ADVERTISEMENT

ರಾಜ್ಯಸಭೆ: `ಎಫ್‌ಡಿಐ' ಗೆಲುವಿಗಾಗಿ ಕಸರತ್ತು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 22:00 IST
Last Updated 6 ಡಿಸೆಂಬರ್ 2012, 22:00 IST

ನವದೆಹಲಿ (ಐಎಎನ್‌ಎಸ್):  ಬಹುಬ್ರಾಂಡ್ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ  (ಎಫ್‌ಡಿಐ) ಅವಕಾಶ ಮಾಡಿಕೊಡುವುದರ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ನಿಲುವಳಿ ಸೂಚನೆಯ ಮೇಲೆ ಶುಕ್ರವಾರ ರಾಜ್ಯಸಭೆಯಲ್ಲಿ ಮತದಾನ ನಡೆಯಲಿದೆ.
ಲೋಕಸಭೆಯ ಅನುಮೋದನೆ ಪಡೆದಿರುವ  ಕೇಂದ್ರ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಅಗತ್ಯ ಬಹುಮತ ಇಲ್ಲ.

ಇದರ ಅನುಮೋದನೆ ಪ್ರತಿಷ್ಠೆ ವಿಷಯವಾಗಿರುವುದರಿಂದ ಯುಪಿಎ ಕೊನೆ ಗಳಿಗೆಯವರೆಗೆ ಗೆಲುವಿಗಾಗಿ ಕಸರತ್ತು ನಡೆಸುತ್ತಿದೆ. 15 ಸಂಸದರ ಬಿಎಸ್‌ಪಿ ಈಗಾಗಲೇ ಸರ್ಕಾರಕ್ಕೆ ಬೆಂಬಲ ಸೂಚಿಸಿರುವುದರಿಂದ ಯುಪಿಎ ಕೊಂಚ ನಿರಾಳವಾಗಿದೆ. ಆದರೆ, ಸಮಾಜವಾದಿ ಪಕ್ಷ (ಎಸ್‌ಪಿ) ತೆಗೆದುಕೊಳ್ಳುವ ನಿರ್ಧಾರ ನಿರ್ಣಾಯಕ ಪಾತ್ರ ವಹಿಸಲಿದೆ. 

224 ಸದಸ್ಯರ ರಾಜ್ಯಸಭೆಯಲ್ಲಿ ಎಫ್‌ಡಿಐ ಅನುಮೋದನೆಗೆ 123 ಮತಗಳ ಅಗತ್ಯವಿದ್ದು, ಕಾಂಗ್ರೆಸ್ ಸಂಖ್ಯಾಬಲ ಇದಕ್ಕಿಂತಲೂ ಕಡಿಮೆ. ಸರ್ಕಾರದ ನಿರ್ಧಾರಕ್ಕೆ ಅನುಮೋದನೆ ದೊರೆಯಬೇಕಾದರೆ ಎಸ್‌ಪಿ  9 ಸಂಸದರು ಹೊರ ನಡೆಯಬೇಕು ಅಥವಾ ಮತದಾನದಿಂದ ದೂರ ಉಳಿಯಬೇಕು. ಆಗ ರಾಜ್ಯಸಭೆಯಲ್ಲಿ ಹಾಜರಿರುವ ಸದಸ್ಯರ ಸಂಖ್ಯೆ 235ಕ್ಕೆ ಇಳಿಯಲಿದ್ದು, ಅಗತ್ಯ ಮತಗಳ ಸಂಖ್ಯೆ 123ರಿಂದ 118ಕ್ಕೆ ಇಳಿಯಲಿದೆ.

7 ಸ್ವತಂತ್ರ ಸಂಸದರು ಎಫ್‌ಡಿಐ ಬೆಂಬಲಿಸುವುದಾಗಿ ಭರವಸೆ ನೀಡಿರುವುದಾಗಿ ಕಾಂಗ್ರೆಸ್ ಹೇಳಿದೆ. ನಾಮನಿರ್ದೇಶಿತ ಸದಸ್ಯರ ಪೈಕಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ನಟಿ ರೇಖಾ ಮತ್ತು ಮುರುಳಿ ದೇವ್ರಾ ವೈಯಕ್ತಿಕ ಕಾರಣಗಳಿಂದ ಹಾಜರಿರುವುದಿಲ್ಲ. ಉಳಿದ ನಾಮನಿರ್ದೇಶಿತ ಸದಸ್ಯರು ಸರ್ಕಾರದ ಪರ ಮತ ಚಲಾಯಿಸಿದರೆ ಎಫ್‌ಡಿಐ ಪರ ಮತಗಳ ಸಂಖ್ಯೆ 121ಕ್ಕೆ ತಲುಪುತ್ತದೆ. 123 ಮ್ಯಾಜಿಕ್ ಸಂಖ್ಯೆ ತಲುಪಲು ಕೇವಲ 2 ಮತಗಳ ಕೊರತೆ ಎದುರಾಗುತ್ತದೆ. ಆ ಅಗತ್ಯ 2 ಮತಗಳನ್ನು ಪಡೆಯಲು ಕಾಂಗ್ರೆಸ್ ತಂತ್ರಗಳನ್ನು ರೂಪಿಸುತ್ತಿದೆ. ಸಮಾಜವಾದಿ ಪಕ್ಷ ಇನ್ನೂ ತನ್ನ ನಿಲುವು ಸ್ಪಷ್ಟಪಡಿಸಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.