿಂದ ಒದೆ ತಿಂದು ಸಾಯಬೇಕಿತ್ತು’ ಎಂದು ಸಿಆರ್‌ಪಿಎಫ್‌ನ ಹಿರಿಯ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡಿದ್ದಾರೆ.

ಮೆರವಣಿಗೆ,ಪ್ರತಿಭಟನೆ: ಕೈಸರ್‌ನ ಅಂತ್ಯಸಂಸ್ಕಾರಕ್ಕೂ ಮುನ್ನ ಮೃತನ ಶವವನ್ನು ಸ್ಥಳೀಯರು ನೌಹಟ್ಟಾದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

ಮೆರವಣಿಗೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು. ಪ್ರತ್ಯೇಕತಾವಾದಿ ಹುರಿಯತ್ ಮುಖಂಡರು ಮುಷ್ಕರಕ್ಕೆ ಕರೆ ನೀಡಿದ್ದರು. ಹೀಗಾಗಿ ಶ್ರೀನಗರದ ಹಲವೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

ಕೊನೆಯ ದಿನಗಳಲ್ಲಿ ಭಯೋತ್ಪಾದನೆ

ಜಮ್ಮು: ‘ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯು ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

‘ಅಧಿಕಾರಕ್ಕೆ ಬಂದ ದಿನದಿಂದ ಈವರೆಗೆ 600 ಉಗ್ರರನ್ನು ಕೊಂದಿದ್ದೇವೆ. ಯುಪಿಎ–1 ಮತ್ತು ಯುಪಿಎ–2ರ ಅವಧಿಯಲ್ಲಿ ಹತರಾದ ಉಗ್ರರಿಗಿಂತ ಹೆಚ್ಚು ಉಗ್ರರನ್ನು ನಾವು ಕಡಿಮೆ ಅವಧಿಯಲ್ಲಿ ಕೊಂದಿದ್ದೇವೆ’ ಎಂದು ಅವರು ಹೇಳಿದ್ದಾರೆ.

ವಿಡಿಯೋ,ಚಿತ್ರ ವೈರಲ್

ಸಿಆರ್‌ಪಿಎಫ್ ಜಿಪ್ಸಿಯ ಮೇಲೆ ಯುವಕರು ಕಲ್ಲು ತೂರುವ ಮತ್ತು ಅಲ್ಲಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಜಿಪ್ಸಿಯನ್ನು ವೇಗವಾಗಿ ಚಲಾಯಿಸಿಕೊಂಡು ಹೋಗುವ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರತ್ಯೇಕತಾವಾದಿ ಸಂಘಟನೆ ಆಲ್‌ ಪಾರ್ಟಿ ಹುರಿಯತ್ ಕಾನ್ಫರೆನ್ಸ್‌ನ ಅವಾಮಿ ಆ್ಯಕ್ಷನ್ ಕಮಿಟಿ ಅಧ್ಯಕ್ಷ ಮಿರ್ವೇಜ್ ಉಮರ್ ಫಾರೂಕ್ ಆ ವಿಡಿಯೊ ಮತ್ತು ಚಿತ್ರಗಳನ್ನು ತಮ್ಮ ಫೇಸ್‌ಬುಕ್ ಮತ್ತು ಟ್ವಿಟರ್‌ ಖಾತೆಗಳಲ್ಲಿ ಪ್ರಕಟಿಸಿದ್ದಾರೆ.

ಇನ್ನೂ ಹಲವರು ಅದೇ ಘಟನೆಯ ಬೇರೆ–ಬೇರೆ ಕೋನದ ದೃಶ್ಯಾವಳಿ ಮತ್ತು ಚಿತ್ರಗಳನ್ನು ಟ್ವಿಟರ್‌ಗಳಲ್ಲಿ ಪ್ರಕಟಿಸಿದ್ದಾರೆ. ಸಾವಿರಾರು ಮಂದಿ ಆ ಟ್ವೀಟ್‌ಗಳನ್ನು ಮರುಟ್ವೀಟ್‌ ಮಾಡಿ, ಹಂಚಿಕೊಂಡಿದ್ದಾರೆ.

ಪ್ರತಿಭಟನಾಕಾರರು ಸಿಆರ್‌ಪಿಎಫ್ ಸಿಬ್ಬಂದಿಯ ವಾಹನದ ಮೇಲೆ ಕಲ್ಲು ತೂರಿದ್ದನ್ನು ಖಂಡಿಸಿ ಹಲವರು ಟ್ವೀಟ್ ಮಾಡಿದರೆ, ಯುವಕರ ಮೇಲೆ ವಾಹನ ಹತ್ತಿಸಿದ್ದನ್ನೂ ಖಂಡಿಸಿ ಮತ್ತೂ ಹಲವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.