ADVERTISEMENT

ರೂಪಾ ಗಂಗೂಲಿ ವಿರುದ್ಧ ಎಫ್ಐಆರ್‌

ಪಿಟಿಐ
Published 15 ಜುಲೈ 2017, 20:13 IST
Last Updated 15 ಜುಲೈ 2017, 20:13 IST
ರೂಪಾ ಗಂಗೂಲಿ ವಿರುದ್ಧ ಎಫ್ಐಆರ್‌
ರೂಪಾ ಗಂಗೂಲಿ ವಿರುದ್ಧ ಎಫ್ಐಆರ್‌   

ಕೋಲ್ಕತ್ತ : ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಸಭಾ ಸದಸ್ಯೆ ರೂಪಾ ಗಂಗೂಲಿ ಮತ್ತು ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಅಧ್ಯಕ್ಷ ದಿಲಿಪ್‌ ಘೋಷ್‌ ವಿರುದ್ಧ  ಎಫ್‌ಐಆರ್‌ ದಾಖಲಾಗಿದೆ.
‘ರಾಜ್ಯದಲ್ಲಿ ಯಾವ ಮಹಿಳೆಯರೂ ಅತ್ಯಾಚಾರಕ್ಕೆ ಒಳಗಾಗದೆ 15 ದಿನ ಸುರಕ್ಷಿತವಾಗಿರಲು ಸಾಧ್ಯವಿಲ್ಲ’ ಎಂದು ಗಂಗೂಲಿ ಹೇಳಿದ್ದರು.
ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಆಡಳಿತ ಟೀಕಿಸುವ ಭರದಲ್ಲಿ  ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಧರ್ಮ ನಿಂದನೆ:  ಕ್ರೈಸ್ತ ವ್ಯಕ್ತಿ ಬಂಧನ
ಲಾಹೋರ್‌ (ಪಿಟಿಐ): ಧರ್ಮನಿಂದನೆ ಮಾಡಿದ ಆರೋಪದ ಮೇಲೆ ಕ್ರೈಸ್ತ ವ್ಯಕ್ತಿಯೊಬ್ಬರನ್ನು ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಬಂಧಿಸಲಾಗಿದೆ. ಧಾರ್ಮಿಕ ಸಂಘಟನೆಗಳು ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕುವ ಸಾಧ್ಯತೆ ಇರುವ ಕಾರಣ ವ್ಯಕ್ತಿಯನ್ನು ಗೌಪ್ಯ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದೆ.
ಲಾಹೋರ್‌ನಿಂದ 200 ಕಿ.ಮೀ. ದೂರದಲ್ಲಿರುವ ಖಾರಿನಾ ಗುಜರಾತ್ ಎಂಬಲ್ಲಿ ಈ ಘಟನೆ ನಡೆದಿದೆ.

ನೆಲೆ ಸ್ಥಾಪನೆಗೆ ಅಲ್‌ಕೈದಾ ಯತ್ನ
ವಾಷಿಂಗ್ಟನ್‌ (ಪಿಟಿಐ): ಭಾರತ ಉಪಖಂಡದಲ್ಲಿ ಅಲ್‌ಕೈದಾ ತನ್ನ ನೆಲೆ ಸ್ಥಾಪಿಸಲು ಯತ್ನಿಸುತ್ತಿದೆ ಎಂದು ಅಮೆರಿಕದ ತಜ್ಞೆ ಕ್ಯಾಥೆರಿನ್‌ ಜಿಮ್ಮರ್‌ಮನ್‌ ಅವರು ಸಂಸದರಿಗೆ ತಿಳಿಸಿದ್ದಾರೆ.
ಭಯೋತ್ಪಾದನೆ ನಿಗ್ರಹ ಮತ್ತು ಬೇಹುಗಾರಿಕೆ ಕುರಿತು ಅಮೆರಿಕದ  ಆಂತರಿಕ ಭದ್ರತಾ ಉಪಸಮಿತಿಯ ಸದಸ್ಯರಿಗೆ ಶನಿವಾರ ಮಾಹಿತಿ ನೀಡಿದ ಅವರು, ಭಾರತದಲ್ಲಿ ಹೆಚ್ಚುತ್ತಿರುವ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಅಲ್‌ಕೈದಾ ಬೆಂಬಲ ಗಳಿಸಲು ನೆರವಾಗಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಮಘರೆಬ್‌ ಮತ್ತು ಸಹೇಲ್‌ನಲ್ಲಿ ಅಲ್‌ಕೈದಾ ಮರುಸ್ಥಾಪನೆಗೊಂಡಿದ್ದು, ಪಂಜಾಬ್‌ ಮೂಲಕ ಭಾರತ ಉಪಖಂಡದಲ್ಲಿ ನೆಲೆ ಸ್ಥಾಪಿಸುವ ಗುರಿ ಹೊಂದಿದೆ’ ಎಂದು ಹೇಳಿದ್ದಾರೆ.
‘ಅಲ್‌ಕೈದಾ ನಾಯಕತ್ವ ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಸಿರಿಯಾ, ಯೆಮನ್‌ನ ಆಚೆಗೂ ಕಾಣಬಹುದು’ ಎಂದು ತಿಳಿಸಿದ್ದಾರೆ.

ADVERTISEMENT

ಐಫಾ: ರೆಹಮಾನ್‌ ಗಾಯನ
ನ್ಯೂಯಾರ್ಕ್‌ (ಪಿಟಿಐ): ಐಫಾ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ನಡೆದ ಸಂಗೀತೋತ್ಸವದಲ್ಲಿ ಆಸ್ಕರ್‌ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್‌ ಅವರು ಹಿಂದಿ, ತಮಿಳಿನ ತಮ್ಮ ಪ್ರಸಿದ್ಧ ಗೀತೆಗಳನ್ನು ಹಾಡಿದರು.
ರೆಹಮಾನ್‌ ಅವರ ಸಂಗೀತಯಾನ  25 ವರ್ಷ ಪೂರ್ಣಗೊಂಡಿರುವುದರಿಂದ ಕಾರ್ಯಕ್ರಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಆಸ್ಕರ್‌ ವಿಜೇತ ಗೀತೆ ‘ಜೈ ಹೋ’ ಹಾಡು ಹೇಳುತ್ತಿದ್ದಂತೆ ವೇದಿಕೆ ಮೇಲೆ ಕೇಸರಿ, ಬಿಳಿ, ಹಸಿರು ಬಣ್ಣಗಳ ಚಿತ್ತಾರ ಮೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.