ADVERTISEMENT

ರಾಹುಲ್ ವಿರುದ್ಧ ಎಫ್‌ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ಕಾನ್ಪುರ (ಪಿಟಿಐ):  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್‌ಗಾಂಧಿ ವಿರುದ್ದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಗಾಗಿ ಎಫ್‌ಐರ್ ದಾಖಲಿಸಲಾಗಿದೆ.

ರೋಡ್ ಶೋಗೆ  ನೀಡಿದ್ದ ಅನುಮತಿಯನ್ನು ಉಲ್ಲಂಘಿಸಿದ್ದಕ್ಕಾಗಿ ರಾಹುಲ್ ಮತ್ತು ಕಾನ್ಪುರ ಕಾಂಗ್ರೆಸ್ ಮುಖ್ಯಸ್ಥ ಮಹೇಶ್ ದೀಕ್ಷಿತ್ ವಿರುದ್ಧ ನಿಷೇಧಾಜ್ಞೆ ಉಲ್ಲಂಘನೆ, ಸಾರ್ವಜನಿಕ ಮಾರ್ಗದಲ್ಲಿ ಅಡೆತಡೆ ಮತ್ತು ಸಾರ್ವಜನಿಕರಿಗೆ ಕಿರಿಕಿರಿ ನೀಡಿದ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರಿಓಂ ಅವರು ತಿಳಿಸಿದ್ದಾರೆ.

ರೋಡ್ ಶೋ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಕಾನ್ಪುರದಲ್ಲಿ ಸೋಮವಾರ ನಡೆಸಿದ ರೋಡ್ ಶೋ ವಿವಾದದಲ್ಲಿ ಅಂತ್ಯ ಕಂಡಿದೆ.

ಶಿವರಾತ್ರಿ ವೇಳೆಯಾಗಿದ್ದರಿಂದ ಜಿಲ್ಲಾಧಿಕಾರಿ ವೇಳೆ ಹಾಗೂ ಪ್ರದೇಶದ ಮಿತಿ ಹಾಕಿದ್ದರು. ಆದರೆ ರಾಹುಲ್ ಈ ಮಿತಿ ಮೀರಿ ರೋಡ್ ಶೋ ನಡೆಸಿ ಚುನಾವಣಾ ನೀತಿ ಉಲ್ಲಂಘಿಸಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದು, ರಾಹುಲ್ ಗಾಂಧಿಯನ್ನೂ ಪ್ರಕರಣದಲ್ಲಿ ಆರೋಪಿಯನ್ನಾಗಿಸುವ ಸಾಧ್ಯತೆ ಇದೆ. ರೋಡ್ ಶೋ ಸಂದರ್ಭದಲ್ಲಿ ಕೆಲವು ಮುಸ್ಲಿಂ ಯುವಕರು ಕಪ್ಪು ಬಾವುಟ ತೋರಿಸಿದ್ದು ವಾಪಸ್ ಹೋಗುವಂತೆ ಘೋಷಣೆ ಕೂಗಿದ್ದಾರೆ ಎಂದೂ ಜಿಲ್ಲಾಧಿಕಾರಿ ಹರಿ ಓಂ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಚುನಾವಣಾ ನಿಯಮ ಉಲ್ಲಂಘಿಸಿಲ್ಲ ಎಂದಿರುವ ರಾಜ್ಯ ಕಾಂಗ್ರೆಸ್ ಮುಖ್ಯಸ್ಥೆ ರೀಟಾ ಬಹುಗುಣ ಜೋಶಿ, `ಮಾಯಾವತಿ ಸರ್ಕಾರದ ಆಣತಿ ಮೇರೆಗೆ ಜಿಲ್ಲಾಧಿಕಾರಿಗಳು ವರ್ತಿಸುತ್ತಿದ್ದಾರೆ~ ಎಂದು ಆರೋಪಿಸಿದ್ದಾರೆ.

 ಕಾನ್ಪುರ ಸಂಸದ ಶ್ರೀಪ್ರಕಾಶ್‌ಜಿಸ್ವಾಲ್, `ರಾಹುಲ್‌ಗೆ ಆಮಂತ್ರಣ ನೀಡಿದ್ದು ನಾನು. ಪ್ರಥಮ ಮಾಹಿತಿ ವರದಿ ದಾಖಲಿಸುವುದಾದರೆ ನನ್ನ ವಿರುದ್ಧ ದಾಖಲಿಸಿ~ ಎಂದು ಅಧಿಕಾರಿಗಳಿಗೆ ಸವಾಲು ಎಸೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.