ADVERTISEMENT

ರಾಜ್ಯಸಭೆ ಕಲಾಪ ಮುಂದೂಡಿಕೆ

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 19:59 IST
Last Updated 25 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಚರ್ಚೆಗೆ ಒತ್ತಾಯಿಸಿ ರಾಜ್ಯಸಭೆಯಲ್ಲಿ ಬಿಜೆಪಿ ಸೇರಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದ ಕೇವಲ 25 ನಿಮಿಷಗಳಲ್ಲಿ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾನೂನು ಸಚಿವ ಅಶ್ವನಿ ಕುಮಾರ್ ಅವರು ರಾಜೀನಾಮೆ ನೀಡಬೇಕೆಂಬ ಬಿಜೆಪಿ ಸದಸ್ಯರ ಒತ್ತಾಯದಿಂದಾಗಿ ಗುರುವಾರ ರಾಜ್ಯಸಭೆಯಲ್ಲಿ ಗದ್ದಲದ ವಾತಾವರಣ ಉಂಟಾಗಿ, ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

ರಾಜ್ಯಸಭೆಯಲ್ಲಿ ಗುರುವಾರ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಕುರಿತು ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಪ್ರಧಾನಿಯವರು ರಾಜೀನಾಮೆಗೆ ಒತ್ತಾಯಿಸಿದರು. ಕಾನೂನು ಸಚಿವರನ್ನು ವಜಾಗೊಳಿಸಬೇಕು ಎಂದು ಪಟ್ಟು  ಹಿಡಿದರು. ಗುಂಪು ಗುಂಪಾಗಿ ಸದನದ ಬಾವಿಗಿಳಿದುಪ್ರತಿಭಟನೆ ನಡೆಸಿದರು. ಹೀಗಾಗಿ ಕಲಾಪವನ್ನು ಮೂರು ಬಾರಿ ಮುಂದೂಡಲಾಯಿತು.

ಕಲಾಪವನ್ನು ಮುಂದೂಡಿದ್ದರಿಂದ ಮಹಿಳಾ ದೌರ್ಜನ್ಯ ತಡೆ ಕಾಯ್ದೆ ಕುರಿತು ಚರ್ಚೆ ನಡೆಯಲು ಸಾಧ್ಯವಾಗಲಿಲ್ಲ.  ಇದೇ ಸಮಯದಲ್ಲಿ ಎಡಪಕ್ಷ, ಸಮಾಜವಾದಿ ಪಕ್ಷ ಮತ್ತು ಅಸ್ಸಾಂ ಗಣಪರಿಷತ್ ಸದಸ್ಯರು ವಿವಿಧ ವಿಚಾರಗಳನ್ನು ಕೈಗೆತ್ತಿಕೊಂಡು ಸದನದಲ್ಲಿ ಪ್ರತಿಭಟನೆ ನಡೆಸಿದರು.

ಎಡಪಕ್ಷಗಳು, ಪಶ್ಚಿಮ ಬಂಗಾಳದಲ್ಲಿ ನಡೆದ ಬಹುಕೋಟಿ ಹಗರಣದ `ಚಿಟ್ ಫಂಡ್' ವಿರುದ್ಧ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದರು. `ಚಿಟ್‌ಫಂಡ್‌ನಲ್ಲಿ ಹಣ ತೊಡಗಿಸಿರುವವರು ಹಾಗೂ ಏಜೆಂಟ್‌ಗಳ ರಕ್ಷಣೆಗಾಗಿ ಈ ಪ್ರತಿಭಟನೆ' ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.