ADVERTISEMENT

ರಾಜೀವ್ ಗಾಂಧಿ ಹಂತಕರ ಮೇಲ್ಮನವಿ: ಪ್ರಕರಣ ವರ್ಗಾವಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರು ತಮಗೆ ವಿಧಿಸಿರುವ ಮರಣ ದಂಡನೆ ಶಿಕ್ಷೆಯನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ಗೆ ಸಲ್ಲಿಸಿದ ಮೇಲ್ಮನವಿ ವಿಚಾರಣೆಯನ್ನು ಸುಪ್ರೀಂಕೋರ್ಟ್‌ಗೆ ವರ್ಗಾಯಿಸಬೇಕೆನ್ನುವ ಕೋರಿಕೆಗೆ ತಮಿಳುನಾಡು ಸರ್ಕಾರ ಸೋಮವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ವಿರೋಧ ವ್ಯಕ್ತಪಡಿಸಿದೆ.

ಈ ಅರ್ಜಿ ವಿಚಾರಣೆಗೆ ಸಂಬಂಧಿಸಿದ ಪ್ರಕರಣವನ್ನು ಹೈಕೋರ್ಟ್‌ನಿಂದ ಸುಪ್ರೀಂಕೋರ್ಟ್‌ಗೆ ವರ್ಗಾಯಿಸಬೇಕೆಂದು ಕೋರಿ ಎಲ್.ಕೆ.ವೆಂಕಟ್ ಎಂಬುವವರು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ವಿಚಾರಣೆ ನಡೆಸುವುದಕ್ಕೆ ರಾಜ್ಯದಲ್ಲಿ ಅನುಕೂಲಕರ ವಾತಾವರಣವಿಲ್ಲ ಎಂದು ಅವರು ಹೇಳಿದ್ದರು.

ಆದರೆ ಈ ಕೋರಿಕೆಗೆ ವಿರೋಧ ವ್ಯಕ್ತಪಡಿಸಿದ ತಮಿಳುನಾಡು ಹೆಚ್ಚುವರಿ ಅಡ್ವೊಕೇಟ್ ಜನರಲ್ ಗುರುಕೃಷ್ಣ ಕುಮಾರ್, ವೆಂಕಟ್ ಅವರ ಅರ್ಜಿಯ ಕಾನೂನುಬದ್ಧತೆಯನ್ನು ಪ್ರಶ್ನಿಸಿದರು.

ರಾಜೀವ್ ಹಂತಕರ ಪರವಾಗಿ ಕೋರ್ಟ್‌ಗೆ ಹಾಜರಿದ್ದ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಕೂಡ ಪ್ರಕರಣದ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದರು. ಸಂವಿಧಾನದ 139ಎ ವಿಧಿ ಪ್ರಕಾರ ಇಂಥ ಅರ್ಜಿಗಳನ್ನು ಕೇವಲ ಅಟಾರ್ನಿ ಜನರಲ್ ಅಥವಾ ಅನ್ಯಾಯಕ್ಕೆ ಒಳಪಟ್ಟವರು ಮಾತ್ರವೇ ಸಲ್ಲಿಸಬಹುದು, ವೆಂಕಟ್ ಅವರು ಸಲ್ಲಿಸಿದ ಅರ್ಜಿ ನ್ಯಾಯಸಮ್ಮತವಾಗಿಲ್ಲ ಎಂದು ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT