ADVERTISEMENT

ರಾಜ್ಯಗಳ ಹೊರೆ ಭರಿಸಲಿರುವ ಕೇಂದ್ರ

ಬಿಸಿಯೂಟಕ್ಕೆ ಎಲ್‌ಪಿಜಿ ಪೂರೈಕೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 19:50 IST
Last Updated 12 ಡಿಸೆಂಬರ್ 2012, 19:50 IST

ನವದೆಹಲಿ (ಪಿಟಿಐ): ಶಾಲೆಗಳ ಬಿಸಿಯೂಟ ಯೋಜನೆಗೆ ಸಬ್ಸಿಡಿ ಸಿಲಿಂಡರ್‌ಗಳ ಪೂರೈಕೆ ಸ್ಥಗಿತಗೊಳಿಸಿರುವುದರಿಂದ ರಾಜ್ಯಗಳಿಗೆ ಬೀಳುವ ವೆಚ್ಚದ ಹೊರೆಯನ್ನು ತಾನು ಭರಿಸುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಈಗ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ, ಬಿಸಿಯೂಟ ಬೇಯಿಸಲು ತಗುಲುವ ಶೇ 75ರಷ್ಟು ಹಣವನ್ನು ಕೇಂದ್ರ ನೀಡುತ್ತಿದೆ. ಇಂಧನ ವೆಚ್ಚವನ್ನು (ಸಿಲಿಂಡರ್, ಸೀಮೆಎಣ್ಣೆ ಇತ್ಯಾದಿ) ಅಡುಗೆ ಬೇಯಿಸಲು ತಗುಲುವ ಖರ್ಚಿನ ಭಾಗವಾಗಿಯೇ ಪರಿಗಣಿಸಲಾಗುತ್ತಿದೆ ಎಂದು ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಶಶಿ ತರೂರ್ ಬುಧವಾರ ತಿಳಿಸಿದರು.

ಬಿಸಿಯೂಟ ಯೋಜನೆಯನ್ನು ನಿಲ್ಲಿಸದೇ ಮುಂದುವರಿಸಲು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾನವ ಸಂಪನ್ಮೂಲ ಸಚಿವಾಲಯ ಮನವಿ ಮಾಡಿದೆ ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದರು.

ರಾಷ್ಟ್ರದ ಶೇ 68ರಷ್ಟು ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲು ಎಲ್‌ಪಿಜಿ ಸಿಲಿಂಡರ್‌ಗೆ ಹೊರತಾದ ಇಂಧನ ಮೂಲಗಳನ್ನು ಬಳಸಲಾಗುತ್ತಿದೆ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.