ADVERTISEMENT

ವರದಕ್ಷಿಣೆ ಕಿರುಕುಳ: ಒಡಿಶಾ ಮಾಜಿ ಸಚಿವರಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 19:59 IST
Last Updated 2 ಏಪ್ರಿಲ್ 2013, 19:59 IST

ಬಾಲಸೋರ್/ಒಡಿಶಾ (ಪಿಟಿಐ): ವರದಕ್ಷಿಣೆಗಾಗಿ ಸೊಸೆಗೆ ಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ಒಡಿಶಾದ ಮಾಜಿ ಸಚಿವ ರಘುನಾಥ್ ಮೊಹಂತಿ ಹಾಗೂ ಅವರ ಪತ್ನಿಗೆ ಇಲ್ಲಿನ ನ್ಯಾಯಾಲಯ ಜಾಮೀನು ನೀಡಿದೆ.
ನ್ಯಾಯಾಧೀಶ ರಂಜನ್ ಕುಮಾರ್ ಸುತಾರ್ ಅವರು ತಲಾ ರೂ.10,000 ಭದ್ರತಾ ಠೇವಣಿ ಆಧಾರದಲ್ಲಿ ಮೊಹಂತಿ ದಂಪತಿಗೆ  ಜಾಮೀನು ನೀಡಿದ್ದಾರೆ.

ಕಳೆದ ಶುಕ್ರವಾರ ಪಶ್ಚಿಮಬಂಗಾಳದಲ್ಲಿ ರಘುನಾಥ್ ಹಾಗೂ ಅವರ ಪತ್ನಿಯನ್ನು ಬಂಧಿಸಲಾಗಿದ್ದು.ಕೋರ್ಟ್ ಅವರನ್ನು ಏ.2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಬಿಜೆಡಿ ಮುಖಂಡರಾಗಿರುವ ಮೊಹಂತಿ ಅವರ  ಸೊಸೆ ವರ್ಷಾ ಸ್ವೋನಿ ಚೌದರಿ ಅವರು ಅತ್ತೆ, ಮಾವ ಮತ್ತು ಪತಿ ವಿರುದ್ಧ ಮಾರ್ಚ್ 14ರಂದು ವರದಕ್ಷಿಣೆ ಕಿರುಕುಳಕ್ಕೆ ಸಂಬಂಧ  ದೂರು ದಾಖಲಿಸಿದ್ದರು.

ವರದಕ್ಷಿಣೆಯಾಗಿ ರೂ. 25 ಲಕ್ಷ ನಗದು, ಐಷಾರಾಮಿ ವಾಹನ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು  ನೀಡುವಂತೆ ಮೊಹಂತಿ ಅವರ ಕುಟುಂಬ ತಮಗೆ ಕಿರುಕುಳ ನೀಡಿತ್ತು. ಅಲ್ಲದೇ ತಮ್ಮ ಪತಿಗೆ  ವಿವಾಹೇತರ ಸಂಬಂಧವೂ ಇದೆ ಎಂದು ವರ್ಷಾ ಅವರು ದೂರಿನಲ್ಲಿ ಆರೋಪಿಸಿದ್ದರು.

ವರ್ಷಾ ತಮ್ಮ ದೂರಿನಲ್ಲಿ ಮೊಹಂತಿ ದಂಪತಿ, ಅವರ ಪುತ್ರಿ ರೂಪಶ್ರೀ ಹಾಗೂ ಅಳಿಯ ಶುಭೆಂದು ಮಧುಲಾ ಅವರ ವಿರುದ್ಧವೂ ದೂರು ದಾಖಲಿಸಿದ್ದಾರೆ. ಮೊಹಂತಿ ಅವರ ಪುತ್ರಿ ಮತ್ತು ಅಳಿಯ ಇನ್ನೂ ನಾಪತ್ತೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.