ADVERTISEMENT

ಲೆಕ್ಕಕ್ಕೆ ಸಿಗದ ಸಾವಿನ ಸಂಖ್ಯೆ

70,000 ನಿರಾಶ್ರಿತರು, ಆಹಾರ- ನೀರಿಗೆ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 19:45 IST
Last Updated 20 ಜೂನ್ 2013, 19:45 IST

ಡೆಹ್ರಾಡೂನ್/ಶಿಮ್ಲಾ/ನವದೆಹಲಿ (ಪಿಟಿಐ, ಐಎಎನ್‌ಎಸ್): `ಹಿಮಾಲಯ ಸುನಾಮಿ' ಎಂದೇ ಬಣ್ಣಿಸಲಾದ ಉತ್ತರಾಖಂಡದ ಮಹಾಮಳೆ ಪ್ರವಾಹದಲ್ಲಿ ಸಾವಿರಾರು ಮಂದಿ ಕೊಚ್ಚಿಕೊಂಡು ಹೋಗಿರುವ ಶಂಕೆ ಗುರುವಾರ ವ್ಯಕ್ತವಾಗಿದೆ.

ರಾಜ್ಯದ ವಿವಿಧೆಡೆ ಅತಂತ್ರ ಸ್ಥಿತಿಯಲ್ಲಿರುವ ಯಾತ್ರಿಗಳು ಮತ್ತು ಸ್ಥಳೀಯರು ಕುಡಿಯುವ ನೀರು ಆಹಾರ ಪೂರೈಕೆ,  ವಿದ್ಯುತ್ ಸರಬರಾಜು ಇಲ್ಲದೆ ಪರಿತಪಿಸುತ್ತಿದ್ದಾರೆ. ಪರಿಹಾರ ಕಾರ್ಯಾಚರಣೆ ಅಂಗವಾಗಿ ಪೂರೈಸಲಾಗುತ್ತಿರುವ ಆಹಾರ ಪೊಟ್ಟಣಗಳು ನೀರು ಪಾಲಾಗುತ್ತಿವೆ.

ಅಪಾರ ಸಂಖ್ಯೆಯಲ್ಲಿ ಮನೆ- ಕಟ್ಟಡಗಳು ನೆಲಸಮವಾಗಿದ್ದು, ಸಾವಿರಾರು ಜನರು ಕಣ್ಮರೆಯಾಗಿದ್ದಾರೆ. ಅಂದಾಜು 70 ಸಾವಿರ ಜನರು ಇನ್ನೂ ಅಸುರಕ್ಷಿತ ಸ್ಥಿತಿಯಲ್ಲೇ ಇದ್ದಾರೆ.  ಕುಟುಂಬದವರನ್ನು ಸಂಪರ್ಕಿಸಲಾಗದೆ  ಅಸಹಾಯಕತೆಯಿಂದ ದಿನ ದೂಡುತ್ತಿದ್ದಾರೆ.

ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಚುರುಕುಗೊಂಡಿದೆ. ರಾಜ್ಯ ಪೊಲೀಸ್ ತಂಡ, ವಾಯುಪಡೆ, ಭೂ ಸೇನೆ, ಭಾರತ- ಟಿಬೆಟ್ ಗಡಿ ಪೊಲೀಸ್ ಪಡೆಗಳು (ಐಟಿಬಿಪಿ) ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿವೆ.

ಕೇದಾರನಾಥ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಯಾತ್ರಾರ್ಥಿಗಳು ತಂಗಿದ್ದ 90 ಧರ್ಮಶಾಲೆಗಳು ಜಲಪ್ರಳಯದ ಹೊಡೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದು, ಸಾವಿರಾರು ಜನರು ಅಸುನೀಗಿರುವ ಸಾಧ್ಯತೆ ಇದೆ ಎಂದು ಉತ್ತರಾಖಂಡದ ವಿಪತ್ತು ನಿರ್ವಹಣಾ ಕೇಂದ್ರವು ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದೆ.

ಅಧಿಕೃತ ಮೂಲಗಳು ಸತ್ತವರ ಸಂಖ್ಯೆ 150 ಎಂದಿದ್ದರೂ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರು, ಗಾಯಾಳುಗಳ ಸಂಖ್ಯೆ ಸಾವಿರದ ಗಡಿ ದಾಟಿದೆ. ಇನ್ನೂ ಹಲವು ಸ್ಥಳಗಳು ನೀರಿನಲ್ಲಿ ಮುಳುಗಡೆಯಾಗಿರುವ ಕಾರಣ ಸಾವು- ನೋವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದಿದ್ದಾರೆ.

`ಕೇದಾರ- ಸರ್ವನಾಶ': `ಈ ಜಲಪ್ರಳಯ ಭೀಕರ ಸ್ವರೂಪದ್ದು, ಕೇದಾರನಾಥ ದೇವಾಲಯ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸರ್ವನಾಶವಾಗಿದೆ. ರಕ್ಷಣಾ ಕಾರ್ಯಕ್ಕಾಗಿ 2 ಹೆಲಿಕಾಪ್ಟರ್ ಕೇದಾರನಾಥಕ್ಕೆ ತೆರಳಿವೆ. ಸೇನೆಯು ತನ್ನ ಪರ್ವತ ವಿಪತ್ತು ಪಡೆಯನ್ನು ಅಲ್ಲಿಗೆ ರವಾನಿಸಿದೆ ಎಂದು ಉತ್ತರಾಖಂಡ ಪೊಲೀಸ್ ಮಹಾನಿರೀಕ್ಷಕ ಆರ್.ಎಸ್. ಮೀನಾ ತಿಳಿಸಿದ್ದಾರೆ. ಕೇದಾರನಾಥ, ಗೋವಿಂದಘಾಟ್ ಮತ್ತು ಹಿಮಕುಂಡ್ ಸಾಹೀಬ್ ಮಾರ್ಗಗಳಲ್ಲಿ ಸಿಲುಕಿದ್ದ 15 ಸಾವಿರ ಜನರನ್ನು ರಕ್ಷಿಸಲಾಗಿದ್ದು, ಇವರನ್ನು ಜೋಶಿಮಠದಲ್ಲಿರುವ ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

`ವಾಯುಪಡೆಯ 20ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳು ಈಗಾಗಲೇ ರಕ್ಷಣಾ ಕಾರ್ಯದಲ್ಲಿ ತೊಡಗಿವೆ' ಎಂದೂ ಹೇಳಿದ್ದಾರೆ. ಹೆಲಿಕಾಪ್ಟರ್ ಮೂಲಕ 20 ಸಾವಿರಕ್ಕೂ ಹೆಚ್ಚು ಆಹಾರ ಪೊಟ್ಟಣಗಳನ್ನು ಸಂಕಷ್ಟದಲ್ಲಿರುವ ಜನರಿಗೆ ತಲುಪಿಸಲಾಗಿದೆ. ಕನಿಷ್ಠ 50ಕಡೆಗಳಲ್ಲಿ ಭಾರಿ  ಭೂಕುಸಿತ ಉಂಟಾಗಿದೆ.

510ಕ್ಕೂ ಹೆಚ್ಚು ದೊಡ್ಡ ಮತ್ತು ಸಣ್ಣ ರಸ್ತೆಗಳು ಭಾಗಶಃ ಇಲ್ಲವೆ ಸಂಪೂರ್ಣ ಹಾನಿಗೊಂಡಿವೆ. ಗುಪ್ತಕಾಶಿ, ಘನಸಾಲಿಗಳ ಮಾರ್ಗ ಮಧ್ಯೆ ಸಿಕ್ಕಿಕೊಂಡಿದ್ದ ಸುಮಾರು 500 ಕಾರುಗಳನ್ನು ಹೊರತರಲಾಗಿದೆ ಎಂದು ವಿಪತ್ತು ನಿರ್ವಹಣಾ ಕೇಂದ್ರದ ಮೂಲಗಳು ಹೇಳಿವೆ. ಉತ್ತರಾಖಂಡದಲ್ಲಿ ಹಾನಿಯಾಗಿರುವ ಗ್ರಾಮೀಣ ಭಾಗದ ರಸ್ತೆಗಳ ದುರಸ್ತಿಗೆ ರೂ 340 ಕೋಟಿ ಅನುದಾನ ನೀಡುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ನವದೆಹಲಿಯಲ್ಲಿ ಹೇಳಿದ್ದಾರೆ.

ಹಿಮಾಚಲದಲ್ಲಿ 600 ಜನರ ರಕ್ಷಣೆ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ವಿವಿಧೆಡೆ ಸಂಕಷ್ಟಕ್ಕೆ ಸಿಲುಕಿದ್ದ 600 ಪ್ರವಾಸಿಗರು ಮತ್ತು ಇತರರನ್ನು ವಾಯುಪಡೆಯ ಎರಡು ಮತ್ತು ರಾಜ್ಯ ಸರ್ಕಾರದ ಒಂದು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ.

ಗುರುವಾರ ಬೆಳಿಗ್ಗೆ 6.30ಕ್ಕೆ ಕಾರ್ಯಾಚರಣೆಗೆ ಇಳಿದ ಹೆಲಿಕಾಪ್ಟರ್‌ಗಳು, ಕುಗ್ರಾಮಗಳು ಮತ್ತು ಮಾರ್ಗ ಮಧ್ಯೆ ಐದು ದಿನಗಳಿಂದ ಜೀವ ಭಯದಲ್ಲಿದ್ದವರನ್ನು ರಕ್ಷಿಸಿ, ರಾಂಪುರ್‌ಕ್ಕೆ ಸ್ಥಳಾಂತರಿಸಿವೆ.

">ಇನ್ನೂ 400 ಪ್ರವಾಸಿಗರು ಭೂಕುಸಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ವೀರಭದ್ರ ಸಿಂಗ್ ತಿಳಿಸಿದ್ದಾರೆ. ಬುಧವಾರ ಸಂಜೆಯ ಹೊತ್ತಿಗೆ 278 ಜನರನ್ನು ರಕ್ಷಿಸಲಾಗಿತ್ತು.

ಉತ್ತರ ಪ್ರದೇಶದಲ್ಲಿ ತಗ್ಗದ ಭೋರ್ಗರೆತ: ಉತ್ತರ ಪ್ರದೇಶದಲ್ಲಿ ನದಿಗಳ ಭೋರ್ಗರೆತ ತಗ್ಗಿಲ್ಲ. ಗಂಗಾ, ಯಮುನಾ, ಶಾರದಾ, ಘಾಘ್ರಾ, ರಾಪ್ತಿ, ಕೌನೊ ನದಿಗಳು ಇನ್ನೂ ಅಪಾಯ ಮಟ್ಟದಲ್ಲೇ ಹರಿಯುತ್ತಿವೆ. ಅಲಿಗಡದಲ್ಲಿ ಇಬ್ಬರು ಸಾವನ್ನಪ್ಪಿರುವ ವರದಿಯಾಗಿದೆ.

ಯಮುನಾ ನದಿಯ ಪ್ರವಾಹದಿಂದಾಗಿ ಶಾಮಲಿ ಜಿಲ್ಲೆಯಲ್ಲಿರುವ ಮವಿ ಸತ್ಪುಧಾ ಅಣೆಕಟ್ಟೆಯ ಎಡದಂಡೆ ಬುಧವಾರ ರಾತ್ರಿ ಬಿರುಕು ಬಿಟ್ಟಿದೆ. ಸ್ಥಳೀಯರ ಸಹಾಯದಿಂದ ಇದನ್ನು ದುರಸ್ತಿ ಮಾಡುವ ಕಾರ್ಯ ಭರದಿಂದ ಸಾಗಿದೆ. ಸಹಾರನಪುರ್ ನಗರ ಈಗಲೂ ಮುಳುಗಡೆ ಸ್ಥಿತಿಯಲ್ಲೇ ಇದ್ದು, ಸಹಾರನಪುರ್- ಅಂಬಾಲಾ ಮಧ್ಯೆ ರೈಲು ಸಂಚಾರ ವ್ಯತ್ಯಯವಾಗಿದೆ. ಬಿಜನೋರ್‌ನಲ್ಲಿ ಗಂಗಾ ನದಿಯ ಉಪನದಿಗಳು ತುಂಬಿ ಹರಿಯುತ್ತಿವೆ. ನೆರೆ ಪರಿಹಾರ ಕಾರ್ಯಗಳು ಚುರುಕಿನಿಂದ ಸಾಗಿವೆ.

ಪಂಜಾಬ್, ಹರಿಯಾಣ, ಛತ್ತೀಸಗಡಗಳಲ್ಲಿ ಹವಾಮಾನ ಸಹಜ ಸ್ಥಿತಿಯಲ್ಲಿದ್ದು, ಮಳೆಯಾದ ವರದಿ ಆಗಿಲ್ಲ. ಯಮುನಾನಗರ್ ಸಮೀಪದ ಯಮುನಾ ನದಿಯ ಹಥ್ನಿಕುಂಡ್ ಅಣೆಕಟ್ಟೆಯ ಒಳಹರಿವು ಬುಧವಾರಕ್ಕಿಂತ ಕಡಿಮೆ ಆಗಿದೆ. ಹರಿಯಾಣ ಕಂದಾಯ ಇಲಾಖೆಯು ಮಳೆ ಮತ್ತು ನೆರೆಯಿಂದ ಉಂಟಾದ ನಷ್ಟದ ಬಗ್ಗೆ ಅಂದಾಜು ಕಾರ್ಯ ಆರಂಭಿಸಿದೆ.

ತಗ್ಗಿದ ಯಮುನಾ ನದಿ ಆರ್ಭಟ: ದೆಹಲಿಯಲ್ಲಿ ಯಮುನಾ ನದಿ ಆರ್ಭಟ ಕೊಂಚ ತಗ್ಗಿದ್ದು, ಶಾಹದರಾ-ದೆಹಲಿ ಮಧ್ಯೆ ರೈಲು ಸಂಚಾರ ಮತ್ತೆ ಆರಂಭವಾಗಿದೆ. 145 ವರ್ಷಗಳಷ್ಟು ಹಳೆಯ ರೈಲ್ವೆ ಸೇತುವೆ ಮುಳುಗಡೆಯಾಗುವ ಭೀತಿ ಎದುರಾದ ಕಾರಣ ಬುಧವಾರ ಈ ಮಾರ್ಗದ ರೈಲು ಸಂಚಾರ ಸ್ಥಗಿತ ಮಾಡಲಾಗಿತ್ತು.

ಸುಪ್ರೀಂ ಕೋರ್ಟ್ ಸೂಚನೆ
ನಿರಾಶ್ರಿತರಾಗಿರುವ ಜನರ ರಕ್ಷಣೆಗೆ ಗರಿಷ್ಠ ಮಟ್ಟದಲ್ಲಿ ಶ್ರಮಿಸುವಂತೆ ಉತ್ತರಾಖಂಡ ಮತ್ತು ಕೇಂದ್ರ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.

ADVERTISEMENT

ರಕ್ಷಣಾ ಕಾರ್ಯಕ್ಕೆ ಅಗತ್ಯ ಸಂಖ್ಯೆಯಷ್ಟು ಸಿಬ್ಬಂದಿ ಮತ್ತು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲು ಮತ್ತು ಸಂತ್ರಸ್ಥರಿಗೆ ಆಹಾರ, ಕುಡಿಯುವ ನೀರು, ಔಷಧೋಪಚಾರ ಇನ್ನಿತರ ಅಗತ್ಯಗಳ ಪೂರೈಕೆಗೆ ಆದ್ಯತೆ ನೀಡುವಂತೆ ನ್ಯಾಯಮೂರ್ತಿಗಳಾದ ಎ.ಕೆ. ಪಟ್ನಾಯಿಕ್ ಮತ್ತು ರಂಜನ್ ಗೊಗೊಯಿ ಅವರನ್ನು ಒಳಗೊಂಡ ಪೀಠವು ಸೂಚಿಸಿದೆ.
ರಕ್ಷಣೆ ಮತ್ತು ಪುನರ್ವಸತಿ ಬಗ್ಗೆ ಕೈಗೊಂಡಿರುವ ಕಾರ್ಯಗಳ ಕುರಿತು ಇದೇ 25ಕ್ಕೆ ವರದಿ ಸಲ್ಲಿಸುವಂತೆಯೂ ಸೂಚಿಸಿದೆ.

ಉತ್ತರಾಖಂಡದಲ್ಲಿ ಮಳೆ ಮತ್ತು ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವವರ ರಕ್ಷಣೆಗೆ ಧಾವಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲ ಅಜಯ್ ಬನ್ಸಲ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಚಾರ್‌ಧಾಮ್ ಯಾತ್ರೆ 3 ವರ್ಷ ಬಂದ್
ಜಲಪ್ರಳಯದಿಂದ ಅಪಾರ ಹಾನಿಯಾಗಿರುವ ಕಾರಣ ಗಂಗೋತ್ರಿ, ಯಮುನೋತ್ರಿ, ಬದರಿನಾಥ ಮತ್ತು ಕೇದಾರನಾಥ ಯಾತ್ರಾ ಸ್ಥಳಗಳ `ಚಾರ್‌ಧಾಮ್ ಯಾತ್ರೆ'ಯನ್ನು ಮೂರು ವರ್ಷಗಳ ಕಾಲ ನಿಷೇಧಿಸಲಾಗಿದೆ.

ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಅಪಾರ ಹಾನಿಯಾಗಿದ್ದು, ಮಂದಿರಗಳಲ್ಲಿ ಕೆಸರು ತುಂಬಿಕೊಂಡಿದೆ. ಭಕ್ತರು ಸಾವನ್ನಪ್ಪಿದ್ದಾರೆ. ಯಾತ್ರೆಯ ಮಾರ್ಗಗಳಲ್ಲೂ ಅಪಾರ ಹಾನಿಯುಂಟಾಗಿದೆ. ದುರಸ್ತಿ ಕಾಮಗಾರಿ ಕೈಗೊಳ್ಳಬೇಕಿರುವ ಕಾರಣ ಮೂರು ವರ್ಷಗಳ ಕಾಲ `ಚಾರ್‌ಧಾಮ್ ಯಾತ್ರೆ' ಆಯೋಜಿಸಲು ಸಾಧ್ಯವಾಗುವುದಿಲ್ಲ ಎಂದು ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳ ಮುಖ್ಯ ಆಡಳಿತಾಧಿಕಾರಿ ಬಿ.ಡಿ. ಸಿಂಗ್ ತಿಳಿಸಿದ್ದಾರೆ.

`ಹಸಿವಿನ ಸಂಕಟ, ನಿರ್ದಯ ಸುಲಿಗೆ'
ಉತ್ತರಾಖಂಡದ ವಿವಿಧೆಡೆ ಅತಂತ್ರ ಸ್ಥಿತಿಯಲ್ಲಿರುವ ಯಾತ್ರಿಗಳು ಮತ್ತು ಸ್ಥಳೀಯರು ಕುಡಿಯುವ ನೀರು ಆಹಾರ ಪೂರೈಕೆ,  ವಿದ್ಯುತ್ ಸರಬರಾಜು ಇಲ್ಲದೆ ಪರಿತಪಿಸುತ್ತಿದ್ದಾರೆ.

`ಆಹಾರ, ಕುಡಿಯುವ ನೀರು, ಔಷಧಗಳ ಕೊರತೆ ತೀವ್ರವಾಗಿದೆ. ಅಲ್ಲಿನ ಸ್ಥಿತಿ ಶೋಚನೀಯ. ಕುಡಿಯುವ ನೀರು, ಚಿಪ್ಸ್ ಪೊಟ್ಟಣದ ಬೆಲೆ ವಿಪರೀತವಾಗಿದೆ. ಹೆಲಿಕಾಪ್ಟರ್‌ನಿಂದ ಎಸೆಯುತ್ತಿರುವ ಆಹಾರ ಪೊಟ್ಟಣಗಳನ್ನು ಹಿಡಿಯಲು ಸ್ಪರ್ಧೆ ಏರ್ಪಟ್ಟಿದೆ. ಬಹುತೇಕ ಪೊಟ್ಟಣಗಳು ನೀರು ಪಾಲಾಗುತ್ತಿವೆ' ಎಂದು ಸಂಕಷ್ಟದಿಂದ ಕುಟುಂಬದವರನ್ನು ಪಾರುಮಾಡಿಕೊಂಡು ಬಂದ ಉತ್ತರ ಪ್ರದೇಶದ ಬಸ್ತಿ ನಗರದ ಯಾತ್ರಿಯೊಬ್ಬರು ಹೇಳಿದ್ದಾರೆ.

`ಕುಟುಂಬದ ಐವರು ಸದಸ್ಯರನ್ನು ಡೆಹ್ರಾಡೂನ್‌ಗೆ ಕರೆತರಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಅಂತೂಇಂತೂ ಖಾಸಗಿ ಹೆಲಿಕಾಪ್ಟರ್ ನೆರವು ಪಡೆದು ಇಲ್ಲಿಗೆ ಬರುವಷ್ಟರಲ್ಲಿ 11 ಲಕ್ಷ ಕೈಬಿಟ್ಟಿತು. ಸಂಕಷ್ಟದಲ್ಲಿರುವ ಜನರನ್ನು ನಿರ್ದಯವಾಗಿ ಸುಲಿಗೆ ಮಾಡಲಾಗುತ್ತಿದೆ' ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.