ADVERTISEMENT

ಲೀಟರ್‌ಗೆ ರೂ 2.50 ರಿಂದ 2.54 ಪೆಟ್ರೋಲ್‌ಬೆಲೆ ಏರಿಕೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 7:45 IST
Last Updated 16 ಜನವರಿ 2011, 7:45 IST

ನವದೆಹಲಿ (ಪಿಟಿಐ):  ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ರೂ 2.50ರಿಂದ 2.54 ರಷ್ಟು ಹೆಚ್ಚಿಸಿದ್ದು, ಈ ಏರಿಕೆ ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 92 ಡಾಲರ್‌ಗೆ ಏರಿದ ಹಿನ್ನೆಲೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿ ಪೆಟ್ರೋಲ್ ಬೆಲೆ ಹೆಚ್ಚಿಸಲಾಗಿದೆ.

ದೇಶದ ಬೃಹತ್ ಚಿಲ್ಲರೆ ಇಂಧನ ಮಾರಾಟ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಲೀಟರ್‌ಗೆ ರೂ 2.50, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ರೂ 2.54 ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ರೂ 2.53 ಏರಿಸಿವೆ. ಈ ಮೂರೂ ಕಂಪೆನಿಗಳು ಡಿಸೆಂಬರ್ 15-16ರಂದು ಲೀಟರ್ ಪೆಟ್ರೋಲ್ ಬೆಲೆಯನ್ನು 2.94- 2.96 ರೂಪಾಯಿಯಷ್ಟು ಏರಿಸಿದ್ದವು. ಇದು ಹಿಂದಿನ 6 ತಿಂಗಳಲ್ಲೇ ಅಧಿಕ ಬೆಲೆ ಹೆಚ್ಚಳವಾಗಿತ್ತು.

ದೆಹಲಿಯಲ್ಲಿ ಐಒಸಿ ಬಂಕ್‌ಗಳಲ್ಲಿ ಇದುವರೆಗೆ ರೂ 55.87 ಇದ್ದ ಪೆಟ್ರೋಲ್ ಬೆಲೆ ಇನ್ನು ಮುಂದೆ ರೂ 58.37 ಆಗಲಿದೆ. ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್‌ಗಳು 58.39 ರೂಪಾಯಿಗೆ ಮಾರಾಟ ಮಾಡಲಿವೆ. ಈವರೆಗೂ ಎಚ್‌ಪಿಸಿಎಲ್ 55.85 ಮತ್ತು ಬಿಪಿಸಿಎಲ್ 55.86 ರೂಪಾಯಿಗೆ ಪೆಟ್ರೋಲ್ ಮಾರಾಟ ಮಾಡುತ್ತಿದ್ದವು. ಮುಕ್ತ ಮಾರುಕಟ್ಟೆಯಲ್ಲಿ ‘ಬೆಲೆ ನಿಯಂತ್ರಣ ಕೂಟ’ ಕಟ್ಟಿಕೊಳ್ಳುವ ಆರೋಪದಿಂದ ತಪ್ಪಿಸಿಕೊಳ್ಳಲು ಕಂಪೆನಿಗಳು ಉದ್ದೇಶಪೂರ್ವಕ ಬೇರೆ ಬೇರೆ ಬೆಲೆ ನಿಗದಿ ಮಾಡಿವೆ.

ನಗರದಲ್ಲಿ ಪೆಟ್ರೋಲ್ ದರ
            
     ಪರಿಷ್ಕೃತ ದರ     ಹಳೆಯ ದರ     ಹೆಚ್ಚಳ
ಪೆಟ್ರೋಲ್   65.65               62.88         2.77

ಪ್ರಿಮಿಯಮ್ ಪೆಟ್ರೋಲ್          
                  68.35               65.60         2.75
 (ಪ್ರತಿ ಲೀಟರ್‌ಗೆ ದರ ರೂಪಾಯಿಗಳಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT