ADVERTISEMENT

ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ ಸ್ಥಾಪನೆ: ರಾಜ್ಯಗಳೊಡನೆ ಮಾತುಕತೆಗೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST

ಲಖನೌ (ಪಿಟಿಐ): ಉದ್ದೇಶಿತ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ (ಎನ್‌ಸಿಟಿಸಿ) ಸ್ಥಾಪನೆಯನ್ನು ವಿರೋಧಿಸುತ್ತಿರುವ ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆಗೆ ಸಿದ್ಧವಿರುವುದಾಗಿ ಹೇಳಿರುವ ಕೇಂದ್ರ, ರಾಜ್ಯ ಸರ್ಕಾರಗಳು ಆಕ್ಷೇಪಿಸುತ್ತಿರುವ ಅಂಶಗಳನ್ನು ಕೈಬಿಡುವುದಾಗಿ ಮಂಗಳವಾರ ತಿಳಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಂದ್ರ ದೂರ ಸಂಪರ್ಕ ಮತ್ತು ಮಾನವ ಸಂಪನ್ಮೂಲ ಇಲಾಖೆ ಸಚಿವ ಕಪಿಲ್ ಸಿಬಲ್, `ಎನ್‌ಸಿಟಿಸಿ ಕೇಂದ್ರ ಸಮಿತಿಯಲ್ಲಿ ಪ್ರತಿಯೊಂದು ರಾಜ್ಯಕ್ಕೂ ಪ್ರಾತಿನಿಧ್ಯ ಇರುತ್ತದೆ. ಆದಾಗ್ಯೂ, ರಾಜ್ಯಗಳು ಆಕ್ಷೇಪಿಸುವಂತ ಅಂಶಗಳ ಕುರಿತು ಮಾತುಕತೆ ನಡೆಸಲು ನಾವು ಸಿದ್ಧವಿದ್ದೇವೆ. ಅಗತ್ಯಬಿದ್ದರೆ ಅಂತಹವುಗಳನ್ನು ಕೈಬಿಡಲಾಗುವುದು~ ಎಂದರು.

ಎನ್‌ಸಿಟಿಸಿ ರಚನೆಯ ಅಗತ್ಯತೆ ಬಗ್ಗೆ ತಾರ್ಕಿಕ ಆಧಾರಗಳನ್ನು ನೀಡಿದ ಅವರು, `ಭಯೋತ್ಪಾದನೆಯನ್ನು ನಿಗ್ರಹಿಸುವ ಕುರಿತು ಕೇಂದ್ರ ಸರ್ಕಾರದ ಬಳಿ ಇರುವ ಅಧಿಕಾರವನ್ನು ಎನ್‌ಸಿಟಿಸಿಗೆ ವರ್ಗಾಯಿಸುವ ಉದ್ದೇಶ ಇದೆ. ಎನ್‌ಸಿಟಿಸಿಗೆ ಕೇಂದ್ರ ಸಮಿತಿ ಇದ್ದು, ಅದಕ್ಕೆ ಒಬ್ಬರು ನಿರ್ದೇಶಕರು, ಮೂವರು ಜಂಟಿ ನಿರ್ದೇಶಕರು ಹಾಗೂ ರಾಜ್ಯಗಳಲ್ಲಿ ಭಯೋತ್ಪಾದನೆ ನಿಗ್ರಹಕ್ಕಾಗಿ ರಚಿಸಲಾಗಿರುವ ಸಂಸ್ಥೆ/ಪಡೆಗಳ ಮುಖ್ಯಸ್ಥರು ಇರುತ್ತಾರೆ~ ಎಂದರು.

ADVERTISEMENT

ಎನ್‌ಸಿಟಿಸಿ ರಚನೆಗೆ 13 ರಾಜ್ಯಗಳು ವಿರೋಧ ವ್ಯಕ್ತಪಡಿಸಿ, ಇದರಿಂದ ರಾಜ್ಯ ಸರ್ಕಾರಗಳ ಅಧಿಕಾರ ಮೊಟಕುಗೊಳ್ಳುತ್ತದೆ ಎಂದು ಆಕ್ಷೇಪಿಸಿವೆ. ಇದರಲ್ಲಿ ಯುಪಿಎ ಅಂಗ ಪಕ್ಷವಾದ ಪಶ್ಚಿಮ ಬಂಗಾಳದಲ್ಲಿ ಆಡಳಿತದಲ್ಲಿರುವ ತೃಣಮೂಲ ಕಾಂಗ್ರೆಸ್ ಕೂಡ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.